ಸರ್ಕಾರದ ಮೇಲೆ ವಿಶ್ವಾಸ ಉಳಿದಿಲ್ಲ; ರೈತರಿಗಾಗಿ 'ಅಂತಿಮ ಹೋರಾಟ': ಅಣ್ಣಾ ಹಜಾರೆ
ರೈತರ ಪ್ರತಿಭಟನೆ 2ನೇ ತಿಂಗಳಿಗೆ ಕಾಲಿಟ್ಟಿರುವಂತೆಯೇ ರೈತರಿಗಾಗಿ 'ಅಂತಿಮ ಹೋರಾಟ' ಮಾಡುತ್ತೇನೆ ಖ್ಯಾತ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ನವದೆಹಲಿ: ರೈತರ ಪ್ರತಿಭಟನೆ 2ನೇ ತಿಂಗಳಿಗೆ ಕಾಲಿಟ್ಟಿರುವಂತೆಯೇ ರೈತರಿಗಾಗಿ 'ಅಂತಿಮ ಹೋರಾಟ' ಮಾಡುತ್ತೇನೆ ಖ್ಯಾತ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಭಾನುವಾರ ಮಹಾರಾಷ್ಟ್ರದ ಅಹ್ಮದ್‌ನಗರ ಜಿಲ್ಲೆಯ ರಾಳೆಗಣ ಸಿದ್ಧಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಣ್ಣಾ ಹಜಾರೆ ಅವರು, 'ರೈತರಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ತನ್ನ ಬೇಡಿಕೆಗಳನ್ನು ಕೇಂದ್ರ ಸರ್ಕಾರವು ಮುಂದಿನ ವರ್ಷದ ಜನವರಿಯೊಳಗೆ ಈಡೇರಿಸದಿದ್ದರೆ ಉಪವಾಸ ಮುಷ್ಕರವನ್ನು ಆರಂಭಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇದು ತನ್ನ ಅಂತಿಮ ಪ್ರತಿಭಟನೆಯಾಗಲಿದೆ ಎಂದೂ ಹೇಳಿದ್ದಾರೆ.
'ರೈತರಿಗಾಗಿ ತಾನು ಕಳೆದ ಮೂರು ವರ್ಷಗಳಿಂದಲೂ ಪ್ರತಿಭಟನೆಗಳನ್ನು ನಡೆಸುತ್ತಿದ್ದೇನೆ. ಆದರೆ ಸಮಸ್ಯೆಗಳನ್ನು ಬಗೆಹರಿಸಲು ಕೇಂದ್ರ ಸರ್ಕಾರವು ಏನನ್ನೂ ಮಾಡಿಲ್ಲ. ಸರ್ಕಾರವು ಕೇವಲ ಪೊಳ್ಳು ಭರವಸೆಗಳನ್ನಷ್ಟೇ ನೀಡುತ್ತಿದೆ. ಹೀಗಾಗಿ ನನಗೆ ಸರ್ಕಾರದಲ್ಲಿ ಯಾವುದೇ ಭರವಸೆ ಉಳಿದಿಲ್ಲ. ಸರ್ಕಾರ ಸಮಯಾವಕಾಶವನ್ನು ಕೋರಿದ್ದರಿಂದ ಜನವರಿ ಅಂತ್ಯದವರೆಗೆ ಗಡುವು ನೀಡಿದ್ದೇನೆ. ನನ್ನ ಬೇಡಿಕೆಗಳು ಈಡೇರದಿದ್ದರೆ ಉಪವಾಸ ಸತ್ಯಾಗ್ರಹವನ್ನು ಆರಂಭಿಸುತ್ತೇನೆ ಮತ್ತು ಇದು ನನ್ನ ಅಂತಿಮ ಪ್ರತಿಭಟನೆಯಾಗಲಿದೆ ಎಂದು 83ರ ಹರೆಯದ ಹಜಾರೆ ಹೇಳಿದರು.
ಎಂ.ಎಸ್.ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಅನುಷ್ಠಾನ ಹಾಗೂ ಕೃಷಿ ವೆಚ್ಚಗಳು ಮತ್ತು ಬೆಲೆಗಳ ಆಯೋಗಕ್ಕೆ ಸ್ವಾಯತ್ತತೆಯಂತಹ ತನ್ನ ಬೇಡಿಕೆಗಳನ್ನು ಈಡೇರಿಸದಿದ್ದರೆ ಉಪವಾಸ ಮುಷ್ಕರವನ್ನು ಕೈಗೊಳ್ಳುವುದಾಗಿ ಹಜಾರೆ ಡಿ.14ರಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರಿಗೆ ಬರೆದಿದ್ದ ಪತ್ರದಲ್ಲಿ ಎಚ್ಚರಿಕೆ ನೀಡಿದ್ದರು. ಹಿರಿಯ ಬಿಜೆಪಿ ನಾಯಕ ಹಾಗೂ ಮಹಾರಾಷ್ಟ್ರ ವಿಧಾನಸಭೆಯ ಮಾಜಿ ಸ್ಪೀಕರ್ ಹರಿಭಾವು ಬಾಗಡೆ ಅವರು ಇತ್ತೀಚಿಗೆ ಹಝಾರೆಯವರನ್ನು ಭೇಟಿಯಾಗಿ ಕೇಂದ್ರವು ತಂದಿರುವ ಮೂರು ನೂತನ ಕೃಷಿ ಕಾನೂನುಗಳ ಬಗ್ಗೆ ಅವರಿಗೆ ವಿವರಗಳನ್ನು ನೀಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


