ದೇಶ

ಫಾರೂಕ್‌ ಅಬ್ದುಲ್ಲಾ ಆಸ್ತಿ ಜಪ್ತಿ: ಇಡಿ ಕ್ರಮ ಸರಿಯಲ್ಲ ಎಂದ ಒಮರ್ ಅಬ್ದುಲ್ಲಾ!

ಕಾಶ್ಮೀರ ಕ್ರಿಕೆಟ್ ಸಂಸ್ಥೆಯಲ್ಲಿ ಹಣಕಾಸಿನ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ತಮ್ಮ ತಂದೆ ಫಾರೂಕ್ ಅಬ್ದುಲ್ಲಾ ಅವರಿಗೆ ಸೇರಿದ ಆಸ್ತಿ-ಪಾಸ್ತಿಗಳನ್ನು ಮುಟ್ಟುಗೋಲು ಹಾಕಿರುವ ಕ್ರಮ ಸರಿಯಲ್ಲ ಎಂದು ಜಮ್ಮು ಮತ್ತು ಕಾಶ್ಮೀರ ಮಾಜಿ ಸಿಎಂ ಒಮರ್ ಅಬ್ದುಲ್ಲಾ ಹೇಳಿದ್ದಾರೆ.

ಫಾರೂಕ್‌ ಅಬ್ದುಲ್ಲಾ ಆಸ್ತಿ ಜಪ್ತಿ: ಇಡಿ ಕ್ರಮ ಸರಿಯಲ್ಲ ಎಂದ ಒಮರ್ ಅಬ್ದುಲ್ಲಾ!
ಒಮರ್ ಅಬ್ದುಲ್ಲಾ
Published On :

ಶ್ರೀನಗರ: ಕಾಶ್ಮೀರ ಕ್ರಿಕೆಟ್ ಸಂಸ್ಥೆಯಲ್ಲಿ ಹಣಕಾಸಿನ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ತಮ್ಮ ತಂದೆ ಫಾರೂಕ್ ಅಬ್ದುಲ್ಲಾ ಅವರಿಗೆ ಸೇರಿದ ಆಸ್ತಿ-ಪಾಸ್ತಿಗಳನ್ನು ಮುಟ್ಟುಗೋಲು ಹಾಕಿರುವ ಕ್ರಮ ಸರಿಯಲ್ಲ ಎಂದು ಜಮ್ಮು ಮತ್ತು ಕಾಶ್ಮೀರ ಮಾಜಿ ಸಿಎಂ  ಒಮರ್ ಅಬ್ದುಲ್ಲಾ ಹೇಳಿದ್ದಾರೆ.

ಜಮ್ಮು-ಕಾಶ್ಮೀರ ಕ್ರಿಕೆಟ್‌ ಸಂಸ್ಥೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಕುರಿತಂತೆ ತನಿಖೆ ನಡೆಸುತ್ತಿರುವ ಇ.ಡಿ, ಈ ಸಂಬಂಧ ಫಾರೂಕ್‌ ಅಬ್ದುಲ್ಲಾ ಅವರಿಗೆ ಸೇರಿದ ಆಸ್ತಿಯನ್ನು ಶನಿವಾರ ಜಪ್ತಿ ಮಾಡಿದೆ.ಈ ಕುರಿತಂತೆ ಸರಣಿ ಟ್ವೀಟ್ ಮಾಡಿರುವ ಒಮರ್ ಅಬ್ದುಲ್ಲಾ, 'ನನ್ನ ತಂದೆ  ಫಾರೂಕ್‌ ಅಬ್ದುಲ್ಲಾ ಅವರಿಗೆ ಸೇರಿದ 12 ಕೋಟಿ ರೂ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ) ಜಪ್ತಿ ಮಾಡಿದೆ. ಆದರೆ, ಈ ಕ್ರಮಕ್ಕೆ ಯಾವುದೇ ಸಮರ್ಥನೆಯೇ ಇಲ್ಲ. ಇ.ಡಿ ಜಪ್ತಿ ಮಾಡಿರುವ ಆಸ್ತಿಗಳ ಪೈಕಿ ಹೆಚ್ಚಿನವು ನಮ್ಮ ಪೂರ್ವಾರ್ಜಿತ. ಈ ಆಸ್ತಿಗಳನ್ನು 1970ರಿಂದ  ಖರೀದಿ ಮಾಡಲಾಗಿದೆ. ಒಂದು ಕಟ್ಟಡವನ್ನು 2003ರಲ್ಲಿ ನಿರ್ಮಿಸಲಾಗಿದೆ. ನಮ್ಮಿಂದ ಏನೋ ಅಕ್ರಮ ನಡೆದಿದೆ ಎಂಬ ಕಾರಣ ನೀಡಿ ಈ ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ. ಆದರೆ, ತನ್ನ ಕ್ರಮಕ್ಕೆ ಸಮರ್ಥನೆ ನೀಡುವಲ್ಲಿ ಇ.ಡಿ ವಿಫಲವಾಗಲಿದೆ ಎಂದು ಒಮರ್ ಅಬ್ದುಲ್ಲಾ‌ ಟ್ವೀಟ್‌ ಮಾಡಿದ್ದಾರೆ.

ಅಂತೆಯೇ, 'ನಮ್ಮ ಆಸ್ತಿಯನ್ನು ಜಪ್ತಿ ಮಾಡುವ ಬಗ್ಗೆ ಇ.ಡಿ ನೀಡುವ ಅಧಿಕೃತ ನೋಟಿಸ್‌ ನನ್ನ ತಂದೆ ಕೈ ಸೇರುವ ಮುನ್ನವೇ, ಈ ವಿಷಯ ಮಾಧ್ಯಮಗಳಿಗೆ ಗೊತ್ತಾಗಿದೆ. ಆಸ್ತಿ ಜಪ್ತಿ ಕುರಿತ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟಗೊಂಡಿದ್ದನ್ನೂ ನನ್ನ ತಂದೆ ಗಮನಿಸಿದ್ದಾರೆ. ಇದರಲ್ಲಿ ಅಚ್ಚರಿಪಡುವ  ಸಂಗತಿ ಏನಿಲ್ಲ. ನನ್ನ ತಂದೆ ವಕೀಲರೊಂದಿಗೆ ಸಮಾಲೋಚನೆ ನಡೆಸುತ್ತಿದ್ದು, ಈ ವಿಷಯದಲ್ಲಿ ಕಾನೂನು ಹೋರಾಟ ಮಾಡುತ್ತೇವೆ. ನಮ್ಮ ವಿರುದ್ಧ ಮಾಡಿರುವ ಆರೋಪಗಳು ಸಂಪೂರ್ಣ ನಿರಾಧಾರ. ಮಾಧ್ಯಮಗಳು ಅಥವಾ ಬಿಜೆಪಿ ನಿರ್ವಹಿಸುವ ಸಾಮಾಜಿಕ ಮಾಧ್ಯಮಗಳ ವಿಚಾರಣೆ  ಬೇಕಿಲ್ಲ. ಕೋರ್ಟ್‌ನಲ್ಲಿ ನಿಷ್ಪಕ್ಷಪಾತ ವಿಚಾರಣೆ ನಡೆಯಲಿದ್ದು, ಈ ಕಾನೂನು ಹೋರಾಟದಲ್ಲಿ ಜಯ ಸಿಗುವ ವಿಶ್ವಾಸ ಇದೆ ಎಂದು ಹೇಳಿದ್ದಾರೆ.

ಇದೇ ವೇಳೆ ಫಾರೂಕ್ ಅಬ್ದುಲ್ಲಾ ಅವರೂ ಕೂಡ ಈ ಕುರಿತಂತೆ ಪ್ರತಿಕ್ರಿಯೆ ನೀಡಿದ್ದು, 'ನಾನು ತಲೆ ಬಾಗುವಂತೆ ಮಾಡುವ ಉದ್ದೇಶದಿಂದಲೇ ಇ.ಡಿ ಮೂಲಕ ಇಂಥ ಕ್ರಮ ಕೈಗೊಳ್ಳಲಾಗಿದೆ. ಆದರೆ, ನಾನು ಯಾರಿಗೂ ತಲೆ ಬಾಗುವುದಿಲ್ಲ. ಇ.ಡಿ ತನ್ನ ಕೆಲಸ ಮಾಡಲಿ, ನಾನು ನನ್ನ ಕೆಲಸ  ಮಾಡುತ್ತೇನೆ' ಎಂದು ಹೇಳಿದ್ದಾರೆ.

ಇದೇ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಹಾಗೂ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು, ಫಾರೂಕ್ ಅಬ್ದುಲ್ಲಾ ಅವರ ಆಸ್ತಿ ಜಪ್ತಿ ಹಿಂದೆ ಸಂಪೂರ್ಣ ರಾಜಕೀಯ ದುರುದ್ದೇಶವಡಗಿದೆ. ಬಿಜೆಪಿ ಸರ್ಕಾರ ಸರ್ಕಾರದ ಉನ್ನತ ಸಂಸ್ಥೆಗಳನ್ನು ತನ್ನ ರಾಜಕೀಯ ದ್ವೇಷಕ್ಕೆ  ಬಳಸಿಕೊಳ್ಳುತ್ತಿವೆ. ಮೈತ್ರಿಕೂಟದ ವಿರುದ್ಧ ಬಿಜೆಪಿ ಎಷ್ಟರ ಮಟ್ಟಿಗೆ ಆಕ್ರೋಶ ಮತ್ತು ಹತಾಶೆ ಇದೆ ಎಂಬುದನ್ನು ಎನ್ಐಎ ಮತ್ತು ಇಡಿ ಸತತ ದಾಳಿಗಳೇ ತೋರಿಸುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.