ಮೇಲ್ಜಾತಿ ಯುವತಿಯೊಂದಿಗೆ ಸಂಬಂಧ: ಜೀವಂತವಾಗಿ ಸುಟ್ಟುಹೋದ ದಲಿತ ಯುವಕ
ಮೇಲ್ಜಾತಿಯ ಯುವತಿಯೊಂದಿಗೆ ಸಂಬಂಧ ಹೊಂದಿದ್ದ 20 ವರ್ಷದ ದಲಿತ ಯುವಕನೋರ್ವನನ್ನು ಆಕೆಯ ಸಂಬಂಧಿಕರು ಜೀವಂತವಾಗಿ ಸುಟ್ಟು ಹಾಕಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಆಘಾತದಿಂದ ಆತನ ತಾಯಿಯೂ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.

ಹಾರ್ಡೊಯ್: ಮೇಲ್ಜಾತಿಯ ಯುವತಿಯೊಂದಿಗೆ ಸಂಬಂಧ ಹೊಂದಿದ್ದ 20 ವರ್ಷದ ದಲಿತ ಯುವಕನೋರ್ವನನ್ನು ಆಕೆಯ ಸಂಬಂಧಿಕರು ಜೀವಂತವಾಗಿ ಸುಟ್ಟು ಹಾಕಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಈ ಆಘಾತದಿಂದ ಆತನ ತಾಯಿಯೂ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.
ಹಾರ್ಡೊಯ್ ಜಿಲ್ಲೆಯ ಬಾದೆಶಾ ಪ್ರದೇಶದಲ್ಲಿ ಶನಿವಾರ ಮಾರ್ಯಾದೆ ಹತ್ಯೆ ಪ್ರಕರಣ ನಡೆದಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ದಲಿತ ವ್ಯಕ್ತಿ ಅಭಿಷೇಕ್ ಆಲಿಯಾಸ್ ಮೊನು ಎಂಬಾತನನ್ನು ಚೆನ್ನಾಗಿ ಥಳಿಸಿ, ಮನೆಯೊಂದರಲ್ಲಿ ಕೂಡಿ ಹಾಕಿ ನಂತರ ಬೆಂಕಿ ಹಚ್ಚಲಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕ ಅಲೋಕ್ ಪ್ರಿಯದರ್ಶಿನಿ ಹೇಳಿದ್ದಾರೆ.
ಆತನ ಆಕ್ರಂದನ ಕೇಳಿ ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಲಖನೌ ಆಸ್ಪತ್ರೆಗೆ ಕರೆದೊಯ್ಯುತ್ತಿರುವಾಗ ತೀವ್ರ ಗಾಯವಾಗಿ ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟಿದ್ದಾನೆ ಎಂದು ಎಸ್ ಪಿ ಹೇಳಿದ್ದಾರೆ. ಈ ಆಘಾತದ ಸುದ್ದಿ ಕೇಳಿ ಆತನ ತಾಯಿಯೂ ಕೂಡಾ ಮೃತಪಟ್ಟಿದ್ದಾರೆ ಎಂದು ಮೊನು ಸಂಬಂಧಿಕರು ತಿಳಿಸಿದ್ದಾರೆ.
ಮೊನು ಮೇಲ್ಜಾತಿಯ ಯುವತಿಯೊಂದಿಗೆ ಸಂಬಂಧ ಹೊಂದಿದ್ದು, ಆಕೆಯನ್ನು ನೋಡಲು ಹೋದ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೊನು ತನ್ನ ಅನಾರೋಗ್ಯಪೀಡಿತ ತಾಯಿಯ ಚಿಕಿತ್ಸೆಗಾಗಿ 25 ಸಾವಿರ ರೂ. ಹೊಂದಿಸಿ ಬರುತ್ತಿರುವಾಗ ಅಡ್ಡಗಟ್ಟಿದ್ದ ಯುವತಿಯ ಸಂಬಂಧಿಕರು ಆತನ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ನಂತರ ಹಣವನ್ನು ಕಸಿದುಕೊಂಡು ಮನೆಯೊಂದರಲ್ಲಿ ಕೂಡಿಹಾಕಿ ಬೆಂಕಿ ಹಚ್ಚಿದ್ದಾರೆ ಎಂದು ಮೃತನ ಸಂಬಂಧಿ ರಾಜು ಹೇಳಿದ್ದಾರೆ.
ಈ ಪ್ರಕರಣ ಸಂಬಂಧ ಯುವತಿಯ ಇಬ್ಬರು ಸಂಬಂಧಿಕರು ಸೇರಿದಂತೆ ಐವರ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಎಸ್ ಪಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


