ಮಹಾರಾಷ್ಟ್ರದಲ್ಲಿ ಪ್ರಧಾನಿ ಮೋದಿ: ನಾಗ್ಪುರ-ಬಿಲಾಸ್ಪುರ್ ವಂದೇ ಭಾರತ್ ಎಕ್ಸ್‌ಪ್ರೆಸ್'ಗೆ ಚಾಲನೆ
ಮಹಾರಾಷ್ಟ್ರ ರಾಜ್ಯಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಭೇಟಿ ನೀಡಿದ್ದು, ನಾಗ್ಪುರ ಮತ್ತು ಛತ್ತೀಸ್‌ಗಢದ ಬಿಲಾಸ್‌ಪುರ ನಡುವೆ ಸಂಚರಿಸಲಿರುವ ಆರನೇ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಭಾನುವಾರ ಚಾಲನೆ ನೀಡಿದರು.

ನವದೆಹಲಿ: ಮಹಾರಾಷ್ಟ್ರ ರಾಜ್ಯಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಭೇಟಿ ನೀಡಿದ್ದು, ನಾಗ್ಪುರ ಮತ್ತು ಛತ್ತೀಸ್‌ಗಢದ ಬಿಲಾಸ್‌ಪುರ ನಡುವೆ ಸಂಚರಿಸಲಿರುವ ಆರನೇ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಭಾನುವಾರ ಚಾಲನೆ ನೀಡಿದರು.
ಮಹಾರಾಷ್ಟ್ರ ರಾಜ್ಯ ಭೇಟಿ ನೀಡಿದ ಮೋದಿಯವರನ್ನು ಮಹಾರಾಷ್ಟ್ರ ರಾಜ್ಯಪಾಲ ಕೊಶಿಯಾರಿ, ಕೇಂದ್ರ ಸಚಿವ ನಿತಿನ್ ಗಡ್ಕರಿ, ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪಮುಖ್ಯಮಂತ್ರಿ ದೇವೇಂದ್ರ ಫಡಣಾವೀಸ್ ಆತ್ಮೀಯವಾಗಿ ಬರಮಾಡಿಕೊಂಡರು.
ನಂತರ ಮೋದಿಯವರು ನಾಗ್ಪುರ ಮತ್ತು ಛತ್ತೀಸ್‌ಗಢದ ಬಿಲಾಸ್‌ಪುರ ನಡುವೆ ಸಂಚರಿಸಲಿರುವ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಚಾಲನೆ ನೀಡಿದರು. ರೈಲಿಗೆ ಚಾಲನೆ ನೀಡಿದ ಬಳಿಕ ಮೋದಿಯವರು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರತ್ತ ಕೈ ಬೀಸಿದರು. ಇದೇ ವೇಳೆ ಪ್ರಧಾನಮಂತ್ರಿಗಳು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೂ ಅಡಿಗಲ್ಲು ಹಾಕಿದರು.
ರೈಲಿಗೆ ಚಾಲನೆ ನೀಡಿದ ಬಳಿಕ ಮೋದಿಯವರು, ನಂತರ ಟಿಕೆಟ್ ಖರೀದಿಸಿ ವಿದ್ಯಾರ್ಥಿಗಳೊಂದಿಗೆ ಪ್ರಯಾಣ ಮಾಡಿದರು. ಈ ವೇಳೆ ವಿದ್ಯಾರ್ಥಿಗಳೊಂದಿಗೆ ಮಾತುಕತೆಯನ್ನೂ ನಡೆಸಿದರು.
ಮೋದಿಯವರು ಚಾಲನೆ ನೀಡಿರುವ ಈ ರೈಲು ಬೆಳಗ್ಗೆ 6.45ಕ್ಕೆ ಬಿಲಾಸ್‌ಪುರದಿಂದ ಹೊರಟು ಮಧ್ಯಾಹ್ನ 12.15ಕ್ಕೆ ನಾಗ್ಪುರ ತಲುಪಲಿದೆ. ಅದೇ ರೀತಿ ನಾಗ್ಪುರದಿಂದ ಮಧ್ಯಾಹ್ನ 2 ಗಂಟೆಗೆ ಹೊರಟು ರಾತ್ರಿ 7.35ಕ್ಕೆ ಬಿಲಾಸ್ಪುರ ತಲುಪಲಿದೆ.
ಸೂಪರ್‌ಫಾಸ್ಟ್ ರೈಲುಗಳು ನಾಗಪುರವನ್ನು ತಲುಪಲು ಸುಮಾರು ಏಳು ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಆದರೆ, ವಂದೇ ಭಾರತ್ ರೈಲು ಸುಮಾರು ಐದೂವರೆ ಗಂಟೆಗಳಲ್ಲಿ ತಲುಪಲಿದೆ.
ವಂದೇ ಭಾರತ್ ರೈಲು ಈ ವರ್ಷದ ಅಕ್ಟೋಬರ್‌ನಲ್ಲಿ ಮುಂಬೈ-ಅಹಮದಾಬಾದ್ ಮಾರ್ಗದಲ್ಲಿ ಮೊದಲ ಬಾರಿಗೆ ಉದ್ಘಾಟನೆಗೊಂಡಿತು. ಮುಂದಿನ ವರ್ಷ ಆಗಸ್ಟ್ ವೇಳೆಗೆ 75 ವಂದೇ ಭಾರತ್ ರೈಲುಗಳನ್ನು ಉದ್ಘಾಟಿಸುವ ಗುರಿಯನ್ನು ರೈಲ್ವೇ ಹೊಂದಿದೆ.
ಸೆಮಿ-ಹೈ-ಸ್ಪೀಡ್ ವಂದೇ ಭಾರತ್ ರೈಲಿನ ಎಲ್ಲಾ ಕೋಚ್‌ಗಳು ಸ್ವಯಂಚಾಲಿತ ಬಾಗಿಲುಗಳು, ಜಿಪಿಎಸ್-ಆಧಾರಿತ ಆಡಿಯೊ-ವಿಶುವಲ್ ಪ್ಯಾಸೆಂಜರ್ ಮಾಹಿತಿ ವ್ಯವಸ್ಥೆ, ಮನರಂಜನಾ ಉದ್ದೇಶಗಳಿಗಾಗಿ ಆನ್‌ಬೋರ್ಡ್ ಹಾಟ್‌ಸ್ಪಾಟ್ ವೈ-ಫೈ ಮತ್ತು ಆರಾಮದಾಯಕ ಆಸನಗಳನ್ನು ಹೊಂದಿವೆ. ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಫೆಬ್ರವರಿ 15, 2019 ರಂದು ನವದೆಹಲಿ-ಕಾನ್ಪುರ-ಅಲಹಾಬಾದ್-ವಾರಣಾಸಿ ಮಾರ್ಗದಲ್ಲಿ ಚಾಲನೆ ನೀಡಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


