ನೆರೆಪೀಡಿತರಿಗೆ ಪುನರ್ವಸತಿ ಆಗ್ರಹಿಸಿ ಸತ್ಯಾಗ್ರಹ: 9 ದಿನಗಳ ಬಳಿಕ ಉಪವಾಸ ಕೈ ಬಿಟ್ಟ ಮೇಧಾ ಪಾಟ್ಕರ್
ಸರ್ದಾರ್ ಸರೋವರ್ ಅಣೆಕಟ್ಟು ಯೋಜನೆಯಿಂದ ನಿರ್ವಸಿತರಾದವರಿಗೆ ಪುನರ್ವಸತಿಗಾಗಿ ಕಳೆದ 9 ದಿನಗಳಿಂದ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹವನ್ನು ನರ್ಮದಾ ಬಚಾವೊ ಆಂದೋಲನದ ನಾಯಕಿ ಮೇಧಾ ಪಾಟ್ಕರ್ ಕೊನೆಗೂ ಕೈ ಬಿಟ್ಟಿದ್ದಾರೆ.

ಅಹ್ಮದಾಬಾದ್: ಸರ್ದಾರ್ ಸರೋವರ್ ಅಣೆಕಟ್ಟು ಯೋಜನೆಯಿಂದ ನಿರ್ವಸಿತರಾದವರಿಗೆ ಪುನರ್ವಸತಿಗಾಗಿ ಕಳೆದ 9 ದಿನಗಳಿಂದ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹವನ್ನು ನರ್ಮದಾ ಬಚಾವೊ ಆಂದೋಲನದ ನಾಯಕಿ ಮೇಧಾ ಪಾಟ್ಕರ್ ಕೊನೆಗೂ ಕೈ ಬಿಟ್ಟಿದ್ದಾರೆ.
ಮಧ್ಯಪ್ರದೇಶದ ಬಾರ್ವಾನಿ ಜಿಲ್ಲೆಯ ನೆರೆ ಸಂತ್ರಸ್ತರಿಗೆ ಸೂಕ್ತ ಪುನರ್ವಸತಿ ಒದಗಿಸಬೇಕು ಹಾಗೂ ಗುಜರಾತ್ನಲ್ಲಿರುವ ಸರ್ದಾರ್ ಸರೋವರ್ ಜಲಾಶಯದ ಗೇಟ್ಗಳನ್ನು ತೆರೆಯಬೇಕು ಎಂದು ಒತ್ತಾಯಿಸಿ ನರ್ಮದಾ ಬಚಾವೋ ಚಳವಳಿಯ ನಾಯಕಿ ಮೇಧಾ ಪಾಟ್ಕರ್ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದ್ದರು. ಆದರೆ ನಿನ್ನೆ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಅದರ ಹೊರತಾಗಿಯೂ ಮೇಧಾ ತಮ್ಮ ಸತ್ಯಾಗ್ರಹ ಮುಂದುವರೆಸಿದ್ದರು.
ಇದೀಗ ಸತ್ಯಾಗ್ರಹ ನಿರತ ಮೇಧಾ ಅವರನ್ನು ಮಧ್ಯ ಪ್ರದೇಶ ಸಿಎಂ ಕಮಲ್ ನಾಥ್ ಅವರು ಭೇಟಿ ಮಾಡಿ ಚರ್ಚೆ ನಡೆಸಿದ ಬಳಿಕ ತಮ್ಮ 9 ದಿನಗಳ ಉಪವಾಸ ಸತ್ಯಾಗ್ರಹವನ್ನು ಮೇಧಾ ಪಾಟ್ಕರ್ ಮತ್ತು ಅವರ ತಂಡ ಕೈಬಿಟ್ಟಿದೆ. ಮಧ್ಯ ಪ್ರದೇಶ ಸರ್ಕಾರದ ಮುಖ್ಯಕಾರ್ಯದರ್ಶಿ ಎಸ್ ಸಿ ಬೆಹರ್ ಅವರು ಮೇಧಾ ಅವರಿಗೆ ನಿಂಬೆ ಹಣ್ಣಿನ ರಸವನ್ನು ಕುಡಿಯಲು ನೀಡುವ ಮೂಲಕ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸುವಂತೆ ಮನವಿ ಮಾಡಿದರು.
ಇನ್ನು ಈ ಹಿಂದೆ ಮೇಧಾ ಪಾಟ್ಕರ್ ಆರಂಭಿಸಿದ್ದ ಉಪವಾಸ ಸತ್ಯಾಗ್ರಹಕ್ಕೆ ಇನ್ನೂ ಐದು ಜನ ಮಹಿಳೆಯರು ಕೂಡ ಭಾಗವಹಿಸಿದ್ದರು.
ಈ ತಿಂಗಳ ಪ್ರಾರಂಭದಲ್ಲಿ ಅಧಿಕ ಮಳೆಯಿಂದ ಜಲಾಶಯದ ಹಿನ್ನೀರಿನ ಮಟ್ಟ ಜಾಸ್ತಿಯಾಗಿತ್ತು. ಹೀಗಾಗಿ ಬಾರ್ವಾನಿ ಜಿಲ್ಲೆಯ ಅನೇಕ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಜಿಲ್ಲೆಯ ರಾಜ್ಘಟ್ ಮತ್ತು ಛೋಟ ಬಡ್ದಾ ಗ್ರಾಮಗಳಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿತ್ತು. ಬಳಿಕ ಆ ಎರಡು ಗ್ರಾಮಗಳಲ್ಲಿನ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿತ್ತು. ಆದರೆ ಸರ್ಕಾರದ ಪ್ರವಾಹ ಪರಿಹಾರ ಕಾರ್ಯಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಮೇಧಾ ಅವರು, ಪುನರ್ವಸತಿ ಕಲ್ಪಿಸುವುದು ಎಂದರೆ ನೆರೆ ಸಂತ್ರಸ್ತರಿಗೆ ಕೇವಲ 5 ಲಕ್ಷ ಪರಿಹಾರ ಘೋಷಿಸುವುದಲ್ಲ. ಬದಲಾಗಿ ಅವರಿಗೆ ಜೀವನೋಪಾಯ ವ್ಯವಸ್ಥೆಯನ್ನು ಒದಗಿಸಬೇಕು. ಛೋಟ ಬಡ್ದಾ ಗ್ರಾಮದ ಕನಿಷ್ಠ 1 ಸಾವಿರಕ್ಕೂ ಹೆಚ್ಚು ನಿರಾಶ್ರಿತರು ಸರ್ಕಾರ ಪುನರ್ವಸತಿ ಕಲ್ಪಿಸಿ ಕೊಡುತ್ತದೆ ಎಂದು ಕಾಯುತ್ತಿದ್ದಾರೆ. ನಮ್ಮ ಬೇಡಿಕೆಗಳನ್ನು ರಾಜ್ಯ ಸರ್ಕಾರದ ಮುಂದೆ ಇಟ್ಟಿದ್ದೇವೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನಿರಾಶ್ರಿತ ಕೇಂದ್ರಗಳನ್ನು ತೆರೆಯಬೇಕಿತ್ತು. ನೆರೆಪೀಡಿತರಿಗೆ ಈವರೆಗೆ ಯಾವುದೇ ಪುನರ್ವಸತಿ ವ್ಯವಸ್ಥೆ ಕಲ್ಪಿಸಿಲ್ಲ, ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


