ದೇಶ

ಕೋವಿಡ್-19: ಭಾರತದಲ್ಲಿ 2,300 ದಾಟಿದ ಸೋಂಕಿತ ಪ್ರಕರಣಗಳು, 56 ಸಾವು, 156 ಮಂದಿ ಗುಣಮುಖ

ಚೀನಾದ ವುಹಾನ್ ನಲ್ಲಿ ಕಾಣಿಸಿಕೊಂಡು ನಂತರ ವಿಶ್ವಾದ್ಯಂತ ಹರಡಿ ಸುಮಾರು 50,ಸಾವಿರಕ್ಕೂ ಮಂದಿಯನ್ನು ಈವರೆಗೆ ಬಲಿ ಪಡೆದಿರುವ ಕೊರೋನಾ ವೈರಸ್ ಭಾರತದಲ್ಲಿ ತನ್ನ ರೌದ್ರ ನರ್ತನವನ್ನು ಮುಂದುವರೆಸಿದ್ದು, ಈವರೆಗೂ ಸೋಂಕಿತರ ಸಂಖ್ಯೆ 2,301ಕ್ಕೆ ಏರಿಕೆಯಾಗಿದೆ.

ಕೋವಿಡ್-19: ಭಾರತದಲ್ಲಿ 2,300 ದಾಟಿದ ಸೋಂಕಿತ ಪ್ರಕರಣಗಳು, 56 ಸಾವು, 156 ಮಂದಿ ಗುಣಮುಖ
ಸಂಗ್ರಹ ಚಿತ್ರ
Published On :

ನವದೆಹಲಿ: ಚೀನಾದ ವುಹಾನ್ ನಲ್ಲಿ ಕಾಣಿಸಿಕೊಂಡು ನಂತರ ವಿಶ್ವಾದ್ಯಂತ ಹರಡಿ ಸುಮಾರು 50,ಸಾವಿರಕ್ಕೂ ಮಂದಿಯನ್ನು ಈವರೆಗೆ ಬಲಿ ಪಡೆದಿರುವ ಕೊರೋನಾ ವೈರಸ್ ಭಾರತದಲ್ಲಿ ತನ್ನ ರೌದ್ರ ನರ್ತನವನ್ನು ಮುಂದುವರೆಸಿದ್ದು, ಈವರೆಗೂ ಸೋಂಕಿತರ ಸಂಖ್ಯೆ 2,301ಕ್ಕೆ ಏರಿಕೆಯಾಗಿದೆ.

ಭಾರತದಲ್ಲಿ ಗುರುವಾರ ಸಂಜೆಯಿಂದ 228 ಹೊಸ ಪ್ರಕರಣಗಳು ವರದಿಯಾಗುವುದರೊಂದಿಗೆ ಕೋವಿಡ್-19 ಸೋಂಕು ಪ್ರಕರಣಗಳ ಸಂಖ್ಯೆ ಶುಕ್ರವಾರ ಬೆಳಿಗ್ಗೆ ವೇಳೆಗೆ 2,300 ದಾಟಿದೆ. ಆರೋಗ್ಯ ಸಚಿವಾಲಯದ ಪ್ರಕಾರ, ಗುರುವಾರ ಸಂಜೆ ವೇಳೆಗೆ ಒಟ್ಟು 2,069 ಪ್ರಕರಣಗಳು ದೃಢಪಟ್ಟಿದ್ದವು. 

ಸಾವಿನ ಸಂಖ್ಯೆ ಈವರೆಗೆ ಒಟ್ಟು 56 ಕ್ಕೆ ಏರಿದೆ. ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 2,088 ರಷ್ಟಿದೆ ಎಂದು ಸಚಿವಾಲಯ ತಿಳಿಸಿದೆ. ಈ ಮಧ್ಯೆ, ಇದುವರೆಗೆ 156 ಜನರನ್ನು ಗುಣಪಡಿಸಲಾಗಿದ್ದು, ಇವರಲ್ಲಿ ಒಬ್ಬ ವ್ಯಕ್ತಿ ವಲಸೆ ಬಂದವರಾಗಿದ್ದಾರೆ ಎಂದು ಸರ್ಕಾರದ ಅಂಕಿ-ಅಂಶಗಳು ತಿಳಿಸಿವೆ.

ತಬ್ಲೀಘಿ ಜಮಾತ್‌ ಪ್ರಕರಣಕ್ಕೆ ಸಂಬಂಧಿಸಿದ ಒಟ್ಟು 9,000 ವ್ಯಕ್ತಿಗಳು ಮತ್ತು ಅವರು ಸಂಪರ್ಕ ಹೊಂದಿದ್ದವರನ್ನು ಗುರುತಿಸಿ ಸಂಪರ್ಕತಡೆ ಕೇಂದ್ರಗಳಿಗೆ ಕಳುಹಿಸಲಾಗಿದೆ. ದೇಶಾದ್ಯಂತ ಕೋವಿಡ್-19 ಸೋಂಕಿನ ಪ್ರಮುಖ ಮೂಲವಾಗಿ ಈ ಗುಂಪು ಹೊರಹೊಮ್ಮಿರುವ ಕಾರಣ ಅವರ ಸಂಪರ್ಕಗಳನ್ನು ಪತ್ತೆ ಮಾಡುವ ಪ್ರಯತ್ನಗಳನ್ನು ನಡೆಸಲಾಗಿದೆ ಎಂದು ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಒಟ್ಟು 9,000 ತಬ್ಲೀಘಿ ಜಮಾತ್ ಕಾರ್ಯಕರ್ತರು ಮತ್ತು ಅವರು ಹೊಂದಿದ ಸಂಪರ್ಕಗಳನ್ನು ದೇಶಾದ್ಯಂತ ಗುರುತಿಸಲಾಗಿದೆ. ಇವರೆಲ್ಲರನ್ನೂ ಸಂಪರ್ಕತಡೆಗೆ ಕಳುಹಿಸಲಾಗಿದೆ. ಈ ಪೈಕಿ 1,306 ಮಂದಿ ವಿದೇಶಿ ಪ್ರಜೆಗಳಾಗಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಜಂಟಿ ಕಾರ್ಯದರ್ಶಿ ಪುನ್ಯಾ ಸಲೀಲಾ ಶ್ರೀವಾಸ್ತವ ಹೇಳಿದ್ದಾರೆ.

ಕಳೆದ ತಿಂಗಳು ನಿಜಾಮುದ್ದೀನ್ ಮಾರ್ಕಾಜ್‍ನಲ್ಲಿ ತಬ್ಲಿಘಿ ಜಮಾತ್ ಆಯೋಜಿಸಿದ್ದ ಧಾರ್ಮಿಕ ಸಭೆಯಲ್ಲಿ ಇವರೆಲ್ಲ ಪಾಲ್ಗೊಂಡಿದ್ದರು. ಇದು ದೇಶಾದ್ಯಂತ ಕೊರೊನಾವೈರಸ್ ಪ್ರಕರಣಗಳಲ್ಲಿ ದಿಢೀರ್ ಹೆಚ್ಚಳಕ್ಕೆ ಕಾರಣವಾಯಿತು.

ರಾಷ್ಟ್ರ ರಾಜಧಾನಿಯಲ್ಲಿನ ಮಾರ್ಕಾಜ್ ನಿಜಾಮುದ್ದೀನ್ ಕೋವಿಡ್-19 ಪ್ರಕರಣಗಳ ಕೇಂದ್ರಬಿಂದುವಾಗಿ ಮಾರ್ಪಟ್ಟಿದೆ ಎಂದು ಸಚಿವಾಲಯ ತಿಳಿಸಿದೆ.

ಕಳೆದ ತಿಂಗಳು ಇಲ್ಲಿ ನಡೆದ ಧಾರ್ಮಿಕ ಕೂಟದಲ್ಲಿ ಭಾಗವಹಿಸಿದ್ದ ಅನೇಕ ಜನರು ಮಾರಣಾಂತಿಕ ವೈರಸ್‌ಗೆ ತುತ್ತಾಗಿರುವುದು ಕಂಡುಬಂದಿದೆ.

ರಾಜ್ಯವಾರು, ಮೊದಲ ಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ 335 ಪ್ರಕರಣಗಳು ದೃಢಪಟ್ಟು, 13 ಸಾವುಗಳು ಸಂಭವಿಸಿವೆ. ನಂತರದ ಸ್ಥಾನದಲ್ಲಿರುವ ತಮಿಳುನಾಡಿನಲ್ಲಿ 309 ಪ್ರಕರಣಗಳು, ಕೇರಳದಲ್ಲಿ 286 ಪ್ರಕರಣಗಳು ದೃಢಪಟ್ಟಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. 

ದೆಹಲಿಯಲ್ಲಿ ಸದ್ಯ ಕೋವಿಡ್-19 ಸೊಂಕಿನ ಪ್ರಕರಣಗಳ ಸಂಖ್ಯೆ 219ಕ್ಕೆ ಏರಿದೆ. ರಾಷ್ಟ್ರ ರಾಜಧಾನಿಯಲ್ಲಿ ಇದುವರೆ ನಾಲ್ವರು ಸಾವನ್ನಪ್ಪಿದ್ದಾರೆ. ಇನ್ನು, ಕರ್ನಾಟಕದಲ್ಲಿ 124, ಉತ್ತರಪ್ರದೇಶದಲ್ಲಿ 113 ಹಾಗೂ ರಾಜಸ್ಥಾನದಲ್ಲಿ 113 ಪ್ರಕರಣಗಳು ದೃಢಪಟ್ಟಿವೆ. 

ರಾಜಸ್ತಾನ ಒಂದೇ ರಾಜ್ಯದಲ್ಲು ಶುಕ್ರವಾರ 14 ಮಂದಿಯಲ್ಲಿ ವೈರಸ್ ದೃಢಪಟ್ಟಿದೆ. 14 ಮಂದಿಯ ಪೈಕಿ 7 ಮಂದಿ ದೆಹಲಿಯ ನಿಜಾಮುದ್ದೀನ್ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರು ಎಂದು ಹೇಳಲಾಗುತ್ತಿದೆ. 

ಆಂಧ್ರಪ್ರದೇಶ ರಾಜ್ಯದಲ್ಲಿಯೂ 12 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ ಆ ರಾಜ್ಯದಲ್ಲಿ 161ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಆಂಧ್ರಪ್ರದೇಶ ರಾಜ್ಯದಲ್ಲಿ ಸೋಂಕಿತ ವ್ಯಕ್ತಿಯೊಬ್ಬರು ವೈರಸ್ ನಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದು, ಕಾಕಿನಾಡ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇವರು ವಿದೇಶದಿಂದ ಪ್ರಯಾಣ ಮಾಡಿದ್ದ ಹಿಸ್ಟರಿ ಹೊಂದಿದ್ದರು ಎಂದು ಹೇಳಲಾಗುತ್ತಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.