ನಾವೆಲ್ಲರೂ ಇಂದು ಒಂದಾಗಿ ಯುದ್ಧವನ್ನು ಎದುರಿಸುತ್ತಿದ್ದೇವೆ, ಇಲ್ಲಿ ಪ್ರತಿಯೊಬ್ಬ ಭಾರತೀಯ ಸೈನಿಕ:ಪಿಎಂ ನರೇಂದ್ರ ಮೋದಿ
ಇಂದು ನಾವೆಲ್ಲರೂ ಯುದ್ಧ ಸನ್ನಿವೇಶದ ಮಧ್ಯದಲ್ಲಿದ್ದೇವೆ, ಅದು ಕೊರೋನಾ ವೈರಸ್ ವಿರುದ್ಧದ ಯುದ್ಧ.ಈ ಯುದ್ಧದಲ್ಲಿ ಭಾರತದ ಹೋರಾಟವು ಜನರನ್ನು ಪ್ರೇರೇಪಿಸುತ್ತಿದೆ. ಸಾರ್ವಜನಿಕರು, ಜನಸೇವಕರು, ಅಧಿಕಾರಿಗಳು ಎಲ್ಲರೂ ಒಟ್ಟಾಗಿ ನಡೆಸುತ್ತಿರುವ ಹೋರಾಟವಿದು. ಇಲ್ಲಿನ ಪ್ರತಿಯೊಬ್ಬ ಪ್ರಜೆ ಕೊರೋನಾ ಯುದ್ಧವನ್ನು ಸೈನಿಕರಂತೆ ಹೋರಾಡುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದ

ನವದೆಹಲಿ: ಇಂದು ನಾವೆಲ್ಲರೂ ಯುದ್ಧ ವಾತಾವರಣದ ಮಧ್ಯದಲ್ಲಿದ್ದೇವೆ, ಅದು ಕೊರೋನಾ ವೈರಸ್ ವಿರುದ್ಧದ ಯುದ್ಧ.ಈ ಯುದ್ಧದಲ್ಲಿ ಭಾರತದ ಹೋರಾಟವು ಜನರನ್ನು ಪ್ರೇರೇಪಿಸುತ್ತಿದೆ. ಸಾರ್ವಜನಿಕರು, ಜನಸೇವಕರು, ಅಧಿಕಾರಿಗಳು ಎಲ್ಲರೂ ಒಟ್ಟಾಗಿ ನಡೆಸುತ್ತಿರುವ ಹೋರಾಟವಿದು. ಇಲ್ಲಿನ ಪ್ರತಿಯೊಬ್ಬ ಪ್ರಜೆ ಕೊರೋನಾ ಯುದ್ಧವನ್ನು ಸೈನಿಕರಂತೆ ಹೋರಾಡುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಅವರು ಇಂದು ತಮ್ಮ ಆಕಾಶವಾಣಿಯ ತಿಂಗಳ ಕಾರ್ಯಕ್ರಮ ಮನದ ಮಾತಿನಲ್ಲಿ ಮುಖ್ಯವಾಗಿ ಕೊರೋನಾ ವೈರಸ್ ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಪ್ರಸ್ತಾಪಿಸಿದರು.
ಕೊರೋನಾ ವಿರುದ್ಧ ಹೋರಾಡುತ್ತಿರುವ ಕೊರೋನಾ ವಾರಿಯರ್ಸ್ ರನ್ನು coronawarriors.gov.in ಪೋರ್ಟಲ್ ಮೂಲಕ ಸಂಪರ್ಕಿಸುವಂತೆ ಒತ್ತಾಯಿಸಿದರು. ಇತ್ತೀಚೆಗೆ ಆರಂಭಗೊಂಡ ಈ ಪೋರ್ಟಲ್ ನಲ್ಲಿ ಈಗಾಗಲೇ 1.25 ಕೋಟಿ ಜನರು ಸಂಪರ್ಕ ಹೊಂದಿದ್ದಾರೆ ಎಂದರು.
ಸಾಮಾಜಿಕ ಸಂಘಟನೆಯ ಕಾರ್ಯಕರ್ತರು, ನಾಗರಿಕ ಸಮಾಜ ಮತ್ತು ಸ್ಥಳೀಯ ಆಡಳಿತ ಅಧಿಕಾರಿಗಳು ಇದರ ಮೂಲಕ ಸಂಪರ್ಕಿಸಬಹುದು. ಈ ಮೂಲಕ ನೀವು ಕೊರೋನಾ ವಾರಿಯರ್ಸ್ ಆಗಬಹುದು ಎಂದರು.
ಮೋದಿಯವರ ಮನ್ ಕಿ ಬಾತ್ ನ 64ನೇ ಅವತರಣಿಕೆಯಲ್ಲಿ ಅವರು ಹೇಳಿದ ಮುಖ್ಯಾಂಶಗಳು ಹೀಗಿವೆ:
-ಭಾರತದಲ್ಲಿ ಕೊರೋನಾ ವೈರಸ್ ವಿರುದ್ಧದ ಹೋರಾಟ ಜನಪ್ರೇರಿತವಾದದ್ದು. ಇಡೀ ಜಗತ್ತು ಇಂದು ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿರುವಾಗ ಮುಂದಿನ ದಿನಗಳಲ್ಲಿ ಕೊರೋನಾ ಬಗ್ಗೆ ಪ್ರಸ್ತಾಪಿಸಿದಾಗ ಭಾರತ ದೇಶದ ಜನಪರವಾದ ಅಭಿಯಾನ, ಕೆಲಸಗಳು ಕೇಂದ್ರಬಿಂದುವಾಗುತ್ತದೆ.
-ನಮ್ಮ ಶ್ರಮಜೀವಿ ರೈತರು ಜನರು ಹಸಿವಿನಿಂದ ಬಳಲದಂತೆ ನೋಡಿಕೊಳ್ಳುತ್ತಿದ್ದಾರೆ. ಕೊರೋನಾ ವಿರುದ್ಧ ಪ್ರತಿಯೊಬ್ಬರೂ ತಮ್ಮದೇ ರೀತಿಯಲ್ಲಿ ಹೋರಾಟ ಮಾಡುತ್ತಿದ್ದಾರೆ. ಕೆಲವರು ತಮ್ಮ ಇಡೀ ಪಿಂಚಣಿಯನ್ನು ದಾನ ಮಾಡಿದರೆ, ಕೆಲವರು ಪ್ರಧಾನ ಮಂತ್ರಿ ನಿಧಿಗೆ ನೀಡುತ್ತಿದ್ದಾರೆ. ತರಕಾರಿ ಬೆಳೆಯುವ ರೈತರು ತರಕಾರಿ, ಹಣ್ಣುಗಳನ್ನು ಅಗತ್ಯವಿರುವವರಿಗೆ ನೀಡಿ ಸಹಕರಿಸುತ್ತಿದ್ದಾರೆ. ಕೆಲವರು ಫೇಸ್ ಮಾಸ್ಕ್ ಮಾಡಿ ವಿತರಿಸುತ್ತಿದ್ದಾರೆ. ಕ್ವಾರಂಟೈನ್ ಗೆ ನೀಡಲಾಗಿರುವ ಶಾಲೆ,ಕಾಲೇಜು, ಸರ್ಕಾರಿ ಕಟ್ಟಡಗಳಿಗೆ ಕೆಲವರು ಬಣ್ಣ ಬಳಿದು ಸಿದ್ದಪಡಿಸಿಕೊಡುತ್ತಿದ್ದಾರೆ.
-ನಮ್ಮ ಉದ್ಯಮ, ಕಚೇರಿ ಸಂಸ್ಕೃತಿ, ಶಿಕ್ಷಣ, ವೈದ್ಯಕೀಯ ವಲಯ ಹೀಗೆ ಎಲ್ಲಾ ವಲಯಗಳಲ್ಲಿ ಕೊರೋನಾ ವೈರಸ್ ನಂತರ ಹೊಸ ಬದಲಾವಣೆಯನ್ನು ಎಲ್ಲರೂ ಅಳವಡಿಸಿಕೊಳ್ಳುತ್ತಿದ್ದಾರೆ. ಹಲವು ಕ್ಷೇತ್ರಗಳಲ್ಲಿ ಹೊಸತನವನ್ನು ಅನ್ವೇಷಿಸುವ ಆಸೆ ಹುಟ್ಟಿಕೊಂಡಿದೆ.
-ನಿರ್ಗತಿಕರಿಗೆ ಆಹಾರ ನೀಡುವುದರಿಂದ ಹಿಡಿದು, ರೇಷನ್ ವಿತರಿಸುವುದು, ಲಾಕ್ ಡೌನ್ ಸುಗಮವಾಗಿರುವಂತೆ ನೋಡಿಕೊಳ್ಳುವುದು, ಆಸ್ಪತ್ರೆಗಳಲ್ಲಿ ವ್ಯವಸ್ಥೆ, ವೈದ್ಯಕೀಯ ಉಪಕರಣಗಳ ಉತ್ಪಾದನೆ ಇತ್ಯಾದಿಗಳಲ್ಲಿ ಇಡೀ ದೇಶ ಒಂದೇ ದಿಕ್ಕಿನತ್ತ ಸಾಗುತ್ತಿದ್ದು ಅದು ಒಂದು ಸಾಮಾನ್ಯ ಉದ್ದೇಶದಿಂದ, ಅದು ಕೊರೋನಾ ಯುದ್ಧ ಗೆಲ್ಲುವುದು. ಇಲ್ಲಿ ಭಾರತೀಯರೆಲ್ಲರೂ ಸೈನಿಕರು.
-ವಿದೇಶಗಳ ನಾಯಕರು ಥ್ಯಾಂಕ್ಯೂ ಇಂಡಿಯಾ, ಭಾರತದ ಜನರಿಗೆ ಧನ್ಯವಾದಗಳು ಎಂದಾಗ ನನಗೆ ಹೆಮ್ಮೆಯಾಗುತ್ತದೆ. ಭಾರತ ದೇಶ ತನ್ನ ನಾಗರಿಕರ ಕಾಳಜಿ ನೋಡಿಕೊಳ್ಳುವುದು ಮಾತ್ರವಲ್ಲದೆ ಉತ್ತಮ ಆರೋಗ್ಯಕರ ಗ್ರಹವನ್ನು ನಿರ್ಮಾಣ ಮಾಡಲು ತನ್ನದೇ ಆದ ರೀತಿಯಲ್ಲಿ ಕೊಡುಗೆ ನೀಡುತ್ತಿದೆ.
-ನಮ್ಮಲ್ಲಿನ ಶಕ್ತಿ, ಬಲವನ್ನು ವೃದ್ಧಿಸಲು ಪುರಾತನ ಕಾಲದ ಸಾಂಪ್ರದಾಯಿಕ ವ್ಯವಸ್ಥೆಯನ್ನು ಪಾಲಿಸಿ. ಸಂಪ್ರದಾಯ, ಆಚರಣೆಗಳನ್ನು ಇಡೀ ಜಗತ್ತಿಗೆ ಅರ್ಥವಾಗುವ ಭಾಷೆಯಲ್ಲಿ ಪ್ರಚುರಪಡಿಸಿ.
-ಇತ್ತೀಚೆಗೆ ಜನರಲ್ಲಿ ಮಾಸ್ಕ್ ಧರಿಸುವ ಅರಿವು ಮೂಡಿದೆ. ಮಾಸ್ಕ್ ಧರಿಸಿದ ವ್ಯಕ್ತಿಗಳೆಲ್ಲ ಅನಾರೋಗ್ಯರು ಎಂದು ಅರ್ಥವಲ್ಲ. ಅದೊಂದು ಮುನ್ನೆಚ್ಚರಿಕೆಯಷ್ಟೆ.
-ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು ತಪ್ಪು ಎಂದು ಹಿಂದಿನಿಂದಲೂ ನಮಗೆ ಗೊತ್ತಿತ್ತು. ಆದರೂ ಕೆಲವು ಕಡೆ ಜನರು ದುರಭ್ಯಾಸವನ್ನು ಮುಂದುವರಿಸುತ್ತಿದ್ದಾರೆ. ಇನ್ನು ಮುಂದಾದರೂ ಹೀಗೆ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು ಬಿಡೋಣ ಎಂದು ನಿರ್ಧಾರ ಮಾಡುವ ಸಮಯವಿದು. ಇದು ನಮ್ಮಲ್ಲಿ ಅಗತ್ಯ ಶುಚಿತ್ವವನ್ನು ಹೆಚ್ಚಿಸುವುದಲ್ಲದೆ ಕೊರೋನಾ ವಿರುದ್ಧ ಹೋರಾಟಕ್ಕೆ ಬಲ ನೀಡುತ್ತದೆ.
-ಕೋವಿಡ್-19 ವಿರುದ್ಧ ಹೋರಾಟದಲ್ಲಿ ರಾಜ್ಯ ಸರ್ಕಾರಗಳ ಪೂರ್ವಭಾವಿ ಪಾತ್ರವನ್ನು ಶ್ಲಾಘಿಸಲೇಬೇಕು.
-ಇಂದು ಅಕ್ಷಯ ತೃತೀಯದ ಸುದಿನ. ಆದರೆ ಈ ವರ್ಷ ಆಚರಿಸಲು ಸಾಧ್ಯವಾಗದಿದ್ದರೂ ನಮಗೆ ವಿಶೇಷ ಮಹತ್ವವನ್ನು ಹೊಂದಿದೆ. ಕೊರೋನಾ ಸೋಂಕಿನ ವರ್ಷ ಎಂದು ಈ ವರ್ಷವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ.
-ಈ ವರ್ಷ ಮುಸ್ಲಿಂ ಬಾಂಧವರ ರಂಜಾನ್ ಆಚರಣೆ ಸಮಯದಲ್ಲಿ ಇಷ್ಟೊಂದು ಕಷ್ಟಗಳು ಬರಬಹುದು ಎಂದು ಯಾರೂ ಭಾವಿಸಿರಲಿಲ್ಲ. ಈದ್ ಆಚರಣೆ ವೇಳೆಗೆ ನಾವು ಕೊರೋನಾ ಮುಕ್ತರಾಗೋಣ ಎಂದು ಪ್ರಾರ್ಥಿಸಿಕೊಳ್ಳೋಣ.
-ಕೊರೋನಾ ವೈರಸ್ ಸಮಯದಲ್ಲಿ ಶೌಚ ಕಾರ್ಮಿಕರ ಕೆಲಸ ಎಷ್ಟೊಂದು ಮಹತ್ವದ್ದು ಎಂದು ಗೊತ್ತಾಗುತ್ತಿದೆ. ಈ ಹಿಂದೆ ಅವರ ಕೆಲಸ, ಕೊಡುಗೆ ಗಮನಕ್ಕೆ ಬರುತ್ತಿರಲಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


