ಡಿಆರ್ ಡಿಒ ದಿಂದ ಭೂದಾಳಿ ಸಾಮರ್ಥ್ಯದ ಬ್ರಹ್ಮೋಸ್ ಕ್ಷಿಪಣಿ ಯಶಸ್ವೀ ಪರೀಕ್ಷೆ
ಭಾರತೀಯ ರಕ್ಷಣಾ ಮತ್ತು ಸಂಶೋಧನಾ ಸಂಸ್ಥೆ ಡಿಆರ್ ಡಿಒ ಭಾರತದ ಅತ್ಯಂತ ಯಶಸ್ವೀ ಕ್ಷಿಪಣಿ ಬ್ರಹ್ಮೋಸ್ ನ ಭೂದಾಳಿ ಮಾದರಿಯ ಪ್ರಯೋಗ ಯಶಸ್ವಿಯಾಗಿ ನೆರವೇರಿಸಿದೆ.

450 ಕಿಮೀ ದೂರದ ಗುರಿಗಳನ್ನು ಹೊಡೆದುರುಳಿಸಬಲ್ಲ ಸಾಮರ್ಥ್ಯದ ಬ್ರಹ್ಮೋಸ್ ಕ್ಷಿಪಣಿ
ನವದೆಹಲಿ: ಭಾರತೀಯ ರಕ್ಷಣಾ ಮತ್ತು ಸಂಶೋಧನಾ ಸಂಸ್ಥೆ ಡಿಆರ್ ಡಿಒ ಭಾರತದ ಅತ್ಯಂತ ಯಶಸ್ವೀ ಕ್ಷಿಪಣಿ ಬ್ರಹ್ಮೋಸ್ ನ ಭೂದಾಳಿ ಮಾದರಿಯ ಪ್ರಯೋಗ ಯಶಸ್ವಿಯಾಗಿ ನೆರವೇರಿಸಿದೆ.
ಒಡಿಶಾದ ಬಾಲಾಸೋರ್ ನಲ್ಲಿ ಬ್ರಹ್ಮೋಸ್ ಭೂದಾಳಿ ಮಾದರಿ ಕ್ಷಿಪಣಿಯನ್ನು ಇಂದು ಪರೀಕ್ಷೆಗೊಳಪಡಿಸಲಾಗಿದ್ದು, ಪರೀಕ್ಷೆಯಲ್ಲಿ ಕ್ಷಿಪಣಿ ಯಶಸ್ವಿಯಾಗಿ ಗುರಿ ಮುಟ್ಟಿದೆ ಎನ್ನಲಾಗಿದೆ. ಕ್ಷಿಪಣಿ ರವಾನೆ, ಸಂಗ್ರಹಣೆ ಮತ್ತು ಉಡಾವಣೆಗಾಗಿ ಸಾರಿಗೆ ಉಡಾವಣಾ ಡಬ್ಬಿ (ಟಿಎಲ್‌ಸಿ-ಟ್ರಾನ್ಸ್ ಪೋರ್ಟ್ ಲಾಂಚ್ ಕ್ಯಾನಿಸ್ಟರ್) ಮೂಲಕ ಉಡಾವಣೆ ಮಾಡಲಾಯಿತು. ಭೂ ದಾಳಿ ಸಾಮರ್ಥ್ಯದ ಈ ಬ್ರಹ್ಮೋಸ್ ಕ್ಷಿಪಣಿ ಸುಮಾರು 450 ಕಿಮೀ ದೂರದ ಗುರಿಗಳನ್ನು ಹೊಡೆದುರುಳಿಸಬಲ್ಲ ಸಾಮರ್ಥ್ಯ ಹೊಂದಿದೆ. ಅಂತೆಯೇ ಆಗಸದಲ್ಲಿ ಗರಿಷ್ಠ 15 ಕಿ.ಮೀ ಎತ್ತರದವರೆಗೂ ಹಾರುವ ಈ ಕ್ಷಿಪಣಿ ಭೂಮಿಯ ಮೇಲ್ಮೈ ಮೇಲೆ ಕನಿಷ್ಠ 15 ಮೀಟರ್ ಎತರದಲ್ಲಿ ಹಾರಾಟ ನಡೆಸುವ ಸಾಮರ್ಥ್ಯಹೊಂದಿದೆ.
ಈ ಬ್ರಹ್ಮೋಸ್ ಕ್ಷಿಪಣಿ ಅಪ್ ಗ್ರೇಡೆಡ್ ಗೈಡೆಡ್ ಸಿಸ್ಟಮ್ ಹೊಂದಿದ್ದು, ಇದರಿಂದ ಕ್ಷಿಪಣಿ ಗುರಿಗಳ ಮೇಲೆ ನಿಖರವಾಗಿ ದಾಳಿ ಮಾಡುವಂತೆ ನಿಯಂತ್ರಿಸಬಹುದಾಗಿದೆ.2017 ಮಾರ್ಚ್ 11ರಂದು ಈ ಕ್ಷಿಪಣಿಯನ್ನು ಮೊದಲ ಬಾರಿಗೆ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದೀಗ ಅದರ ದೂರಗಾಮಿ ಸಾಮರ್ಥ್ಯವನ್ನು ವೃದ್ಧಿಸಿ ಮತ್ತೆ ಪರೀಕ್ಷೆಗೊಳಪಡಿಸಲಾಗಿದೆ. ಈ ಕ್ಷಿಪಣಿಯ ವಿಶೇಷತೆ ಎಂದರೆ ಈ ಹಿಂದಿನ 290 ಕಿ.ಮೀ ದೂರ ಸಾಮರ್ಥ್ಯದ ಕ್ಷಿಪಣಿ ಬಳಕೆ ಮಾಡುತ್ತಿದ್ದ ಅಷ್ಟೇ ಪ್ರಮಾಣದ ಇಂಧನವನ್ನು ಈ ಕ್ಷಿಪಣಿಯೂ ಬಳಕೆ ಮಾಡಿಕೊಂಡು 450 ಕಿ.ಮೀ ದೂರದ ಗುರಿಗಳನ್ನು ಯಶಸ್ವಿಯಾಗಿ ಛಿದ್ರ ಮಾಡುತ್ತದೆ.
ಅಲ್ಲದೆ ಕ್ಷಿಪಣಿಯ ಇಂಧನ ಬಳಕೆಯನ್ನು ಕಂಪ್ಯೂಟರ್ ಆಧಾರಿತ ಪ್ರೋಗ್ರಾಮ್ ಗಳಿಂದ ನಿಯಂತ್ರಿಸಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಅಂತೆಯೇ ಈ ಕ್ಷಿಪಣಿಯು ಸುಮಾರು 200 ರಿಂದ 300 ಕಿಲೋಗ್ರಾಂ ತೂಕದ ಸಿಡಿತಲೆಗಳನ್ನು ಹೊತ್ತೊಯ್ಯು ಸಾಮರ್ಥ್ಯವನ್ನು ಕೂಡ ಹೊಂದಿದೆ.
ಇನ್ನು ಈ ಭೂ ದಾಳಿ ಸಾಮರ್ಥ್ಯದ ಕ್ಷಿಪಣಿಯು ಫೈರ್ ಅಂಡ್ ಫರ್ಗೆಟ್ (ಕ್ಷಿಪಣಿ ಉಡಾಯಿಸಿ, ಮರೆತು ಬಿಡಿ) ಸಾಮರ್ಥ್ಯವನ್ನು ಹೊಂದಿದೆ. ಅಂದರೆ ನಿಖರ ದಾಳಿಯನ್ನು ಕ್ಷಿಪಣಿಗೆ ತೋರಿ ಉಡಾವಣೆ ಮಾಡಿದರೆ ಕ್ಷಿಪಣಿ ಆ ಗುರಿಯು ಹೇಗೇ ಚಲಿಸಿದರೂ ಅದನ್ನು ಕ್ಷಣ ಮಾತ್ರದಲ್ಲಿ ಛಿದ್ರ ಮಾಡುತ್ತದೆ. ಇದಕ್ಕೆ ಕ್ಷಿಪಣಿಯಲ್ಲಿನ ನ್ಯಾವಿಗೇಷನ್ ಪ್ರೋಗ್ರಾಂ ಸಹಾಯಕವಾಗುತ್ತದೆ. ಅಲ್ಲದೆ ಈ ಕ್ಷಿಪಣಿಯು ಭೂಮಿ, ಸಮುದ್ರದ ಮೇಲಿನ ಗುರಿಗಳನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಹೊಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


