ರಾಜಸ್ಥಾನ: ಪ್ರತಿಭಟನಾ ನಿರತರ ಮೇಲೆ ಅಶ್ರುವಾಯು, ಜಲಫಿರಂಗಿ ಬಳಸಿದ ಪೊಲೀಸರು, ಆಕ್ರೋಶಿತ ರೈತರಿಂದ ಬ್ಯಾರಿಕೇಡ್ ಮುರಿದು ಒಳಪ್ರವೇಶ
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾನೂನುಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ಅಗ್ರಹಿಸಿ ರಾಜಸ್ಥಾನದಲ್ಲೂ ನಡೆಯುತ್ತಿರುವ ರೈತರ ಪ್ರತಿಭಟನೆ ಇಂದು ದಿಢೀರ್ ಹಿಂಸಾಚಾರಕ್ಕೆ ತಿರುಗಿದ್ದು, ಪ್ರತಿಭಟನಾ ನಿರತರ ಮೇಲೆ ಪೊಲೀಸರು ಅಶ್ರುವಾಯು, ಜಲಫಿರಂಗಿ ಬಳಸಿದಕ್ಕಾಗಿ ಆಕ್ರೋಶಗೊಂಡ ರೈತರು ಅಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್ ಗಳನ್ನು ಮುರಿದು ದಾಂಧಲೆ ಸೃಷ್ಟಿಸಿದ

ಅಮೃತಸರ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾನೂನುಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ಅಗ್ರಹಿಸಿ ರಾಜಸ್ಥಾನದಲ್ಲೂ ನಡೆಯುತ್ತಿರುವ ರೈತರ ಪ್ರತಿಭಟನೆ ಇಂದು ದಿಢೀರ್ ಹಿಂಸಾಚಾರಕ್ಕೆ ತಿರುಗಿದ್ದು, ಪ್ರತಿಭಟನಾ ನಿರತರ ಮೇಲೆ ಪೊಲೀಸರು ಅಶ್ರುವಾಯು, ಜಲಫಿರಂಗಿ ಬಳಸಿದಕ್ಕಾಗಿ ಆಕ್ರೋಶಗೊಂಡ ರೈತರು ಅಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್ ಗಳನ್ನು ಮುರಿದು ದಾಂಧಲೆ ಸೃಷ್ಟಿಸಿದ್ದಾರೆ.
ಹೌದು.. ರಾಜಸ್ಥಾನ-ಹರ್ಯಾಣದ ಶಹಜಹಾನಪುರ ಗಡಿಯಲ್ಲಿ ರೈತರು ಪೊಲೀಸರ ತಡೆಗೋಡೆಯನ್ನು ಭೇದಿಸಿ ರಾಷ್ಟ್ರ ರಾಜಧಾನಿ ದೆಹಲಿಯತ್ತ ನುಗ್ಗಿದ ಕಾರಣ ಪೊಲೀಸರು ಪ್ರತಿಭಟನಾ ನಿರತರ ಮೇಲೆ ಅಶ್ರುವಾಯು, ಜಲಫಿರಂಗಿ ಬಳಸಿದ್ದಾರೆ. ಸುಮಾರು 25ಕ್ಕೂ ಹೆಚ್ಚು ಟ್ರಾಕ್ಟರ್ ಗಳಲ್ಲಿ ಆಗಮಿಸಿದ್ದ ರೈತರು ದೆಹಲಿಯತ್ತ ನುಗ್ಗಲು ಯತ್ನಿಸಿದರು ಎನ್ನಲಾಗಿದೆ.ಈ ವೇಳೆ ಪೊಲೀಸರ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದ ರೈತರು ಪೊಲೀಸರ ವಿರುದ್ಧವೇ ತಿರುಗಿ ಬಿದ್ದರು. ಈ ವೇಳೆ ಪರಿಸ್ಥಿತಿ ಕೈಮೀರಿ ರೈತರು ಪೊಲೀಸರು ನಿರ್ಮಿಸಿದ್ದ ಬ್ಯಾರಿಕೇಡ್ ಗಳನ್ನು ಮುರಿದು ಹಾಕಿದ್ದಾರೆ.
ಇನ್ನು ಇದೇ ವೇಳೆ ಸ್ಥಳದಲ್ಲಿದ್ದ ರೈತ ಮುಖಂಡರು ಪೊಲೀಸರ ಬ್ಯಾರಿಕೇಡ್ ಮುರಿದು ಒಳಗೆ ನುಗ್ಗಿದ ರೈತರಿಗೂ ತಮಗೂ ಯಾವುದೇ ರೀತಿಯ ಸಂಬಂಧವಿಲ್ಲ. ಅವರು ನಮ್ಮ ಅನುಮತಿ ಪಡೆದಿಲ್ಲ. ಹೀಗಾಗಿ ಘಟನೆಗೂ ಹಾಗೂ ಈ ಹಿಂದಿನಿಂದಲೂ ಈ ಸ್ಥಳದಲ್ಲಿ ಪ್ರತಿಭಟನೆ ರೈತರಿಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಕಿಸಾನ್ ಮಹಾಪಂಚಾಯತ್ ಅಧ್ಯಕ್ಷ ರಾಂಪಾಲ್ ಜಾಟ್ ಅವರು ಮಾತನಾಡಿ, ಆಂದೋಲನವು ಶಾಂತಿಯುತವಾಗಿ ನಡೆಯುತ್ತಿದೆ. ಆದರೆ ಕೆಲವು ರೈತರು ಬಲವಂತವಾಗಿ ಹರ್ಯಾಣ ಪ್ರವೇಶಿಸಿದ್ದಾರೆ. ಇದನ್ನು ನಾವು ನಿರೀಕ್ಷಿಸಿರಲಿಲ್ಲ ಎಂದು ಹೇಳಿದ್ದಾರೆ.
ಇದೇ ವಿಚಾರವಾಗಿ ಮಾತನಾಡಿದ ಹರಿಯಾಣ ಪೊಲೀಸ್ ಅಧಿಕಾರಿಗಳು, ' ದೆಹಲಿಯತ್ತ ಸಾಗುವ ಉದ್ದೇಶದಿಂದ ರೈತರು, ಹೆಚ್ಚಾಗಿ ಯುವಕರು, ಪೊಲೀಸರು ನಿರ್ಮಿಸಿದ್ದ ಬ್ಯಾರಿಕೇಡ್ಗಳನ್ನು ಭೇದಿಸಿದ್ದಾರೆ. ಹೀಗಾಗಿ ಹರಿಯಾಣ ಪೊಲೀಸರು ಜಲ ಫಿರಂಗಿ ಮತ್ತು ಅಶ್ರುವಾಯು ಬಳಕೆ ಮಾಡಿ ಪ್ರತಿಭಟನಾ ನಿರತರನ್ನು ತಡೆಯಲು ಯತ್ನಿಸಿದರು. ಇದಕ್ಕೂ ಮೊದಲು ಅಧಿಕಾರಿಗಳು ರೈತರಿಗೆ ಸಾಕಷ್ಟು ಎಚ್ಚರಿಕೆ ನೀಡಿದರೂ ರೈತರು ಬಲವಂತವಾಗಿ ಮತ್ತು ಹಿಂಸಾತ್ಮಕವಾಗಿ ಬ್ಯಾರಿಕೇಡ್ ಗಳನ್ನು ಬೇಧಿಸಿದರು. ಹೀಗಾಗಿ ಅನಿವಾರ್ಯವಾಗಿ ಅವರನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಲಾಯಿತು. ಬ್ಯಾರಿಕೇಡ್ ಬಳಸಿ ಒಳಗೆ ನುಗ್ಗಿದ್ದ ಟ್ರಾಕ್ಟರ್ ಗಳನ್ನು ಮತ್ತು ರೈತರನ್ನು ತಡೆಯಲಾಯಿತು. ರೈತರು ಅತ್ಯಂತ ಅಜಾಗರೂಕತೆಯಿಂದ ಟ್ರಾಕ್ಟರ್ ಗಳನ್ನು ಓಡಿಸುತ್ತಿದ್ದರು. ಈ ವೇಳೆ ಕೊಂಚ ಪರಿಸ್ಥಿತಿ ಕೈ ಮೀರಿದ್ದರೂ ಅವುಗಳನ್ನು ತಡೆಯಲು ಯತ್ನಿಸಿದ ಪೊಲೀಸ್ ಸಿಬ್ಬಂದಿಗಳಿಗೆ ಪ್ರಾಣಹಾನಿಯಾಗುವ ಸಾಧ್ಯತೆ ಇತ್ತು ಎಂದು ಹೇಳಿದರು.
ಅತ್ತ ರೈತರ ಒಂದು ಗುಂಪು ಬ್ಯಾರಿಕೇಡ್ ಗಳನ್ನು ಭೇಧಿಸುತ್ತಿದ್ದರೆ ಇತ್ತ ಸ್ಥಳದಲ್ಲಿದ್ದ ರೈತರ ಮತ್ತೊಂದು ಗುಂಪು ರೈತರನ್ನು ಸಂತೈಸುವ ಕಾರ್ಯ ಮಾಡಿತ್ತು. ರೈತ ಮುಖಂಡರು ಶಾಂತಿಯಿಂದ ವರ್ತಿಸುವಂತೆ ಕೋರಿದರು. 'ನಾವು ಇಲ್ಲಿ ಶಾಂತಿಯುತವಾಗಿಹೋರಾಟ ನಡೆಸುತ್ತಿದ್ದೇವೆ. ಹಿಂಸಾಚಾರದಿಂದ ಏನೂ ಮಾಡಲು ಸಾಧ್ಯವಿಲ್ಲ. ಸಂಯಮ ವಹಿಸಿ ಎಂದು ನಮ್ಮ ಸದಸ್ಯರನ್ನು ಕೇಳುತ್ತಿದ್ದೇವೆ. ಹರಿಯಾಣಕ್ಕೆ ಪ್ರವೇಶಿಸಿದವರೊಂದಿಗೆ ಮಾತನಾಡಲು ಮರಳಲು ಮನವೊಲಿಸಲು ನಮ್ಮ ಕೆಲವು ಸದಸ್ಯರನ್ನು ಕಳುಹಿಸಿದ್ದೇವೆ" ಎಂದು ಕಿಸಾನ್ ಮಹಾಪಂಚಾಯತ್ ಅಧ್ಯಕ್ಷ ರಾಂಪಾಲ್ ಜಾಟ್ ಹೇಳಿದರು.
ಅಂತೆಯೇ 'ದೆಹಲಿ ಮಾರ್ಚ್ ಅಷ್ಟು ಮುಖ್ಯವಲ್ಲ ಏಕೆಂದರೆ ನಾವು ಸರ್ಕಾರದೊಂದಿಗಿನ ಮಾತುಕತೆಯ ಮೂಲಕ ಸಮಸ್ಯೆಯನ್ನು ಪರಿಹರಿಸಲು ಬಯಸುತ್ತೇವೆ" ಎಂದೂ ಅವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


