ರಾಜಸ್ಥಾನ ಸಚಿವ ಸಂಪುಟ ಸಭೆ: ರಾಜ್ಯಪಾಲರ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧ, ಜುಲೈ 31ರಂದೇ ಅಧಿವೇಶನ ಎಂದ ಸಿಎಂ ಗೆಹ್ಲೂಟ್ ಬಣ
ರಾಜಸ್ಥಾನ ರಾಜಕೀಯ ಬಿಕ್ಕಟ್ಟು ಮುಂದುವರೆದಿರುವಂತೆಯೇ ಇತ್ತ ಸಿಎಂ ಆಶೋಕ್ ಗೆಹ್ಲೂಟ್ ಅವರು ಇಂದು ಸಚಿವ ಸಂಪುಟ ಸಭೆ ನಡೆಸಿದ್ದಾರೆ.

ಜೈಪುರ: ರಾಜಸ್ಥಾನ ರಾಜಕೀಯ ಬಿಕ್ಕಟ್ಟು ಮುಂದುವರೆದಿರುವಂತೆಯೇ ಇತ್ತ ಸಿಎಂ ಆಶೋಕ್ ಗೆಹ್ಲೂಟ್ ಅವರು ಇಂದು ಸಚಿವ ಸಂಪುಟ ಸಭೆ ನಡೆಸಿದ್ದಾರೆ.
ಈ ಹಿಂದೆ ರಾಜಸ್ಛಾನ ರಾಜ್ಯಪಾಲ ಕಲ್ರಾಜ್ ಮಿಶ್ರಾ ಅವರು ವಿಧಾನಸಭೆ ಅಧಿವೇಶನ ನಡೆಸುವ ಕುರಿತು ಕೆಲ ಪ್ರಶ್ನೆಗಳನ್ನು ಕೇಳಿದ್ದರು. ಇದೇ ಪ್ರಶ್ನೆಗಳ ವಿಚಾರವಾಗಿ ಗೆಹ್ಲೂಟ್ ಅವರು, ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಅಲ್ಲದೆ ರಾಜ್ಯಪಾಲರು ಇಟ್ಟಿರುವ ಬೇಡಿಕೆಯಲ್ಲಿನ ಅಂಶಗಳಿಗೆ ಅನುಗುಣವಾಗಿ ಜುಲೈ 31ರಂದು ವಿಧಾನಸಭೆ ಅಧಿವೇಶನ ನಡೆಸುವ ಕುರಿತು ಗಂಭೀರ ಚಿಂತನೆ ನಡೆಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ರಾಜಸ್ಥಾನ ಸಾರಿಗೆ ಸಚಿವ ಪ್ರತಾಪ್ ಸಿಂಗ್ ಅವರು, ಸಂಪುಟ ಸಭೆಯಲ್ಲಿ ರಾಜ್ಯಪಾಲರು ಕೇಳಿದ ಹಲವು ಅಂಶಗಳ ಕುರಿತು ಚರ್ಚೆ ನಡೆಸಲಾಗಿದೆ ಎಂದು ಹೇಳಿದರು.
ಕ್ಯಾಬಿನೆಟ್ ಸಭೆಯಲ್ಲಿ ಜುಲೈ 31ರಿಂದ ಸರ್ಕಾರ ಅಧಿವೇಶನ ನಡೆಸಲು ತೀರ್ಮಾನಿಸಿದೆ. ಅಂತೆಯೇ ಸರ್ಕಾರ ಸುಭದ್ರವಾಗಿದ್ದು, ಹೀಗಾಗಿ ನಾವು ಪ್ರತಿಕ್ರಿಯೆ ನೀಡುವವರೆಗೂ ಅವರು ಮತ್ತೆ ಪ್ರಶ್ನೆಗಳನ್ನು ಕೇಳಬಾರದು. ಸರ್ಕಾರ ಯಾವುದೇ ಕಾರಣಕ್ಕೂ ರಾಜ್ಯಪಾಲರೊಂದಿಗಿನ ತಿಕ್ಕಾಟವನ್ನು ಬಯಸುವುದಿಲ್ಲ. ಸಚಿವ ಸಂಪುಟ ಸಭೆಯ ನಿರ್ಣಯವನ್ನು ರಾಜ್ಯಪಾಲರು ಒಪ್ಪಿಕೊಳ್ಳಲ್ಲಿದ್ದಾರೆ ಎಂದು ಭಾವಿಸುತ್ತೇವೆ. ಜುಲೈ 31ರ ಅಧಿವೇಶನಕ್ಕೆ ರಾಜ್ಯಪಾಲರು ಅನುಮತಿ ನೀಡುವ ವಿಶ್ವಾಸವಿದೆ ಎಂದು ಹೇಳಿದರು.
ಅಧಿವೇಶನ ನಡೆಸುವುದು ಸರ್ಕಾರದ ಹಕ್ಕು. ಇದಕ್ಕಾಗಿ ರಾಜ್ಯಪಾಲರ ಅನುಮತಿ ಬೇಕು. ಒಂದು ವೇಳೆ ಅವರು ಅನುಮತಿ ನಿರಾಕರಿಸಿದರೆ ಆಗ ರಾಜ್ಯಪಾಲರೂ ಕೂಡ ಬಿಜೆಪಿ ವಕ್ತಾರರು ಎಂಬುದು ಸ್ಪಷ್ಟವಾಗುತ್ತದೆ. ಈ ದೇಶದಲ್ಲಿ ಸಂವಿಧಾನಕ್ಕೆ ಯಾವುದೇ ರೀತಿಯ ಮನ್ನಣೆ ಇಲ್ಲ ಎಂಬುದು ಸಾಬೀತಾಗುತ್ತದೆ. ಆಗ ನಾವು ಮುಂದಿನ ಮಾರ್ಗದ ಕುರಿತು ಚರ್ಚೆ ನಡೆಸುತ್ತೇವೆ. ನಾವು ಈಗಲೂ ಹೇಳುತ್ತೇವೆ ರಾಜ್ಯಪಾಲರೇ ಸರ್ಕಾರದ ಪ್ರಮುಖರು. ಒಂದು ಕುಟುಂಬದಲ್ಲಿ ಹೇಗೆ ಹಿರಿಯರಿಗೆ ಬೆಲೆ ನೀಡುತ್ತೇವೆಯೋ ಹಾಗೆ ನಾವು ರಾಜ್ಯಪಾಲರಿಗೆ ಗೌರವ ನೀಡುತ್ತೇವೆ ಎಂದು ಸಿಂಗ್ ಹೇಳಿದ್ದಾರೆ.
ಇನ್ನು ಅಧಿವೇಶನದ ಅಜೆಂಡಾ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಂಗ್, ಈ ಬಗ್ಗೆ ವಿಧಾನಸಭೆಯ ವ್ಯವಹಾರ ಸಲಹಾ ಸಮಿತಿ ನಿರ್ಧರಿಸುತ್ತದೆ ಎಂದು ಹೇಳಿದರು. ಇದೇ ವೇಳೆ ಬಿಜೆಪಿ ವಿರುದ್ಧ ಕಿಡಿಕಾರಿದ ಸಿಂಗ್ ಅವರು ಸರ್ಕಾರವನ್ನು ಉರುಳಿಸಲು ಯತ್ನಿಸುತ್ತಿದ್ದಾರೆ. ಸರ್ಕಾರವನ್ನು ಉರುಳಿಸುವುದನ್ನೇ ಪ್ರತಿಷ್ಠೆಯನ್ನಾಗಿಸಿ ಕೊಂಡಿದೆ. ಆದರೆ ಬಿಜೆಪಿಯ ಅಸಂವಿಧಾನಿಕ ನಿಲುವು ಈಗ ಜಗಜ್ಜಾಹಿರಾಗಿದೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


