ವಿವಾದಿತ ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆಗೆ ವನ್ಯಜೀವಿ ಮಂಡಳಿ ಹಸಿರು ನಿಶಾನೆ..!!
ವಿವಾದಿತ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಯೋಜನೆ ಜಾರಿಗೆ ಇದ್ದ ತೊಡಕು ನಿವಾರಿಸಲು ರಾಜ್ಯದ ವನ್ಯಜೀವಿ ಮಂಡಳಿ ತೀರ್ಮಾನಿಸಿದ್ದು, ಈ ಕುರಿತ ಪ್ರಸ್ತಾವನೆಗೆ ಅನುಮೋದನೆ ನೀಡಿರುವುದಾಗಿ ತಿಳಿದು ಬಂದಿದೆ.

ಬೆಂಗಳೂರು: ವಿವಾದಿತ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಯೋಜನೆ ಜಾರಿಗೆ ಇದ್ದ ತೊಡಕು ನಿವಾರಿಸಲು ರಾಜ್ಯದ ವನ್ಯಜೀವಿ ಮಂಡಳಿ ತೀರ್ಮಾನಿಸಿದ್ದು, ಈ ಕುರಿತ ಪ್ರಸ್ತಾವನೆಗೆ ಅನುಮೋದನೆ ನೀಡಿರುವುದಾಗಿ ತಿಳಿದು ಬಂದಿದೆ.
ವಿಧಾನಸೌಧಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ 14ನೇ ವನ್ಯಜೀವಿ ಮಂಡಳಿ ಸಭೆಯಲ್ಲಿ ಪರಿಸರವಾದಿಗಳು ಮತ್ತು ಮಂಡಳಿಯ ಕೆಲ ಸದಸ್ಯರಿಂದ ತೀವ್ರ ವಿರೋಧಕ್ಕೊಳಗಾಗಿದ್ದ ಯೋಜನೆಗೆ ಗ್ರೀನ್ ಸಿಗ್ನಲ್ ನೀಡಲಾಗಿದೆ. ಪರಿಸರವಾದಿಗಳ ವಿರೋಧದ ಮಧ್ಯೆಯೂ ಯೋಜನೆ ಪರ ತೀರ್ಮಾನ ಕೈಗೊಳ್ಳಲಾಗಿದ್ದು, ಯೋಜನೆ ಬೆಂಬಲಿಸಿ ಕೇಂದ್ರಕ್ಕೆ ಶಿಫಾರಸು ಮಾಡಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಇಂದು ನಡೆದ ಸಭೆಯಲ್ಲೂ ಮಂಡಳಿ ಸದಸ್ಯರು ಯೋಜನೆಗೆ ತಮ್ಮ ಆಕ್ಷೇಪ ವ್ಯಕ್ತಡಿಸಿದರು. ಸಭೆಯಲ್ಲಿ ಸಚಿವರಾದ ಜಗದೀಶ್ ಶೆಟ್ಟರ್ , ಶಿವರಾಮ್ ಹೆಬ್ಬಾರ್, ಮಾಜಿ ಸಚಿವ ಆರ್.ವಿ.ದೇಶಪಾಂಡೆ, ಶಾಸಕರಾದ ಸೌಮ್ಯ ರೆಡ್ಡಿ ಮತ್ತು ವನ್ಯಜೀವಿ ಮಂಡಳಿಯ ಸದಸ್ಯರು ಭಾಗಿಯಾಗಿದ್ದರು.
ಈ ಯೋಜನೆ ಅನುಷ್ಠಾನಕ್ಕೆ ಉತ್ತರ ಕರ್ನಾಟಕ ಭಾಗದ ಶಾಸಕರು, ಜನಪ್ರತಿನಿಧಿಗಳಿಂದ ಸಾಕಷ್ಟು ರಾಜಕೀಯ ಒತ್ತಡ ಇತ್ತು ಎನ್ನಲಾಗಿದೆ.
ಏನಿದು ಯೋಜನೆ?:
164.44 ಕಿ.ಮೀ ಉದ್ದದ ಹುಬ್ಬಳ್ಳಿ - ಅಂಕೋಲಾ ರೈಲು ಯೋಜನೆಯನ್ನು 1997ರಲ್ಲಿ ಘೋಷಣೆ ಮಾಡಲಾಗಿತ್ತು. ಆದರೆ ಪರಿಸರವಾದಿಗಳ ತೀವ್ರ ವಿರೋಧದ ಹಿನ್ನೆಲೆ ಯೋಜನೆ ಅನುಷ್ಠಾನ ವಿಳಂಬವಾಗಿತ್ತು.
ಇದೀಗ ಯೋಜನೆಗೆ ವನ್ಯ ಜೀವಿ ಮಂಡಳಿ ಸಭೆಯಲ್ಲಿ ಹಸಿರು ನಿಶಾನೆ ಸಿಕ್ಕಿದೆ. ಈ ಯೋಜನೆ ಎರಡು ಪ್ರಮುಖ ಸಂರಕ್ಷಿತ ಅರಣ್ಯ ವಲಯಗಳಾದ ಕಾಳಿ ಹುಲಿ ರಕ್ಷಿತಾರಣ್ಯ ಮತ್ತು ಬೆಡ್ತಿ ಮೀಸಲು ಅರಣ್ಯ ಪ್ರದೇಶಗಳನ್ನು ಹಾದು ಹೋಗುತ್ತದೆ.
ಹುಬ್ಬಳ್ಳಿ-ಯಲ್ಲಾಪುರ ವರೆಗಿನ 75 ಕಿ.ಮೀ ಮಾರ್ಗ ಸಮತಟ್ಟಾದ ಪ್ರದೇಶವಾಗಿದ್ದು, ಯಲ್ಲಾಪುರದಿಂದ ಸುನ್ ಕ್ಸಲ್ ವರೆಗಿನ 56 ಕಿ.ಮೀ ಉದ್ದದ ಪ್ರದೇಶ ಗುಡ್ಡಪ್ರದೇಶದಿಂದ ಕೂಡಿದೆ. ರೈಲು ಮಾರ್ಗ ಶೇ 70ಕ್ಕೂ ಹೆಚ್ಚು ಪ್ರದೇಶ ದಟ್ಟ ಅರಣ್ಯ ಪ್ರದೇಶದಲ್ಲೇ ಹಾದು ಹೋಗುತ್ತದೆ.
ಈ ಯೋಜನೆಗೆ ಸುಮಾರು 995.64 ಹೆಕ್ಟೇರ್ ಜಮೀನಿನ ಅಗತ್ಯ ಇದೆ. ಈ ಪೈಕಿ 595.64 ಹೆಕ್ಟೇರ್ ಭೂಮಿ ಅರಣ್ಯ ಭೂಮಿಯಾಗಿದ್ದರೆ, 184.6 ಹೆಕ್ಟೇರ್ ನೀರಾವರಿ ಭೂಮಿ ಮತ್ತು 190 ಹೆಕ್ಟೇರ್ ಒಣ ಭೂಮಿ ಇದೆ. ಸುಮಾರು ಎರಡು ಲಕ್ಷ ಮರಗಳು ಈ ಯೋಜನೆಗೆ ಧರೆಗುರುಳಲಿವೆ.
Related Article
ಹುಬ್ಬಳ್ಳಿ-ಅಂಕೋಲಾ ರೈಲ್ವೆ ಲೈನ್ ಗೆ ಗ್ರೀನ್ ಸಿಗ್ನಲ್: ವನ್ಯಜೀವಿ ಮಂಡಳಿ, ಅರಣ್ಯ ಅಧಿಕಾರಿಗಳಿಂದ ವಿರೋಧ!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


