ಮಹಿಳೆ ಮೇಲೆ ಹಲ್ಲೆ ನಡೆಸಿ ಜೈಲು ಸೇರಿರುವ ಬಿಜೆಪಿ ಯುವ ನಾಯಕ ಶ್ರೀಕಾಂತ್ ತ್ಯಾಗಿ ಜಾಮೀನು ಅರ್ಜಿ ತಿರಸ್ಕಾರ
ಉತ್ತರ ಪ್ರದೇಶದ ನೋಯ್ಡಾದ ಸೂರಜ್‌ಪುರ ನ್ಯಾಯಾಲಯವು ಸ್ವಯಂ ಘೋಷಿತ ಬಿಜೆಪಿ ಯುವ ನಾಯಕ ಶ್ರೀಕಾಂತ್ ತ್ಯಾಗಿ ಅವರ ಜಾಮೀನು ಅರ್ಜಿಯನ್ನು ಗುರುವಾರ ತಿರಸ್ಕರಿಸಿದೆ.

ನೋಯ್ಡಾ: ಉತ್ತರ ಪ್ರದೇಶದ ನೋಯ್ಡಾದ ಸೂರಜ್‌ಪುರ ನ್ಯಾಯಾಲಯವು ಸ್ವಯಂ ಘೋಷಿತ ಬಿಜೆಪಿ ಯುವ ನಾಯಕ ಶ್ರೀಕಾಂತ್ ತ್ಯಾಗಿ ಅವರ ಜಾಮೀನು ಅರ್ಜಿಯನ್ನು ಗುರುವಾರ ತಿರಸ್ಕರಿಸಿದೆ.
ಮಹಿಳೆ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 354 ರ ಅಡಿಯಲ್ಲಿ ಸಲ್ಲಿಸಲಾದ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಐಪಿಸಿ ಸೆಕ್ಷನ್ 420, 419, 482ರ ಅಡಿಯಲ್ಲಿ ದಾಖಲಾಗಿರುವ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಆಗಸ್ಟ್ 16 ರಂದು ವಿಚಾರಣೆ ನಡೆಸಲಿದೆ.
ನೋಯ್ಡಾ ಸೆಕ್ಟರ್ 93 ಬಿ ನಲ್ಲಿರುವ ಗ್ರ್ಯಾಂಡ್ ಓಮ್ಯಾಕ್ಸ್ ಆವರಣದಲ್ಲಿ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಶ್ರೀಕಾಂತ್ ತ್ಯಾಗಿಯನ್ನು ಪೊಲೀಸರು ಬಂಧಿಸಿದ್ದಾರೆ. ತ್ಯಾಗಿ ಅವರು ಕೆಲವು ಸಸಿಗಳನ್ನು ನೆಡಲು ಬಯಸಿದ್ದರು. ಆದರೆ, ನಿಯಮಗಳ ಉಲ್ಲಂಘನೆಯನ್ನು ಉಲ್ಲೇಖಿಸಿ ಮಹಿಳೆ ಅದನ್ನು ವಿರೋಧಿಸಿದರು. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿತ್ತು.
ಘಟನೆಯ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ತ್ಯಾಗಿ ಮಹಿಳೆಯ ಮೇಲೆ ದೌರ್ಜನ್ಯ ಎಸಗಿದ್ದಾರೆ ಎನ್ನಲಾಗಿತ್ತು. ಅದಾದ ಕೆಲವು ದಿನಗಳ ನಂತರ, ತ್ಯಾಗಿ ಅವರ ಬೆಂಬಲಿಗರು ವಸತಿ ಸಂಕೀರ್ಣಕ್ಕೆ ತೆರಳಿ, ಮಹಿಳೆ ವಿರುದ್ಧ ಘೋಷಣೆಗಳನ್ನು ಕೂಗಿದ್ದರು ಮತ್ತು ಮಹಿಳೆಯನ್ನು ನಿಂದಿಸಿದ್ದರು.
ತಲೆಮರೆಸಿಕೊಂಡಿದ್ದ ತ್ಯಾಗಿಗಾಗಿ 12 ಪೊಲೀಸ್ ತಂಡಗಳು ಮತ್ತು ಉತ್ತರ ಪ್ರದೇಶ ಎಸ್‌ಟಿಎಫ್ ಮೂರು ರಾಜ್ಯಗಳಲ್ಲಿ ಹುಡುಕಾಟ ನಡೆಸಿತ್ತು. ಬಳಿಕ ಮೀರತ್‌ನಲ್ಲಿ ಮಂಗಳವಾರ ಆತನನ್ನು ಮತ್ತು ಆತನ ಮೂವರು ಸಹಚರರನ್ನು ಬಂಧಿಸಿದ್ದರು.
ಪೊಲೀಸ್ ಸಿಬ್ಬಂದಿಯೊಂದಿಗೆ ನೋಯ್ಡಾದ ಸೆಕ್ಟರ್ -93 ಬಿ ನಲ್ಲಿರುವ ಗ್ರ್ಯಾಂಡ್ ಓಮ್ಯಾಕ್ಸ್ ಸೊಸೈಟಿಯನ್ನು ತಲುಪಿದ ಅಧಿಕಾರಿಗಳು, ಶ್ರೀಕಾಂತ್ ತ್ಯಾಗಿ ಅವರು ಅಕ್ರಮವಾಗಿ ನಿರ್ಮಿಸಿದ್ದ ಕಟ್ಟಡಗಳನ್ನು ಬುಲ್ಡೋಜರ್ ಮೂಲಕ ನೆಲಸಮಗೊಳಿಸಲಾಗಿತ್ತು. ತಮ್ಮ ವಾಹನದ ಮೇಲಿರುವ ವಿವಿಐಪಿ ಸ್ಟಿಕ್ಕರ್ ಅನ್ನು ಎಸ್‌ಪಿ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಅವರು ನೀಡಿದ್ದರು ಎಂದು ತ್ಯಾಗಿ ಪೊಲೀಸರಿಗೆ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


