ದೇಶ

ಕ್ವಾರಂಟೈನ್ ತಪ್ಪಿಸಿಕೊಳ್ಳಲು ಪ್ರಯಾಣಿಕರ ಹೊಸ ತಂತ್ರ, ವಿಮಾನ ಲ್ಯಾಂಡಿಂಗೂ ಮೊದಲೇ ಮಾತ್ರೆ ಸೇವನೆ: ಆಘಾತಕಾರಿ ಮಾಹಿತಿ!

ವಿಶ್ವಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಸ್ ನಿಂದಾಗಿ ವಿಶ್ವದ 150 ರಾಷ್ಟ್ರಗಳು ತತ್ತರಿಸುತ್ತಿದ್ದು, ಸೋಂಕು ತಡೆಗೆ ಹಲವು ಕ್ರಮಗಳನ್ನು ಕೈಗೊಳ್ಳುತ್ತಿವೆ. ಆದರೆ ಸರ್ಕಾರದ ಈ ಎಲ್ಲ ಪ್ರಯತ್ನಗಳೂ ನಿರ್ಲಕ್ಷಿತ ಜನರಿಂದಾಗಿ ನೀರಿನಲ್ಲಿ ಹೋಮ ಮಾಡಿದಂತಾಗುತ್ತಿದೆ.

ಕ್ವಾರಂಟೈನ್ ತಪ್ಪಿಸಿಕೊಳ್ಳಲು ಪ್ರಯಾಣಿಕರ ಹೊಸ ತಂತ್ರ, ವಿಮಾನ ಲ್ಯಾಂಡಿಂಗೂ ಮೊದಲೇ ಮಾತ್ರೆ ಸೇವನೆ: ಆಘಾತಕಾರಿ ಮಾಹಿತಿ!
ವಿಮಾನ ನಿಲ್ದಾಣದಲ್ಲಿ ಥರ್ಮಲ್ ಸ್ಕ್ರೀನಿಂಗ್
Published On :

ನವದೆಹಲಿ: ವಿಶ್ವಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಸ್ ನಿಂದಾಗಿ ವಿಶ್ವದ 150 ರಾಷ್ಟ್ರಗಳು ತತ್ತರಿಸುತ್ತಿದ್ದು, ಸೋಂಕು ತಡೆಗೆ ಹಲವು ಕ್ರಮಗಳನ್ನು ಕೈಗೊಳ್ಳುತ್ತಿವೆ. ಆದರೆ ಸರ್ಕಾರದ ಈ ಎಲ್ಲ ಪ್ರಯತ್ನಗಳೂ ನಿರ್ಲಕ್ಷಿತ ಜನರಿಂದಾಗಿ ನೀರಿನಲ್ಲಿ ಹೋಮ ಮಾಡಿದಂತಾಗುತ್ತಿದೆ.

ಹೌದು.. ವಿದೇಶದಿಂದ ಭಾರತಕ್ಕೆ ವಾಪಸ್ ಆಗುತ್ತಿರುವ ಪ್ರಯಾಣಿಕರಿಗೆ ದೇಶದ ಎಲ್ಲ ವಿಮಾನ ನಿಲ್ದಾಣಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ ಮಾಡಲಾಗಿದೆ. ಆ ಮೂಲಕ ಸೋಂಕು ಕಂಡುಬಂದರೆ ಕೂಡಲೇ ಅವರನ್ನು 14 ದಿನಗಳ ಕ್ವಾರಂಟೈನ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಆ ಮೂಲಕ ಮಾರಕ ಸೋಂಕು ಇತರರಿಗೆ ಹರಡಬಾರದು ಎಂದು ಸರ್ಕಾರ ಹರಸಾಹಸ ಪಡುತ್ತಿದೆ. ಆದರೆ ಸರ್ಕಾರದ ಈ ಎಲ್ಲ ಪ್ರಯತ್ನಗಳೂ ಕೆಲ ನಿರ್ಲಕ್ಷಿತರ ಬೇಜವಾಬ್ದಾರಿಯಿಂದಾಗಿ ನೀರಿನಲ್ಲಿ ಹೋಮ ಮಾಡಿದಂತಾಗುತ್ತಿದೆ. 

ವಿದೇಶದಿಂದ ಬರುತ್ತಿರುವ ಕೆಲ ಭಾರತೀಯರು ಕೊರೋನಾ ಥರ್ಮಲ್ ಸ್ಕ್ರೀನಿಂಗ್ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಪ್ಯಾರಾಸಿಟಮಲ್ ಮಾತ್ರೆಗಳನ್ನು ಸೇವಿಸುತ್ತಿರುವ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಈ ಕುರಿತಂತೆ ಖಾಸಗಿ ಮಾಧ್ಯಮವೊಂದು ವರದಿ ಮಾಡಿದ್ದು, ಆಂಧ್ರ ಪ್ರದೇಶದ ವಾರಂಗಲ್ ಮೂಲದ ವಕೀಲರೊಬ್ಬರು ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ವಕೀಲರು ನೀಡಿರುವ ಮಾಹಿತಿಯಂತೆ ಕೊರೋನಾ ಶಂಕಿತ ಅಖಿಲ್ ಎಂಬವರು ಮಾರ್ಚ್ 11 ರಂದು ಲಂಡನ್‍ನಿಂದ ಮುಂಬೈಗೆ ಆಗಮಿಸಿದ್ದರು. ಈ ವೇಳೆ ವಿಮಾನ ನಿಲ್ದಾಣದಲ್ಲಿ ಥರ್ಮಲ್ ಸ್ಕ್ರೀನಿಂಗ್ ಮಾಡುವ ಕುರಿತು ಮಾಹಿತಿ ಲಭ್ಯವಾಗಿತ್ತು.  ವಿಮಾನ ಲ್ಯಾಂಡಿಂಗ್ ಕೇವಲ 1 ಗಂಟೆ ಇರುವಾಗ ಅವರು ಜ್ವರ ಕಡಿಮೆಯಾಗುವ ಪ್ಯಾರಾಸಿಟಮಲ್ ಮಾತ್ರೆ ಸೇವಿಸಿದರು. ಈ ಪ್ಯಾರಾಸಿಟಮಲ್ ಮಾತ್ರೆಗಳನ್ನು ಸೇವಿಸಿದಾಗ ಜ್ವರದ ತೀವ್ರತೆ ಕಡಿಮೆಯಾಗುತ್ತದೆ. ಹೀಗಾಗಿ ಥರ್ಮಲ್ ಸ್ಕ್ಯಾನರ್ ನಲ್ಲಿ ಫಲಿತಾಂಶ ಸರಿಯಾಗಿ ಲಭ್ಯವಾಗದ ಪರಿಣಾಮ ಇವರೆಲ್ಲ ಪಾಸ್ ಆಗುತ್ತಿದ್ದಾರೆ. ಹೀಗೆ 10 ಮಂದಿ ಪ್ಯಾರಾಸಿಟಮಲ್ ಮಾತ್ರೆ ಸೇವಿಸಿದ್ದನ್ನು ನಾನೇ ಗಮನಿಸಿದ್ದೇನೆ ಎಂದು ತಿಳಿಸಿದ್ದಾರೆ.

ಅಲ್ಲದೆ ಭಾರತಕ್ಕೆ ಮರಳಿ 14 ದಿನಗಳ ಕಾಲ ಪ್ರತ್ಯೇಕ ನಿಗಾದಲ್ಲಿ ಇರಬೇಕಾಗುತ್ತದೆ ಎನ್ನುವ ಒಂದೇ ಕಾರಣಕ್ಕೆ ವಿದ್ಯಾರ್ಥಿಗಳು ಸ್ವಯಂ ದೃಢೀಕರಣ ನೀಡುವಾಗ ಆರೋಗ್ಯದ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದಾರೆ. ಈ ವಿದ್ಯಾರ್ಥಿಗಳು ನಿಮ್ಮ ಮನೆಯ ಪಕ್ಕದಲ್ಲೇ ಸುತ್ತಾಡುತ್ತಿರಬಹುದು. ಈ ವಿದ್ಯಾರ್ಥಿಗಳ ತಪ್ಪಿನಿಂದಾಗಿ ಮುಂದೆ ದೇಶಕ್ಕೆ ಬಹುದೊಡ್ಡ ಅಪಾಯವಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. 

ಇನ್ನು ಪ್ರಸ್ತುತ ಭಾರತದಲ್ಲಿ ವೈರಸ್ ಸೋಂಕಿಗೆ ತುತ್ತಾದವರ ಪೈಕಿ ಅತಿ ಹೆಚ್ಚು ಮಂದಿ ವಿದೇಶದಿಂದ ವಾಪಸ್ ಆದವರೇ ಆಗಿದ್ದಾರೆ. ಹೀಗಾಗಿ ವಿಮಾನ ನಿಲ್ದಾಣಗಳಲ್ಲಿ ಕ್ರಮಗಳನ್ನು ಕೈಗೊಂಡರೂ ಪರೀಕ್ಷೆಯಿಂದ ಪಾರಾಗಲು ಪ್ರಯಾಣಿಕರು ಈ ಅಪಾಯಕಾರಿ ತಂತ್ರ ಅನುಸರಿಸುತ್ತಿದ್ದು ಇದು ಸರ್ಕಾರಕ್ಕೆ ಹೊಸ ತಲೆನೋವು ತಂದಿದೆ. ಭಾರತದಲ್ಲಿ ಕೊರೋನಾ ಈಗ ವ್ಯಕ್ತಿಗೆ ಬಂದು, ಆ ವ್ಯಕ್ತಿಯಿಂದ ಮತ್ತೊಬ್ಬರಿಗೆ ಬರುವ ಎರಡನೇ ಹಂತ ದಾಟಿ ಆಗಿದ್ದು ಮೂರನೇ ಹಂತದಲ್ಲಿದೆ. ಎರಡನೇ ವ್ಯಕ್ತಿಯಿಂದ ಮೂರನೇ ವ್ಯಕ್ತಿಗೆ ಬರುವ ಮುನ್ನವೇ ನಾವು ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಭಾರೀ ಬೆಲೆ ತೆರಬೇಕಾಗುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.