ದೇಶ

ಭಾರತ-ಪಾಕ್ ಪಂದ್ಯ ವೀಕ್ಷಿಸುವ ವಿದ್ಯಾರ್ಥಿಗಳಿಗೆ ₹ 5,000 ದಂಡ: ಶ್ರೀನಗರ ಕಾಲೇಜು ಆದೇಶ

ಭಾನುವಾರ ನಡೆಯಲಿರುವ ಭಾರತ-ಪಾಕಿಸ್ತಾನ ಏಷ್ಯಾಕಪ್ ಕ್ರಿಕೆಟ್ ಪಂದ್ಯವನ್ನು ಗುಂಪು ಕಟ್ಟಿಕೊಂಡು ನೋಡದಂತೆ ಮತ್ತು ಅದಕ್ಕೆ ಸಂಬಂಧಿಸಿದ ಯಾವುದೇ ವಿಚಾರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡದಂತೆ ಶ್ರೀನಗರದ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ (ಎನ್ಐಟಿ) ವಿದ್ಯಾರ್ಥಿಗಳಿಗೆ ತಿಳಿಸಿದೆ.

ಭಾರತ-ಪಾಕ್ ಪಂದ್ಯ ವೀಕ್ಷಿಸುವ ವಿದ್ಯಾರ್ಥಿಗಳಿಗೆ ₹ 5,000 ದಂಡ: ಶ್ರೀನಗರ ಕಾಲೇಜು ಆದೇಶ
ಎನ್‌ಐಟಿ ಕ್ಯಾಂಪಸ್
Published On :

ಶ್ರೀನಗರ: ಭಾನುವಾರ ನಡೆಯಲಿರುವ ಭಾರತ-ಪಾಕಿಸ್ತಾನ ಏಷ್ಯಾಕಪ್ ಕ್ರಿಕೆಟ್ ಪಂದ್ಯವನ್ನು ಗುಂಪು ಕಟ್ಟಿಕೊಂಡು ನೋಡದಂತೆ ಮತ್ತು ಅದಕ್ಕೆ ಸಂಬಂಧಿಸಿದ ಯಾವುದೇ ವಿಚಾರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡದಂತೆ ಶ್ರೀನಗರದ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ (ಎನ್ಐಟಿ) ವಿದ್ಯಾರ್ಥಿಗಳಿಗೆ ತಿಳಿಸಿದೆ.

ವಿದ್ಯಾರ್ಥಿಗಳ ಕಲ್ಯಾಣ ವಿಭಾಗದ ಡೀನ್ ಹೊರಡಿಸಿದ ನೋಟಿಸ್‌ನಲ್ಲಿ, ಪಂದ್ಯದ ಸಮಯದಲ್ಲಿ ವಿದ್ಯಾರ್ಥಿಗಳಿಗೆ ನಿಗದಿಪಡಿಸಿದ ಕೊಠಡಿಗಳಲ್ಲಿ ಉಳಿಯುವಂತೆ ಸಂಸ್ಥೆಯ ಆಡಳಿತ ಮಂಡಳಿ ತಿಳಿಸಿದೆ.

'ದುಬೈನ ಅಂತರರಾಷ್ಟ್ರೀಯ ಸ್ಟೇಡಿಯಂನಲ್ಲಿ ವಿವಿಧ ರಾಷ್ಟ್ರಗಳನ್ನು ಒಳಗೊಂಡ ಕ್ರಿಕೆಟ್ ಟೂರ್ನಿ ನಡೆಯುತ್ತಿದೆ ಎಂಬುದುನ್ನು ವಿದ್ಯಾರ್ಥಿಗಳು ತಿಳಿದುಕೊಂಡಿದ್ದಾರೆ. ಈ ಮೂಲಕ ವಿದ್ಯಾರ್ಥಿಗಳಿಗೆ ಕ್ರೀಡೆಯನ್ನು ಕೇವಲ  ಒಂದು ಆಟದಂತೆ ತೆಗೆದುಕೊಳ್ಳುವಂತೆ ಮತ್ತು ಸಂಸ್ಥೆ ಅಥವಾ ಹಾಸ್ಟೆಲ್‌ನಲ್ಲಿ ಯಾವುದೇ ರೀತಿಯ ಅಶಿಸ್ತು ಸೃಷ್ಟಿಸದಂತೆ ಸೂಚಿಸಲಾಗಿದೆ' ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಭಾನುವಾರ ನಡೆಯಲಿರುವ ಪಂದ್ಯದ ಸಮಯದಲ್ಲಿ ವಿದ್ಯಾರ್ಥಿಗಳು ನಿಗದಿಪಡಿಸಿದ ತಮ್ಮ ಕೊಠಡಿಗಳಲ್ಲಿ ಉಳಿಯಲು ಮತ್ತು ಇತರ ವಿದ್ಯಾರ್ಥಿಗಳು ಕೊಠಡಿಗಳಿಗೆ ಪ್ರವೇಶಿಸದಂತೆ ಹಾಗೂ ಗುಂಪು ಕಟ್ಟಿಕೊಂಡು ಪಂದ್ಯವನ್ನು ವೀಕ್ಷಿಸಲು ಅನುಮತಿ ನೀಡದಂತೆ ನಿರ್ದೇಶಿಸಲಾಗಿದೆ ಎಂದು ಅದು ಹೇಳಿದೆ.

'ನಿಗದಿಪಡಿಸಿದ ನಿರ್ದಿಷ್ಟ ಕೋಣೆಯಲ್ಲಿಯೂ ವಿದ್ಯಾರ್ಥಿಗಳು ಗುಂಪು ಕಟ್ಟಿಕೊಂಡು ಪಂದ್ಯವನ್ನು ವೀಕ್ಷಿಸಿದರೆ, ಆ ನಿರ್ದಿಷ್ಟ ಕೊಠಡಿಯಲ್ಲಿನ ವಿದ್ಯಾರ್ಥಿಗಳನ್ನು ಸಂಸ್ಥೆಯ ಹಾಸ್ಟೆಲ್ ವಸತಿಯಿಂದ ಡಿಬಾರ್ ಮಾಡಲಾಗುತ್ತದೆ. ಪಂದ್ಯ ವೀಕ್ಷಣೆಯಲ್ಲಿ ತೊಡಗಿದ್ದ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಕನಿಷ್ಠ ₹ 5,000 ದಂಡ ವಿಧಿಸಲಾಗುತ್ತದೆ' ಎನ್ಐಟಿ ಹೇಳಿದೆ.

ಪಂದ್ಯಕ್ಕೆ ಸಂಬಂಧಿಸಿದ ಯಾವುದೇ ವಿಚಾರಗಳನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪೋಸ್ಟ್ ಮಾಡದಂತೆ ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ. ಅಲ್ಲದೆ, ಪಂದ್ಯದ ಸಮಯದಲ್ಲಿ ಅಥವಾ ನಂತರ ಹಾಸ್ಟೆಲ್ ಕೊಠಡಿಗಳಿಂದ ಹೊರಬರದಂತೆ ಸೂಚಿಸಲಾಗಿದೆ.

2016 ರಲ್ಲಿ ಟಿ-20 ವಿಶ್ವಕಪ್ ಸೆಮಿಫೈನಲ್‌ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ ಸೋತ ನಂತರ ಹೊರರಾಜ್ಯ ಮತ್ತು ಸ್ಥಳೀಯ ವಿದ್ಯಾರ್ಥಿಗಳ ನಡುವೆ ಇನ್‌ಸ್ಟಿಟ್ಯೂಟ್‌ನಲ್ಲಿ ಘರ್ಷಣೆಗಳು ಸಂಭವಿಸಿದವು. ಇದರಿಂದ ಎನ್‌ಐಟಿಯನ್ನು ಹಲವು ದಿನಗಳವರೆಗೆ ಮುಚ್ಚಲಾಗಿತ್ತು. ಹೀಗಾಗಿ ಸಂಸ್ಥೆ ಈ ರೀತಿಯ ಕ್ರಮ ಕೈಗೊಂಡಿದೆ ಎನ್ನಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.