ದೇಶಕ್ಕೆ ಕೊರೋನಾಘಾತ: ಒಂದೇ ದಿನ 10,956 ಮಂದಿಯಲ್ಲಿ ವೈರಸ್ ದೃಢ, ಭಾರತದಲ್ಲೀಗ 2.97 ಲಕ್ಷ ಸೋಂಕಿತರು, 8,498 ಮಂದಿ ಬಲಿ
ದೇಶದಲ್ಲಿ ಕೊರೋನಾ ಸ್ಫೋಟಗೊಂಡಿದ್ದು, ಒಂದೇ ದಿನ ಬರೋಬ್ಬರಿ 10,956 ಮಂದಿಯಲ್ಲಿ ವೈರಸ್ ದೃಢಪಟ್ಟಿದೆ. ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2.97 ಲಕ್ಷಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಶುಕ್ರವಾರ ಮಾಹಿತಿ ನೀಡಿದೆ.

ನವದೆಹಲಿ: ದೇಶದಲ್ಲಿ ಕೊರೋನಾ ಸ್ಫೋಟಗೊಂಡಿದ್ದು, ಒಂದೇ ದಿನ ಬರೋಬ್ಬರಿ 10,956 ಮಂದಿಯಲ್ಲಿ ವೈರಸ್ ದೃಢಪಟ್ಟಿದೆ. ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2.97 ಲಕ್ಷಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಶುಕ್ರವಾರ ಮಾಹಿತಿ ನೀಡಿದೆ.
ಲಾಕ್'ಡೌನ್ ಸಡಿಲಗೊಳಿಸಿದ ಬೆನ್ನಲ್ಲೇ ದೇಶದಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ನಿನ್ನೆ ಒಂದೇ ದಿನ ಬರೋಬ್ಬರಿ 10,956 ಮಂದಿಯಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ದೇಶದಲ್ಲಿ ಸೋಂಕಿತರ ಸಂಖ್ಯೆ 297535ಕ್ಕೆ ಏರಿಕೆಯಾಗಿದೆ. ಅಲ್ಲದೆ, 24 ಗಂಟೆಗಳಲ್ಲಿ 396 ಮಂದಿ ಮೃತಪಟ್ಟಿದ್ದು, ಮಹಾಮಾರಿ ವೈರಸ್'ಗೆ ಬಲಿಯಾದವರ ಸಂಖ್ಯೆ ಕೂಡ 8498ಕ್ಕೆ ಏರಿಕೆಯಾಗಿದೆ.
ಈ ನಡುವೆ 297535 ಮಂದಿ ಸೋಂಕಿತರ ಪೈಕಿ 147195 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಪ್ರಸ್ತುತ ದೇಶದಲ್ಲಿನ್ನೂ 141842 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ.
ಜಾಗತಿಕ ಮಟ್ಟದಲ್ಲಿ ಕೊರೋನಾ ಅಂಕಿಸಂಖ್ಯೆಗಳ ಮೇಲೆ ಕಣ್ಣಿಡುವ ವರ್ಲ್ಡೋಮೀಟರ್ ಲೆಕ್ಕದ ಅನ್ವಯ, ಗುರುವಾರ ಭಾರತದಲ್ಲಿ ಸೋಂಕಿತರ ಸಂಖ್ಯೆ 2.97 ಲಕ್ಷಕ್ಕೆ ತಲುಪುವ ಮೂಲಕ ಭಾರತದ ಜಾಗತಿಕ ಮಟ್ಟದಲ್ಲಿ ಬ್ರಿಟನ್ ಮತ್ತು ಸ್ಪೇನ್ ರಾಷ್ಟ್ರಗಳನ್ನು ಹಿಂದಿಕ್ಕು 6ರಿಂದ 4ನೇ ಸ್ಥಾನಕ್ಕೆ ಏರಿದೆ.
ಭಾರತದಲ್ಲಿ 2020ರ ಜ.30ಕ್ಕೆ ಮೊದಲ ಸೋಂಕು ಪತ್ತೆಯಾಗಿತ್ತು. ಆಗ ವಿಶ್ವ ಮಟ್ಟದಲ್ಲಿ 20ರ ಆಸುಪಾಸಿನ ಸ್ಥಾನದಲ್ಲಿದ್ದ ಭಾರತ ಮೇ.25ಕ್ಕೆ 10ನೇ ಸ್ಥಾನ ತಲುಪಿತ್ತು. ಆಗ ಸೋಂಕಿತರ ಸಂಖ್ಯೆ 1.41ಲಕ್ಷ ಇತ್ತು. ಅದಾದ 1 ತಿಂಗಳಲ್ಲಿ ಇದೀಗ 2.97 ಲಕ್ಷ ಸೋಂಕಿತರೊಂದಿಗೆ ದೇಶ 4ನೇ ಸ್ಥಾನಕ್ಕೆ ಏರಿದೆ. ಅಮೆರಿಕಾ. ಬ್ರೆಜಿಲ್, ರಷ್ಯಾ ಹೆಚ್ಚು ಸೋಂಕಿತರೊಂದಿಗೆ ಟಾಪ್ 3 ಸ್ಥಾನದಲ್ಲಿದೆ.
ಇನ್ನು ಮಹಾರಾಷ್ಟ್ರದಲ್ಲಿ ಗುರುವಾರ ದಾಖಲೆಯ 3607 ಮಂದಿಯಲ್ಲಿ ಹೊಸದಾಗಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಇಲ್ಲಿ ಸೋಂಕಿತರ ಸಂಖ್ಯೆ 97,648ಕ್ಕೆ ಏರಿಕೆಯಾಗಿದೆ. ಮತ್ತೊಂದೆಡೆ, ಗುರುವಾರ ಒಂದೇ ದಿನ ವ್ಯಾಧಿಗೆ 152 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಒಟ್ಟು ಸಾವಿನ ಸಂಖ್ಯೆ 3590ಕ್ಕೆ ಜಿಗಿದಿದೆ. ಉಳಿದಂತೆ ದೆಹಲಿಯಲ್ಲಿ 1877, ತಮಿಳುನಾಡಿನಲ್ಲಿ 1871, ಗುಜರಾತ್ ನಲ್ಲಿ 513 ಹಾಗೂ ಉತ್ತರಪ್ರದೇಶದಲ್ಲಿ 477 ಮಂದಿಗೆ ಈ ಸೋಂಕಿಗೆ ತುತ್ತಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


