ಮೇಲ್ವರ್ಗದ ಬಡವರಿಗೆ ಶೇ.10ರಷ್ಟು ಮೀಸಲಾತಿ ಪ್ರಶ್ನಿಸಿ ಮದ್ರಾಸ್ ಹೈಕೋರ್ಟ್ ಗೆ ಡಿಎಂಕೆ ಅರ್ಜಿ
ಸಾಮಾನ್ಯ ವರ್ಗದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇಕಡಾ 10ರಷ್ಟು ...

ಚೆನ್ನೈ: ಸಾಮಾನ್ಯ ವರ್ಗದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇಕಡಾ 10ರಷ್ಟು ಮೀಸಲಾತಿ ನೀಡುವ ಕೇಂದ್ರ ಸರ್ಕಾರದ ಕಾಯ್ದೆಯನ್ನು ವಿರೋಧಿಸಿ ಡಿಎಂಕೆ ಶುಕ್ರವಾರ ಮದ್ರಾಸ್ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದೆ.
ಪಕ್ಷದ ಸಂಘಟನಾ ಕಾರ್ಯದರ್ಶಿ ಆರ್ ಎಸ್ ಭಾರತಿ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ, ಹಲವಾರು ವರ್ಷಗಳಿಂದ ಸಮಾಜದಲ್ಲಿ ತಾರತಮ್ಯ ಎದುರಿಸುತ್ತ ತುಳಿತಕ್ಕೊಳಗಾದವರ ಒಬಿಸಿ, ಎಸ್ಸಿ, ಎಸ್ಟಿಯಂತಹ ಹಿಂದುಳಿದ ಸಮುದಾಯಗಳ ಉನ್ನತಿಗೆ ತರಲಾಗಿರುವ ಮೀಸಲಾತಿ ಕಾಯ್ದೆಯನ್ನು ಅದಕ್ಕೆ ಮಾತ್ರ ಬಳಸಿದರೆ ಕಾಯ್ದೆಗೆ ನ್ಯಾಯ ಒದಗಿಸಿದಂತಾಗುತ್ತದೆ. ಅದು ಸಮಾನತೆ ಕಾಯ್ದೆಗೆ ಹೊರತಾದ ಕಾಯ್ದೆ ಎಂದು ವಿವರಿಸಲಾಗಿದೆ.
ಮೀಸಲಾತಿ ಎಂಬುದು ಬಡತನ ನಿರ್ಮೂಲನೆಗಿರುವ ಯೋಜನೆಯಲ್ಲವಾದ್ದರಿಂದ ಆರ್ಥಕವಾಗಿ ಹಿಂದುಳಿದವರಿಗೆ ಮೀಸಲಾತಿ ಕಾಯ್ದೆ ತರಲು ಸಾಧ್ಯವಿಲ್ಲ. ತಮಿಳು ನಾಡು ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳು(ಶಿಕ್ಷಣ ಸಂಸ್ಥೆಗಳಲ್ಲಿ ಸ್ಥಾನಗಳ ಮೀಸಲಾತಿ ಮತ್ತು ರಾಜ್ಯಸರ್ಕಾರದ ಸೇವೆಗಳಲ್ಲಿ ನೇಮಕಾತಿ ಅಥವಾ ಹುದ್ದೆ) ಕಾಯ್ದೆ 1993) ಅಡಿಯಲ್ಲಿ ರಾಜ್ಯದಲ್ಲಿ ಈಗಾಗಲೇ ಶೇಕಡಾ 69ರಷ್ಟು ಮೀಸಲಾತಿ ನೀಡಲಾಗುತ್ತಿದ್ದು ಅದು ಸಂವಿಧಾನದ 9ನೇ ವಿವರಪಟ್ಟಿಯಲ್ಲಿ ಮತ್ತು ಪರಿಚ್ಛೇದ 31-ಬಿಯಡಿ ಬರುತ್ತದೆ.
ಬೇರೆ ರಾಜ್ಯಗಳಲ್ಲಿ ಮೀಸಲಾತಿ ಶೇಕಡಾ 50ನ್ನು ಮೀರಲು ಸಾಧ್ಯವಿಲ್ಲ ಎಂಬ ನಿಯಮದಂತೆ ತಮಿಳು ನಾಡಿನಲ್ಲಿ ಶೇಕಡಾ 69ನ್ನು ಮೀರಲು ಸಾಧ್ಯವಿಲ್ಲ. ಒಂದು ವೇಳೆ ಜಾರಿಗೆ ತಂದರೆ ಅದು ಸಂವಿಧಾನ ಪರಿಚ್ಛೇದ 14,15(1) ಮತ್ತು 16(1)ರ ತತ್ವಗಳಿಗೆ ವ್ಯತಿರಿಕ್ತವಾಗುತ್ತದೆ. ಸಂವಿಧಾನವನ್ನು ತಿದ್ದುಪಡಿ ಮಾಡಲು ಹೊರಟರೆ, 1973ರಲ್ಲಿ ಕೇರಳದಲ್ಲಿ ಕೇಶವಾನಂದ ಭಾರತಿ ಸ್ವಾಮಿಗಳು ಮತ್ತು ಕೇರಳ ಸರ್ಕಾರದ ನಡುವಿನ ಕೇಸಿಗೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶದಂತೆ ಮೂಲ ತತ್ವಗಳನ್ನು ತಿರುಚಿದಂತಾಗುತ್ತದೆ ಎಂದು ಡಿಎಂಕೆ ಆಕ್ಷೇಪ ವ್ಯಕ್ತಪಡಿಸಿದೆ.
ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಕಾಯ್ದೆಯು ಮೂಲಭೂತ ಹಕ್ಕುಗಳನ್ನು ನಾಶಪಡಿಸುತ್ತಿದ್ದು ಸಂವಿಧಾನದ ಮೂಲ ರಚನೆಯನ್ನು ಬದಲಾಯಿಸುತ್ತದೆ. ಸಂವಿಧಾನದ ಅನುಚ್ಛೇದ 14ರ ಪ್ರಕಾರ ಅದನ್ನು ತಿರುಚಲು, ತಿದ್ದುಪಡಿ ಮಾಡಲು ಸಾಧ್ಯವಿಲ್ಲ. ಹೀಗಾಗಿ ಸಂವಿಧಾನದ 103ನೇ ತಿದ್ದುಪಡಿ ಕಾಯ್ದೆ 2019ನ್ನು ಅಸಂವಿಧಾನಿಕ ಮತ್ತು ನಿರರ್ಥಕ ಎಂದು ಆದೇಶ ನೀಡಬೇಕೆಂದು ಅರ್ಜಿಯಲ್ಲಿ ಭಾರತಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


