ವ್ಯಾಪಾರಿಗಳ ಸಬಲೀಕರಣಕ್ಕೆ ನಮ್ಮ ಸರ್ಕಾರ ಬದ್ಧ: ಪ್ರಧಾನಿ ಮೋದಿ
ವ್ಯಾಪಾರಿ ಸಮುದಾಯದ ಸಬಲೀಕರಣಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶನಿವಾರ ಹೇಳಿದ್ದಾರೆ.

ನವದೆಹಲಿ: ವ್ಯಾಪಾರಿ ಸಮುದಾಯದ ಸಬಲೀಕರಣಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶನಿವಾರ ಹೇಳಿದ್ದಾರೆ.
ನಿನ್ನೆಯಷ್ಟೇ ಮಹತ್ವದ ಘೋಷಣೆ ಮಾಡಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿಯವರು, ಚಿಲ್ಲರೆ ಹಾಗೂ ಸಗಟು ವ್ಯಾಪಾರವನ್ನು ಎಂಎಸ್ಎಂಇ ವ್ಯಾಪ್ತಿಗೆ ತರುವುದಾಗಿ ಹೇಳಿದ್ದರು.
ಎಂಎಸ್‌ಎಂಇ ವಲಯವು ಆರ್ಥಿಕ ಬೆಳವಣಿಗೆಯ ಎಂಜಿನ್ ಆಗಿದೆ. ಚಿಲ್ಲರೆ ಮತ್ತು ಸಗಟು ವ್ಯವಹಾರವನ್ನು ಎಂಎಸ್‌ಎಂಇ ವ್ಯಾಪ್ತಿಗೆ ತರುವುದರಿಂದ ಸಾಲ ಪಡೆದುಕೊಳ್ಳಲು ಅನುಕೂಲವಾಗಲಿದೆ. ಆದ್ಯತೆಯ ವಲಯಕ್ಕೆ ಸುಲಭವಾದ ನಿಯಮಗಳಲ್ಲಿ ಸಾಲ ನೀಡಲು ರಿಸರ್ವ್ ಬ್ಯಾಂಕಿನಿಂದ ಹಲವು ಅವಕಾಶಗಳನ್ನು ನೀಡಲಾಗಿದೆ ಎಂದು ತಿಳಿಸಿದ್ದರು.
ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿ ಪ್ರತಿಕ್ರಿಯೆ ನೀಡಿರುವ ಮೋದಿಯವರು, ಚಿಲ್ಲರೆ ಹಾಗೂ ಸಗಟು ವ್ಯಾಪಾರ ವಲಯವನ್ನು ಕೂಡ ಅತಿಸಣ್ಣ, ಸಣ್ಣ ಹಾಗೂ ಮಧ್ಯಮ ಪ್ರಮಾಣದ (ಎಂಎಸ್‌ಎಂಇ) ಉದ್ಯಮದ ವ್ಯಾಪ್ತಿಗೆ ತರಲಾಗಿದೆ. ಇದು ವ್ಯಾಪಾರಿಗಳ ಹಿತದೃಷ್ಟಿಯಿಂದ ಮಹತ್ವದ ನಿರ್ಧಾರವಾಗಿದೆ ಎಂದು ಬಣ್ಣಿಸಿದ್ದಾರೆ.
ಚಿಲ್ಲರೆ ಹಾಗೂ ಸಗಟು ವ್ಯಾಪಾರ ವಲಯವನ್ನು ಎಂಎಸ್‌ಎಂಇ ಉದ್ಯಮದ ವ್ಯಾಪ್ತಿಗೆ ತರಲಾಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಶುಕ್ರವಾರ ಘೋಷಿಸಿದ್ದರು. ಇದರಿಂದಾಗಿ ಚಿಲ್ಲರೆ ಹಾಗೂ ಸಗಟು ವ್ಯಾಪಾರ ವಲಯದವರಿಗೆ ಕೂಡ ಆರ್‌ಬಿಐ ಮಾರ್ಗಸೂಚಿ ಅನ್ವಯ ಆದ್ಯತೆಯ ಮೇರೆಗೆ ಸಾಲ ಲಭ್ಯವಾಗಲಿದೆ.
‘ನಮ್ಮ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಇದರಿಂದ ಕೋಟ್ಯಂತರ ವ್ಯಾಪಾರಿಗಳಿಗೆ ಹಣಕಾಸು ಸೌಲಭ್ಯ ಪಡೆಯುವುದು ಸುಲಭವಾಗಲಿದೆ. ಅನೇಕ ಪ್ರಯೋಜನಗಳನ್ನು ಪಡೆಯುವ ಮೂಲಕ ವ್ಯವಹಾರ ಹೆಚ್ಚಿಸಲು ನೆರವಾಗಲಿದೆ. ವ್ಯಾಪಾರಸ್ಥರ ಸಬಲೀಕರಣಕ್ಕೆ ನಾವು ಬದ್ಧರಾಗಿದ್ದೇವೆ’ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಈ ನಿರ್ಧಾರವು ರೂ.250 ಕೋಟಿ ವರೆಗೆ ವಹಿವಾಟು ಹೊಂದಿರುವ ಚಿಲ್ಲರೆ ವ್ಯಾಪಾರಿಗಳು ಮತ್ತು ಸಗಟು ವ್ಯಾಪಾರಿಗಳಿಗೆ ‘ಆತ್ಮ ನಿರ್ಭರ ಭಾರತ’ ಯೋಜನೆ ಅಡಿ ಘೋಷಿಸಿರುವ ವಿವಿಧ ನೆರವನ್ನು ಪಡೆಯಲು ತಕ್ಷಣದಿಂದಲೇ ನೆರವಾಗಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


