ದೇಶ

ಕೋವಿಡ್-19 ಸಾಂಕ್ರಾಮಿಕ ನಿರ್ವಹಣೆ: ಯೋಗಿ ಸರ್ಕಾರದ ವಿರುದ್ಧ ಸಚಿವರಿಂದಲೇ ಅಸಮಾಧಾನ, ಪತ್ರ ವೈರಲ್

ಉತ್ತರ ಪ್ರದೇಶದಲ್ಲಿ ಕೋವಿಡ್ ಸಾಂಕ್ರಾಮಿಕ ನಿರ್ವಹಣೆ ಕುರಿತಂತೆ ಆ ರಾಜ್ಯದ ಸಚಿವರೇ ಅಸಮಾಧಾನ ವ್ಯಕ್ತಪಡಿಸಿರುವ ಘಟನೆ ಬೆಳಕಿಗೆ ಬಂದಿದೆ.

ಕೋವಿಡ್-19 ಸಾಂಕ್ರಾಮಿಕ ನಿರ್ವಹಣೆ: ಯೋಗಿ ಸರ್ಕಾರದ ವಿರುದ್ಧ ಸಚಿವರಿಂದಲೇ ಅಸಮಾಧಾನ, ಪತ್ರ ವೈರಲ್
ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
Published On :

ಲಖನೌ: ಉತ್ತರ ಪ್ರದೇಶದಲ್ಲಿ ಕೋವಿಡ್ ಸಾಂಕ್ರಾಮಿಕ ನಿರ್ವಹಣೆ ಕುರಿತಂತೆ ಆ ರಾಜ್ಯದ ಸಚಿವರೇ ಅಸಮಾಧಾನ ವ್ಯಕ್ತಪಡಿಸಿರುವ ಘಟನೆ ಬೆಳಕಿಗೆ ಬಂದಿದೆ.

ರಾಜ್ಯ ರಾಜಧಾನಿಸ ಲಖನೌನಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಒಂದೇ ಸಮನೆ ಏರುತ್ತಿದ್ದರೂ, ಆರೋಗ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆದಿತ್ಯನಾಥ್ ಸಂಪುಟದ ಕಾನೂನು ಸಚಿವ ಬೃಜೇಶ್ ಪಾಠಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಸಿಎಂ ಯೋಗಿ ಸರ್ಕಾರಕ್ಕೆ ತೀವ್ರ  ಮುಜುಗರವನ್ನುಂಟು ಮಾಡುತ್ತಿದೆ.

ರಾಜ್ಯದಲ್ಲಿ ಮಂಗಳವಾರ ಒಟ್ಟು 18,021 ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, ರಾಜಧಾನಿಯಲ್ಲೇ 5,382 ಪ್ರಕರಣಗಳು ಕಾಣಿಸಿಕೊಂಡಿವೆ. ಈ ಬಗ್ಗೆ ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಮಿತ್ ಮೋಹನ್ ಪ್ರಸಾದ್ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾಯದರ್ಶಿ ಅಲೋಕ್  ಕುಮಾರ್ ಅವರಿಗೆ ಬರೆದಿದ್ದ ಗೌಪ್ಯ ಪತ್ರ ಇದೀಗ ಬಹಿರಂಗವಾಗಿದೆ.

"ಖಾಸಗಿ ಪ್ರಯೋಗಾಲಯಗಳಲ್ಲಿ ಕೋವಿಡ್ ಪರೀಕ್ಷೆ ಸ್ಥಗಿತಗೊಳಿಸಲು ಸೂಚಿಸಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಮತ್ತು ಪ್ರಯೋಗಾಲಯಗಳಲ್ಲಿ ಪರೀಕ್ಷಾ ವರದಿಗಳನ್ನು ಪಡೆಯಲು 4-5 ದಿನ ಬೇಕಾಗುತ್ತದೆ ಎನ್ನುವುದು ಆಘಾತಕಾರಿ ಸಂಗತಿ" ಎಂದು ಸಚಿವರು ಬರೆದಿರುವ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್  ಆಗಿದೆ. ಕೇಂದ್ರ ಲಖನೌ ಶಾಸಕರಾಗಿರುವ ಪಾಠಕ್ ಅವರಿಗೆ ಖ್ಯಾತ ಲೇಖಕ ಯೋಗೀಶ್ ಪ್ರವೀಣ್ ಅವರ ಮನೆಯಿಂದ ದೂರವಾಣಿ ಕರೆ ಬಂದಿತ್ತು. ಗಂಭೀರ ಸ್ಥಿತಿಯಲ್ಲಿರುವ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಆ್ಯಂಬುಲೆನ್ಸ್ ಬೇಕು ಎಂದು ಮನವಿ ಮಾಡಿದ್ದರು. "ನಾನು ಲಕ್ನೋ ಮುಖ್ಯ ವೈದ್ಯಾಧಿಕಾರಿಯನ್ನು  ಸಂಪರ್ಕಿಸಿದೆ. ಆದರೆ ಆ್ಯಂಬುಲೆನ್ಸ್ ತಲುಪಲೇ ಇಲ್ಲ. ಯೋಗೀಶ್ ಪ್ರವೀಣ್ ಮೃತಪಟ್ಟರು.. ಅಲ್ಲದೆ ಲಕ್ನೋದಲ್ಲಿ ಪ್ರತಿದಿನ 17 ಸಾವಿರ ಪರೀಕ್ಷಾ ಕಿಟ್‌ಗಳ ಅಗತ್ಯವಿದ್ದು, 10 ಸಾವಿರ ಮಾತ್ರ ಲಭ್ಯವಿದೆ ಎಂದು ಸಚಿವರು ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.