ಅಸ್ಸಾಂ: ಎನ್ಆರ್ ಸಿ ಪಟ್ಟಿಯಲ್ಲಿ ಹೆಸರಿಲ್ಲದವರೂ ಮತದಾನ ಮಾಡಬಹುದು: ಚು.ಆಯೋಗ
ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ)ಯಲ್ಲಿ ಇಲ್ಲದೇ ಇರುವ ವ್ಯಕ್ತಿಗಳು ಕೂಡ ಚುನಾವಣೆಯಲ್ಲಿ ಮತದಾನ ಮಾಡಬಹುದು ಎಂದು ಚುನಾವಣಾ ಆಯೋಗ ಹೇಳಿದೆ.

ನವದೆಹಲಿ: ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ)ಯಲ್ಲಿ ಇಲ್ಲದೇ ಇರುವ ವ್ಯಕ್ತಿಗಳು ಕೂಡ ಚುನಾವಣೆಯಲ್ಲಿ ಮತದಾನ ಮಾಡಬಹುದು ಎಂದು ಚುನಾವಣಾ ಆಯೋಗ ಹೇಳಿದೆ.
ಈ ಕುರಿತಂತೆ ರಾಷ್ಟ್ರೀಯ ಪತ್ರಿಕೆಯೊಂದು ವರದಿ ಮಾಡಿದ್ದು, ಎನ್ಆರ್ ಸಿ ಪಟ್ಟಿಯಲ್ಲಿ ಹೆಸರು ಇಲ್ಲದ ವ್ಯಕ್ತಿಗಳನ್ನು ಸಂದೇಹಾಸ್ಪದ ಎಂಬುದಾಗಿ ಗುರುತಿಸಬಾರದು ಎಂದು ಚುನಾವಣಾ ಆಯೋಗ ಹೇಳಿದೆ ಎನ್ನಲಾಗಿದೆ. ಇನ್ನು ಎನ್ಆರ್ ಸಿ ಪಟ್ಟಿಗೆ ಸಂಬಂಧಿಸಿದಂತೆ ಕೆಲ ಸ್ಪಷ್ಟನೆಗಳನ್ನು ನೀಡಿರುವ ಚುನಾವಣಾ ಆಯೋಗ, ಅಸ್ಸಾಂನಲ್ಲಿ ಕೆಲವು ನಾಗರಿಕರ ಪೌರತ್ವ ಅನಿಶ್ಚಿತ ಅಥವಾ ವಿವಾದದಲ್ಲಿದೆ. ಹೀಗಿರುವವರನ್ನು ಸಂದೇಹಾಸ್ಪದ (Doubtful- ‘D’ voters) ಮತದಾರರ ಕೆಟಗರಿಗೆ ಸೇರಿಸಲಾಗಿದೆ. 1997ರಲ್ಲಿ ಚುನಾವಣಾ ಆಯೋಗವು ಅಸ್ಸಾಂ ರಾಜ್ಯದ ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡಿದಾಗ ಈ ಹೊಸ ಕೆಟಗರಿಯನ್ನು ರಚಿಸಿತ್ತು. ಈ ವಿಭಾಗದ ಅಡಿಯಲ್ಲಿ ಮತದಾನ ಮಾಡಬಹುದು ಎಂದು ಹೇಳಿದೆ.
ಇನ್ನು ಡಿ ವೋಟರ್‌ಗಳ ಹೆಸರು ಅಸ್ಸಾಂ ಮತದಾರರ ಪಟ್ಟಿಯಲ್ಲಿ ಇದ್ದರೂ ವಿದೇಶಿ ನ್ಯಾಯಮಂಡಳಿಯಿಂದ ತೀರ್ಪು ಬರದೆ ಅವರು ಚುನಾವಣೆಯಲ್ಲಿ ಮತದಾನ ಮಾಡುವಂತಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ 1.2 ಲಕ್ಷ ಡಿ ವೋಟರ್‌ಗಳು ಮತದಾನ ಮಾಡಿಲ್ಲ. ಆದಾಗ್ಯೂ, ಎನ್‌ಆರ್‌ಸಿ ಕರಡು ಪಟ್ಟಿಯಿಂದ ಹೊರಗುಳಿದವರಿಗೆ ಮತದಾನ ಮಾಡಲು ಅವಕಾಶ ನೀಡಲಾಗಿತ್ತು.
ಈ ವಿಚಾರವಾಗಿ ಮಾಹಿತಿ ನೀಡಿರುವ ಚುನಾವಣಾ ಅಧಿಕಾರಿಯೊಬ್ಬರು, ಎನ್‌ಆರ್‌ಸಿ ಅಂತಿಮ ಪಟ್ಟಿಯನ್ನು ಆಧರಿಸಿರುವ ಮತದಾರರ ಪಟ್ಟಿಯಲ್ಲಿ ತಾನಾಗಿಯೇ ಡಿಲೀಟ್ ಮಾಡುವ ಆಯ್ಕೆ ಇಲ್ಲ. ಅದೇ ವೇಳೆ ಪಟ್ಟಿಯಲ್ಲಿ ಇಲ್ಲದವರನ್ನು ಡಿ ವೋಟರ್ ಎಂದು ಗುರುತಿಸಬಾರದು ಎಂದು ಚುನಾವಣಾ ಆಯೋಗದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಎನ್‌ಆರ್‌ಸಿ ಅಂತಿಮ ಪಟ್ಟಿ ಆಗಸ್ಟ್ 30ರಂದು ಪ್ರಕಟವಾಗಿದ್ದು ಅದರಲ್ಲಿ 3.11 ಕೋಟಿ ಅರ್ಜಿದಾರರನ್ನು ಪೌರರಾಗಿ ಸೇರ್ಪಡೆ ಮಾಡಿತ್ತು. ಅದೇ ವೇಳೆ 19 ಲಕ್ಷ ಮಂದಿಯನ್ನು ಕೈ ಬಿಡಲಾಗಿತ್ತು. 19 ಲಕ್ಷ ಮಂದಿಯ ಪೈಕಿ ಎಷ್ಟು ಜನರು ಅಸ್ಸಾಂ ಮತದಾರರ ಪಟ್ಟಿಯಲ್ಲಿ ನೋಂದಣಿಯಾದವರು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಎನ್ಆರ್‌ಸಿ ಪಟ್ಟಿಯಲ್ಲಿ ವ್ಯಕ್ತಿಗಳ ಹೆಸರು ಇಲ್ಲದೇ ಇದ್ದರೆ ಅವರನ್ನು ವಿದೇಶೀಯರು (ಅಕ್ರಮ ವಲಸೆಗಾರರು) ಎಂದು ಹೇಳುವಂತಿಲ್ಲ ಎಂದು ಆಗಸ್ಟ್ 20ರಂದು ಗೃಹ ಸಚಿವಾಲಯ ಸ್ಪಷ್ಟನೆ ನೀಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


