ದೇಶದ ಭದ್ರತೆಗೆ ವಾಯುಪಡೆ ಶಕ್ತಿಯ ಸದ್ಭಳಕೆ ನನ್ನ ಮೊದಲ ಆದ್ಯತೆ: ನೂತನ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ ಆರ್ ಚೌಧರಿ
ವಾಯುಪಡೆಯ ಶಕ್ತಿಯನ್ನು ಸರಿಯಾಗಿ ಮತ್ತು ಸೂಕ್ತ ಸಮಯಕ್ಕೆ ಸದ್ಭಳಕೆ ಮಾಡಿಕೊಂಡು ದೇಶದ ಸುರಕ್ಷತೆ ತಮ್ಮ ಮೊದಲ ಆದ್ಯತೆ ಎಂದು ಭಾರತೀಯ ವಾಯುಪಡೆಯ ನೂತನ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ ಆರ್ ಚೌಧರಿ ಹೇಳಿದ್ದಾರೆ.

ನವದೆಹಲಿ: ವಾಯುಪಡೆಯ ಶಕ್ತಿಯನ್ನು ಸರಿಯಾಗಿ ಮತ್ತು ಸೂಕ್ತ ಸಮಯಕ್ಕೆ ಸದ್ಭಳಕೆ ಮಾಡಿಕೊಂಡು ದೇಶದ ಸುರಕ್ಷತೆ ತಮ್ಮ ಮೊದಲ ಆದ್ಯತೆ ಎಂದು ಭಾರತೀಯ ವಾಯುಪಡೆಯ ನೂತನ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ ಆರ್ ಚೌಧರಿ ಹೇಳಿದ್ದಾರೆ.
ಎಎನ್ ಐ ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿರುವ ಅವರು, ದೇಶದ ಸುರಕ್ಷತೆ ತಮ್ಮ ಮೊದಲ ಆದ್ಯತೆಯಾದರೆ, ಭವಿಷ್ಯದಲ್ಲಿ ಯುದ್ಧಗಳಲ್ಲಿ ಸವಾಲುಗಳನ್ನು ಎದುರಿಸಲು ನಮ್ಮ ಸಿಬ್ಬಂದಿಗೆ ತರಬೇತಿ, ಉತ್ತೇಜನ ಮತ್ತು ಎಲ್ಲಾ ತಂತ್ರಜ್ಞಾನ, ಸಾಧನಗಳನ್ನು ಬಳಸುವುದು ಎರಡನೇ ಆದ್ಯತೆಯಾಗಿದೆ ಎಂದಿದ್ದಾರೆ.
ಮುಂದೆ, ಎಲ್ಲ ರೀತಿಯಲ್ಲೂ ನಮ್ಮನ್ನು ಸ್ವಾವಲಂಬಿಗಳನ್ನಾಗಿ ಮಾಡುವ 'ಆತ್ಮನಿರ್ಭರ'ದ ಕಡೆಗೆ ದೈತ್ಯ ಹೆಜ್ಜೆಗಳನ್ನು ಇಡುವುದು ಮುಂದಿನ ಆದ್ಯತೆಯಾಗಿದೆ ಎಂದು ಕೂಡ ಹೇಳಿದ್ದಾರೆ. ಭಾರತೀಯ ವಾಯುಪಡೆಯ ಮುಖ್ಯಸ್ಥರಾಗಿ ಏರ್ ಚೀಫ್ ಮಾರ್ಷಲ್ ಆರ್ ಕೆ ಎಸ್ ಬದೌರಿಯಾ ಅವರು ನಿವೃತ್ತಿಯಾದ ಹಿನ್ನೆಲೆಯಲ್ಲಿ ನಿನ್ನೆ ವಾಯುಪಡೆಯ ನೂತನ ಮುಖ್ಯಸ್ಥರಾಗಿ ಏರ್ ಚೀಫ್ ಮಾರ್ಷಲ್ ವಿ ಆರ್ ಚೌಧರಿ ಅಧಿಕಾರ ವಹಿಸಿಕೊಂಡಿದ್ದಾರೆ.
ವಾಯುಪಡೆಯ ಯೋಧರಲ್ಲಿ ಸಾಕಷ್ಟು ಸಾಮರ್ಥ್ಯವಿದೆ, ಭವಿಷ್ಯದ ಯುದ್ಧಗಳಿಗೆ ತಯಾರಾಗಲು ನಾವು ಇನ್ನಷ್ಟು ಕಲಿಯುವ ಸಾಮರ್ಥ್ಯವನ್ನು ಹೊಂದಿದ್ದೇವೆ. ಗಡಿಗಳಲ್ಲಿ ಪರಿಸ್ಥಿತಿಯನ್ನು ನಿರ್ವಹಿಸುವಲ್ಲಿ ಐಎಎಫ್ ಪಾತ್ರದ ಬಗ್ಗೆ ಮತ್ತು ಅದು ಹೇಗೆ ಭವಿಷ್ಯದ ಸವಾಲುಗಳನ್ನು ಎದುರಿಸಲು ಸಾಧ್ಯ ಎಂದು ಅವರು ವಿವರಿಸಿದರು.
ಸರಿಯಾದ ತರಬೇತಿ, ಈಗಿರುವ ಪರಿಕರಗಳ ಪರಿಶೋಧನೆ ಮತ್ತು ಭವಿಷ್ಯದಲ್ಲಿ ನಾವು ಏನನ್ನು ಪಡೆಯುತ್ತೇವೆ ಅವುಗಳ ಸರಿಯಾದ ಸದ್ಭಳಕೆ ಮತ್ತು ಮಾನವ ಶಕ್ತಿಗಳ ಬಳಕೆಯನ್ನು ಮಾಡಬೇಕಾಗುತ್ತದೆ ಎಂದಿದ್ದಾರೆ.
ಮೇಲ್ಮೈಯಿಂದ ವಾಯು ಮಾರ್ಗದರ್ಶಿ ಶಸ್ತ್ರಾಸ್ತ್ರಗಳು ಮತ್ತು ಸಂಪೂರ್ಣ ಇತರ ಉಪಕರಣಗಳು ಬಳಕೆ ಹಂತದಲ್ಲಿವೆ. ನಮ್ಮ ಎಲ್ಲ ಖರೀದಿ ಯೋಜನೆಗಳಲ್ಲಿ 'ಆತ್ಮನಿರ್ಭರ'ದ ಕಡೆಗೆ ನಮ್ಮ ಗಮನ ಮುಂದುವರಿಯುತ್ತದೆ ಎಂದರು.
ನಾವು ಮುಂದುವರಿದುಕೊಂಡು ಹೋಗುತ್ತಿರುವ ಹಾದಿ ಎಲ್ಲರಿಗೂ ಗೊತ್ತಿದೆ. ನಾವು 83 ಹಗುರ ಯುದ್ಧ ವಿಮಾನಗಳಿಗಾಗಿ ಒಪ್ಪಂದಕ್ಕೆ ಸಹಿ ಹಾಕಿದ್ದೇವೆ. ಎಎಂಸಿಎ ಮತ್ತು ಎಲ್ ಸಿಎ-ಎಂಕೆ2 ಸೇರ್ಪಡೆ ಹಂತದಲ್ಲಿವೆ ಎಂದು ಏರ್ ಚೀಫ್ ಮಾರ್ಷಲ್ ವಿ ಆರ್ ಚೌಧರಿ ಹೇಳಿದ್ದಾರೆ.
ಇದಕ್ಕೂ ಮುನ್ನ ಅವರು ಇಂದು ದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


