ನಿರ್ಭಯಾ ಪ್ರಕರಣ: ಕ್ಷಮಾದಾನ ಅರ್ಜಿ ವಜಾ, ನಾಳೆ ನಾಲ್ವರಿಗೂ ಗಲ್ಲು ಫಿಕ್ಸ್!
ನಿರ್ಭಯಾ ಪ್ರಕರಣದ ಅಪರಾಧಿ ಪವನ್ ಗುಪ್ತಾ ಸಲ್ಲಿಕೆ ಮಾಡಿದ್ದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಇಂದು ತಿರಸ್ಕರಿಸಿದ್ದಾರೆ.

ನವದೆಹಲಿ: ನಿರ್ಭಯಾ ಪ್ರಕರಣದ ಅಪರಾಧಿ ಪವನ್ ಗುಪ್ತಾ ಸಲ್ಲಿಕೆ ಮಾಡಿದ್ದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಇಂದು ತಿರಸ್ಕರಿಸಿದ್ದಾರೆ.
ದೆಹಲಿ ಹೈಕೋರ್ಟ್ ಆದೇಶದ ಅನ್ವಯ ಹತ್ಯಾಚಾರಿಗಳ ಗಲ್ಲುಶಿಕ್ಷೆ ಜಾರಿಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಇತ್ತ ಗಲ್ಲು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಅಪರಾಧಿಗಳು ಮಾಡುತ್ತಿರುವ ಎಲ್ಲ ಶತ ಪ್ರಯತ್ನಗಳೂ ವಿಫಲವಾಗುತ್ತಿದ್ದು, ಇದೀಗ ಪ್ರಕರಣದ ಮತ್ತೋರ್ವ ಅಪರಾಧಿ ಪವನ್ ಗುಪ್ತಾ ರಾಷ್ಟ್ರಪತಿಗಳಿಗೆ ಸಲ್ಲಿಸಿದ್ದ ಕ್ಷಮಾದಾನ ಅರ್ಜಿ ಕೂಡ ತಿರಸ್ಕಾರಗೊಂಡಿದೆ.
2012ರಲ್ಲಿ ಈ ಪ್ರಕರಣ ನಡೆದಾಗ ಪವನ್ ಗುಪ್ತಾ ಅಪ್ರಾಪ್ತನಾಗಿದ್ದ. ಈ ಅಂಶವನ್ನು ಪರಿಗಣಿಸದೇ ಕೋರ್ಟ್ ಗಲ್ಲು ಶಿಕ್ಷೆ ಜಾರಿ ಮಾಡಿತ್ತು. ಹೀಗಾಗಿ ಪವನ್ ಗುಪ್ತಾಗೆ ಕ್ಷಮಾದಾನ ನೀಡಬೇಕು ಎಂದು ಹೇಳಿ ರಾಷ್ಟ್ರಪತಿಗಳಿಗೆ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಕ್ಷಮಾದಾನ ಅರ್ಜಿಯನ್ನು ವಜಾಗೊಳಿಸಿದ್ದಾರೆ. ಅ ಮೂಲಕ ಪವನ್ ಗುಪ್ತಾಗೆ ಗಲ್ಲು ಶಿಕ್ಷೆ ಖಾಯಂ ಆಗಿದೆ.
ಇದಕ್ಕೂ ಮೊದಲು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಫೆ. 5ಕ್ಕೆ ಪ್ರಕರಣದ ಮತ್ತೋರ್ವ ಆರೋಪಿ ಅಕ್ಷಯ್ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ವಜಾ ಮಾಡಿದ್ದರು.
ಕ್ಯುರೇಟಿವ್ ಅರ್ಜಿ ವಜಾಗೊಳಿಸಿದ್ದ ಸುಪ್ರೀಂ
ಇನ್ನು ಅಪರಾಧಿ ಪವನ್ ಗುಪ್ತ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು ಬೆಳಗ್ಗೆ ವಜಾಗೊಳಿಸಿತ್ತು. ಈ ಹಿಂದೆ ನ್ಯಾಯಾಲಯ ನೀಡಿದ್ದ ತೀರ್ಪಿನಲ್ಲಿ ಲೋಪದೋಷಗಳಿವೆ. ಹೀಗಾಗಿ ಮರಣದಂಡನೆಯನ್ನು ಜೀವಾವಧಿಗೆ ಬದಲಿಸುವಂತೆ ಕೋರಿ ಪವನ್ ಗುಪ್ತ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ. ಸೋಮವಾರ ಬೆಳಗ್ಗೆ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠ, ಕ್ಯುರೇಟಿವ್ ಅರ್ಜಿಯ ಜತೆಗೆ, ಮರಣದಂಡನೆಯನ್ನು ಮುಂದೂಡಬೇಕೆಂಬ ಮನವಿಯನ್ನೂ ಸಹ ತಿರಸ್ಕರಿಸಿದೆ.
ಈ ಹಿಂದೆ ನಿರ್ಭಯಾ ಪ್ರಕಣದ ಉಳಿದ ಮೂವರು ಅಪರಾಧಿಗಳು ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನು ಸುಪ್ರೀಂಕೋರರ್ಟ್ ವಜಾಗೊಳಿಸಿತ್ತು. ಇದೀಗ ಪವನ್ ಗುಪ್ತ, ಮುಕೇಶ್ ಸಿಂಗ್, ಅಕ್ಷಯ್ ಸಿಂಗ್, ವಿನಯ್ ಶರ್ಮಾ ಎದುರು ಇದ್ದ ಎಲ್ಲ ಕಾನೂನಾತ್ಮಕ ಮಾರ್ಗಗಳು ಮುಚ್ಚಿದ್ದು, ಮಂಗಳವಾರ ಬೆಳಗ್ಗೆ ಗಲ್ಲು ಶಿಕ್ಷೆ ಜಾರಿಯಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


