ದೇಶ

ರಾಜ್ಯಪಾಲರು ಹೇಗೆ ವರ್ತಿಸಬಾರದು ಎಂಬುದನ್ನು ಕೋಶಿಯಾರಿ ತೋರಿಸಿಕೊಟ್ಟಿದ್ದಾರೆ: ಶಿವಸೇನೆ

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಪತ್ರ ಬರೆದು, ನೀವು "ಜಾತ್ಯತೀತ ಅನಿಸಿಕೊಳ್ಳಲು ಹಿಂದುತ್ವವನ್ನು ತ್ಯಜಿಸಿದರೇ" ಎಂದು ಕೇಳಿದ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಶಿವಸೇನೆ, ರಾಜ್ಯಪಾಲರು ರಾಜ್ಯ ಸರ್ಕಾರದ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದೆ.

ರಾಜ್ಯಪಾಲರು ಹೇಗೆ ವರ್ತಿಸಬಾರದು ಎಂಬುದನ್ನು ಕೋಶಿಯಾರಿ ತೋರಿಸಿಕೊಟ್ಟಿದ್ದಾರೆ: ಶಿವಸೇನೆ
ಉದ್ಧವ್ ಠಾಕ್ರೆ - ಭಗತ್ ಸಿಂಗ್ ಕೋಶಿಯಾರಿ
Published On :

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಪತ್ರ ಬರೆದು, ನೀವು "ಜಾತ್ಯತೀತ ಅನಿಸಿಕೊಳ್ಳಲು ಹಿಂದುತ್ವವನ್ನು ತ್ಯಜಿಸಿದರೇ" ಎಂದು ಕೇಳಿದ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಶಿವಸೇನೆ, ರಾಜ್ಯಪಾಲರು ರಾಜ್ಯ ಸರ್ಕಾರದ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದೆ.

"ಭಗತ್ ಸಿಂಗ್ ಕೋಶಿಯಾರಿ ಅವರು ರಾಜ್ಯಪಾಲರ ಹುದ್ದೆಯಲ್ಲಿ ಕುಳಿತಿರುವ ವ್ಯಕ್ತಿಯು ಹೇಗೆ ವರ್ತಿಸಬಾರದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಅವರು 'ಸಂಘ ಪ್ರಚಾರಕ' ಅಥವಾ ಬಿಜೆಪಿಯ ನಾಯಕರಾಗಿಬೇಕಾಗಿತ್ತು. ಆದರೆ ಇಂದು ಅವರು ಮಹಾರಾಷ್ಟ್ರದಂತಹ ಪ್ರಗತಿಪರ ರಾಜ್ಯದ ರಾಜ್ಯಪಾಲರಾಗಿದ್ದಾರೆ. ಅವರು ತಮ್ಮ ಅನುಕೂಲಕ್ಕೆ ತಕ್ಕಂತೆ ಈ ವಿಷಯವನ್ನು ಮರೆತಂತೆ ತೋರುತ್ತಿದೆ ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾ ಸಂಪಾದಕೀಯದಲ್ಲಿ ತಿಳಿಸಿದೆ.

ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ರಾಜ್ಯಪಾಲ ಕೋಶಿಯಾರಿ ಬರೆದ ಪತ್ರ ಅವಿವೇಕದ ನಡೆ ಎಂದು ಶಿವಸೇನೆ ಟೀಕಿಸಿದೆ. ಅಲ್ಲದೆ ರಾಜ್ಯಪಾಲ ಭಗತ್‌ ಸಿಂಗ್‌ ಕೋಶಿಯಾರಿ ಅವರನ್ನು ಹಿಂದಕ್ಕೆ ಕರೆದುಕೊಳ್ಳಬೇಕು ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದೆ.

ಕೊರೋನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಬಂದ್ ಮಾಡಲಾಗಿದ್ದ ದೇವಸ್ಥಾನಳನ್ನು ಮತ್ತೆ ತೆರೆಯುವ ವಿಚಾರವಾಗಿ ಮುಖ್ಯಮಂತ್ರಿ ಉದ್ಧವ ಠಾಕ್ರೆ ನೇತೃತ್ವದ ಸರ್ಕಾರ ಮತ್ತು ರಾಜ್ಯಪಾಲ ಭಗತ್‌ ಸಿಂಗ್‌ ಕೋಶಿಯಾರಿ ಅವರ ನಡುವೆ ‘ಜಾತ್ಯತೀತ‌’ದ ವಿಷಯವಾಗಿ ಹಗ್ಗ ಜಗ್ಗಾಟ ನಡೆಯುತ್ತಿದೆ.

ಬಿಜೆಪಿ ಹಾಗೂ ಸಂಘ ಸಂಸ್ಥೆಗಳ ಮನವಿಯ ನಂತರವೂ ದೇವಾಲಯಗಳನ್ನು ತೆರೆಯದ ಸರ್ಕಾರದ ನಿಲುವಿನ ಕುರಿತು ಉದ್ಧವ್ ಠಾಕ್ರೆಗೆ ಪತ್ರ ಬರೆದಿದ್ದ ರಾಜ್ಯಪಾಲ ಕೋಶಿಯಾರಿ ಅವರು, ರಾಜ್ಯ ಸರ್ಕಾರ ದೇವಸ್ಥಾನಗಳನ್ನು ತೆರೆಯಲು ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಹೇಳಿ, ಠಾಕ್ರೆ ಅವರು "ಜಾತ್ಯತೀತ ಅನಿಸಿಕೊಳ್ಳಲು ಹಿಂದುತ್ವವನ್ನು ತ್ಯಜಿಸಿದರೇ" ಎಂದು ಲೇವಡಿ ಮಾಡಿದ್ದರು. ಇದಕ್ಕೆ ತೀಕ್ಷಣವಾಗಿಯೇ ಪ್ರತಿಕ್ರಿಯಿಸಿದ್ದ ಸಿಎಂ ಠಾಕ್ರೆ, ಜಾತ್ಯತೀತ ಎಂಬುದು ಸಂವಿಧಾನದ ಭಾಗ. ನೀವು ರಾಜ್ಯಪಾಲರಾಗಿ ಸಂವಿಧಾನಕ್ಕೆ ನಿಷ್ಠೆಯಿಂದ ಇರುವುದಾಗಿ ಪ್ರಮಾಣ ಮಾಡಿದ್ದೀರಿ. ಹಿಂದುತ್ವದ ಬಗ್ಗೆ ಉಪದೇಶ ಮಾಡಬೇಡಿ ಎಂದು ತಿರುಗೇಟು ನೀಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.