ಜಯಲಲಿತಾ ಸಮಾಧಿ ಸ್ಥಳಕ್ಕೆ 'ಚಿನ್ನಮ್ಮ' ಭೇಟಿ: ತಮಿಳುನಾಡು ರಾಜಕೀಯಕ್ಕೆ ಶಶಿಕಲಾ "ಮರು ಪ್ರವೇಶ" ಸಾಧ್ಯತೆ!
ತಮಿಳುನಾಡು ಮಾಜಿ ಸಿಎಂ ದಿವಂಗತ ಜಯಲಲಿತಾ ಅವರ ಸಮಾಧಿ ಸ್ಥಳಕ್ಕೆ ವಿಕೆ ಶಶಿಕಲಾ ಭೇಟಿ ನೀಡುವ ಮೂಲಕ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದು, ಚಿನ್ನಮ್ಮ ತಮಿಳುನಾಡು ರಾಜಕೀಯಕ್ಕೆ "ಮರು ಪ್ರವೇಶ" ಮಾಡುವ ಕುರಿತು ಘೋಷಣೆ ಹೊರಡಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಚೆನ್ನೈ: ತಮಿಳುನಾಡು ಮಾಜಿ ಸಿಎಂ ದಿವಂಗತ ಜಯಲಲಿತಾ ಅವರ ಸಮಾಧಿ ಸ್ಥಳಕ್ಕೆ ವಿಕೆ ಶಶಿಕಲಾ ಭೇಟಿ ನೀಡುವ ಮೂಲಕ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದು, ಚಿನ್ನಮ್ಮ ತಮಿಳುನಾಡು ರಾಜಕೀಯಕ್ಕೆ "ಮರು ಪ್ರವೇಶ" ಮಾಡುವ ಕುರಿತು ಘೋಷಣೆ ಹೊರಡಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಹೌದು.. ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜಯಲಲಿತಾ ಅವರ ಆಪ್ತೆಯಾಗಿದ್ದ ವಿ.ಕೆ. ಶಶಿಕಲಾ ಮತ್ತೆ ಸಕ್ರಿಯ ರಾಜಕಾರಣ ಮರು ಪ್ರವೇಶಿಸಲು ಸಿದ್ಧತೆ ನಡೆಸಿದ್ದಾರೆ. ಇದರ ಭಾಗವಾಗಿ, ಶನಿವಾರ ಜಯಲಲಿತಾ ಅವರ ಸಮಾಧಿ ಸ್ಥಳಕ್ಕೆ ತೆರಳಿ ಪೂಜೆ ಸಲ್ಲಿಸಿ ಅಲ್ಲಿಂದ ತಮ್ಮ ರಾಜಕೀಯ ಮರು ಪ್ರವೇಶ ಘೋಷಿಸಲಿದ್ದಾರೆ ಎಂಬ ಮಾತುಗಳು ದಟ್ಟವಾಗಿ ಕೇಳಿಬರುತ್ತಿವೆ.
ಅಣ್ಣಾ ಡಿಎಂಕೆ ಪಕ್ಷ ಸ್ಥಾಪನೆಗೊಂಡು ನಾಳೆಗೆ (ಅಕ್ಟೋಬರ್ 17 ಕ್ಕೆ) 50 ವರ್ಷ ತುಂಬಲಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ನಾಯಕರು, ಕಾರ್ಯಕರ್ತರು ರಾಜ್ಯಾದ್ಯಂತ ಸಂಸ್ಥಾಪನಾ ದಿನ ಆಚರಣೆಗೆ ಸಜ್ಜುಗೊಳ್ಳುತ್ತಿದ್ದಾರೆ. ಈ ಸಂದರ್ಭವನ್ನು ಚಿನ್ನಮ್ಮ ತಮಗೆ ಅನುಕೂಲವಾಗುವ ರೀತಿಯಲ್ಲಿ ಪರಿವರ್ತಿಸಿಕೊಳ್ಳಲು ಬಯಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕಾಗಿ ಅವರು ಇಂದು ತಮ್ಮ ಅಪಾರ ಬೆಂಬಲಿಗರೊಂದಿಗೆ ಸೇರಿ ಮರೀನಾ ಬೀಚ್ ನಲ್ಲಿರುವ ಜಯಲಲಿತಾ ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಪುಷ್ಪನಮನ ಸಲ್ಲಿಸಿದರು. ಈ ವೇಳೆ ಜಯಲಲಿತಾರನ್ನು ನೆನೆದು ಶಶಿಕಲಾ ಭಾವುಕರಾದರು.
ಶಶಿಕಲಾ ಅವರ ಆಪ್ತ ಮೂಲಗಳ ಪ್ರಕಾರ ಶಶಿಕಲಾ ಅವರು ಇಂದು ತಮ್ಮ ರಾಜಕೀಯ ಮರು ಪ್ರವೇಶದ ಕುರಿತು ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಗೊಂಡ ನಂತರ ಶಶಿಕಲಾ ರಾಜಕೀಯದಿಂದ ದೂರ ಉಳಿದಿದ್ದಾರೆ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಅಣ್ಣಾ ಡಿಎಂಕೆ ಸೋಲಿನ ನಂತರ ಮತ್ತೆ ರಾಜಕೀಯ ತಂತ್ರಗಾರಿಕೆ ಚುರುಕುಗೊಂಡಿದೆ. ಪಕ್ಷದ ಕಾರ್ಯಕರ್ತರ ಮನ ಗೆಲ್ಲಲು ಸಿದ್ದತೆ ನಡೆಸುತ್ತಿದ್ದಾರೆ. "ನಮದು ಎಂಜಿಆರ್" ಪತ್ರಿಕೆ ಮೂಲಕ ಶಶಿಕಲಾ ನಿತ್ಯ ಜಾಹೀರಾತು ನೀಡುತ್ತಿದ್ದಾರೆ. "ನಾನು ಬರುತ್ತಿದ್ದೇನೆ" ಎಂಬ ಸಂದೇಶ ರವಾನಿಸಿದ್ದಾರೆ. ಅಣ್ಣಾ ಡಿಎಂಕೆ ಪಕ್ಷ ಎಲ್ಲರಿಗೂ ಸೇರಿದ್ದು, ಇದರಲ್ಲಿ ಎಲ್ಲರೂ ಸಮಾನರು ಎಂದು ಒತ್ತಿ ಹೇಳಿ.. ಪಕ್ಷದ ನಾಯಕತ್ವ ವಹಿಸುವವರು ತಾಯಿಗೆ ಸಮಾನ, ಅವರು ಕಾರ್ಯಕರ್ತರನ್ನು ಮಕ್ಕಳಂತೆ ನೋಡಿಕೊಳ್ಳಬೇಕಾದ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


