ದೇಶ

ವಾಯುದಾಳಿ ಬೆನ್ನಲ್ಲೇ ಪಾಕ್ ಹತಾಶೆ; ಇಂಡೋ-ಪಾಕ್ ಗಡಿಯ 50ಕಡೆ ಕದನ ವಿರಾಮ ಉಲ್ಲಂಘನೆ, 5 ಯೋಧರಿಗೆ ಗಾಯ!

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ವಾಯುಸೇನೆ ಉಗ್ರರ ಅಡಗುದಾಣಗಳ ಮೇಲೆ ದಾಳಿ ಮಾಡಿ ಸುರಕ್ಷಿತವಾಗಿ ವಾಪಸ್ ಆದ ಬೆನ್ನಲ್ಲೇ ಇದೀಗ ಇಂಡೋ-ಪಾಕ್ ಗಡಿಯಲ್ಲಿ ಪಾಕಿಸ್ತಾನ ಸೇನೆ ಹತಾಶೆಯಿಂದ ಅಪ್ರಚೋದಿತ ಕದನ ವಿರಾಮ ಉಲ್ಲಂಘನೆ ಮಾಡಿದೆ.

ವಾಯುದಾಳಿ ಬೆನ್ನಲ್ಲೇ ಪಾಕ್ ಹತಾಶೆ; ಇಂಡೋ-ಪಾಕ್ ಗಡಿಯ 50ಕಡೆ ಕದನ ವಿರಾಮ ಉಲ್ಲಂಘನೆ, 5 ಯೋಧರಿಗೆ ಗಾಯ!
ಸಂಗ್ರಹ ಚಿತ್ರ
Published On :
ಶ್ರೀನಗರ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ವಾಯುಸೇನೆ ಉಗ್ರರ ಅಡಗುದಾಣಗಳ ಮೇಲೆ ದಾಳಿ ಮಾಡಿ ಸುರಕ್ಷಿತವಾಗಿ ವಾಪಸ್ ಆದ ಬೆನ್ನಲ್ಲೇ ಇದೀಗ ಇಂಡೋ-ಪಾಕ್ ಗಡಿಯಲ್ಲಿ ಪಾಕಿಸ್ತಾನ ಸೇನೆ ಹತಾಶೆಯಿಂದ ಅಪ್ರಚೋದಿತ ಕದನ ವಿರಾಮ ಉಲ್ಲಂಘನೆ ಮಾಡಿದೆ.
ಗಡಿ ನಿಯಂತ್ರಣ ರೇಖೆಯುದ್ಧಕ್ಕೂ ಪಾಕಿಸ್ತಾನ ನಿರಂತರವಾಗಿ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದ್ದು ಕದನ ವಿರಾಮ ಉಲ್ಲಂಘನೆ ಮಾಡುತ್ತಿದೆ. ಸೇನಾ ಮೂಲಗಳ ಪ್ರಕಾರ ಎಲ್ ಒಸಿಯ ಸುಮಾರು 50ಕಡೆಗಳಲ್ಲಿ ಪಾಕ್ ಸೇನೆ ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಭಾರತೀಯ ಪಡೆಗಳ ಮೇಲೆ ನಿರಂತರ ಗುಂಡಿನ ದಾಳಿ ಮಾಡುತ್ತಿದೆ. ಅಲ್ಲದೆ ನಿರತಂರವಾಗಿ ಶೆಲ್ ದಾಳಿ ಕೂಡ ಮಾಡುತ್ತಿದ್ದು, ಪಾಕಿಸ್ತಾನ ಸೇನೆಯ ಉದ್ಧಟತನಕ್ಕೆ ಭಾರತ ಕೂಡ ಅದೇ ಧಾಟಿಯಲ್ಲಿ ಉತ್ತರ ನೀಡುತ್ತಿದ್ದು, ಪಾಕ್ ಸೇನೆಯ ಮೇಲೆ ನಿರಂತರ ಗುಂಡಿನ ದಾಳಿ ನಡೆಸಿದೆ. 
ಮಂಗಳವಾರ ಸಂಜೆ 5.30 ರಷ್ಟರಲ್ಲಿ ಫಿರಂಗಿ ಮೂಲಕ ದೊಡ್ಡ ಶೆಲ್​ ದಾಳಿ ಪ್ರಾರಂಭಿಸುವ ಮೂಲಕ ಕದನ ವಿರಾಮ ಉಲ್ಲಂಘನೆ ಮಾಡಿದೆ. ಜಮ್ಮು ಕಾಶ್ಮೀರದ ಅಖನೂರ್​, ನೌಶೇರಾ, ಕೃಷ್ಣಾ ಘಾಟಿ ಸೆಕ್ಟರ್​ಗಳಲ್ಲಿ ಪಾಕ್​ ಪುಂಡಾಟ ಮೆರೆಯುತ್ತಿದೆ. ಹಾಗೇ ಸಣ್ಣ ಶಸ್ತ್ರಾಸ್ತ್ರಗಳ ಮುಖಾಂತರವೂ ಗುಂಡಿನ ದಾಳಿ ನಡೆಸಿದೆ ಎಂದು ರಕ್ಷಣಾ ಇಲಾಖೆ ಅಧಿಕಾರಿ ದೇವೇಂದ್ರ ಆನಂದ್​ ತಿಳಿಸಿದ್ದಾರೆ. ಭಾರತ ಸೈನ್ಯ ಕೂಡ ಇದನ್ನು ದಿಟ್ಟವಾಗಿ ಎದುರಿಸುತ್ತಿದೆ. ಯಾವುದೇ ಭಯ ಪಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪರಿಣಾಮ ಇದೀಗ ಗಡಿಯಲ್ಲಿ ಅಕ್ಷರಶಃ ಯುದ್ಧ ಪರಿಸ್ಥಿತಿ ನಿರ್ಮಾಣವಾಗಿದ್ದು, ಘಟನೆಯಲ್ಲಿ ಭಾರತೀಯ ಸೇನೆಯ ಐವರು ಸೈನಿಕರು ಗಾಯಗೊಂಡಿದ್ದಾರೆ. ಗಾಯಾಳು ಸೈನಿಕರನ್ನು ಸಮೀಪದ ಸೇನಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಪ್ರಧಾನಿ ಮೋದಿ ಭೇಟಿ ಬೆನ್ನಲ್ಲೇ ಮೂರು ದಳಗಳಿಗೆ ಹೈ ಅಲರ್ಟ್ ಘೋಷಣೆ
ಇನ್ನು ವಾಯು ದಾಳಿ ಬಳಿಕ ಸೇನೆಯ ಮೂರು ದಳಗಳ ಮುಖ್ಯಸ್ಥರೊಂದಿಗೆ ಪ್ರಧಾನಿ ಮೋದಿ ಚರ್ಚೆ ನಡೆಸಿದ್ದರು. ಈ ಚರ್ಚೆ ಮುಕ್ತಾಯದ ಬೆನ್ನಲ್ಲೇ ಭಾರತದಾದ್ಯಂತ ಹೈಅಲರ್ಟ್ ಘೋಷಣೆ ಮಾಡಲಾಗಿದ್ದು, ಗಡಿಯುದ್ಧಕ್ಕೂ ಕಟ್ಟೆಚ್ಚರದಿಂದ ಇರುವಂತೆ ಸೇನಾಪಡೆಗಳಿಗೆ ಸೂಚನೆ ನೀಡಲಾಗಿದೆ. ಅಲ್ಲದೆ ಸೇನೆಯ ಮೂರು ದಳಗಳು ಯಾವುದೇ ಪರಿಸ್ಥಿತಿ ಎದುರಿಸಲು ಸರ್ವಸನ್ನದ್ಧವಾಗಿರುವಂತೆ ಸೂಚನೆ ನೀಡಲಾಗಿದೆ. 
ಇದೇ ಕಾರಣಕ್ಕೆ ಭಾರತೀಯ ನೌಕಾಪಡೆ ತಮ್ಮ ತರಬೇತಿ ಮೊಟಕುಗೊಳಿಸಿ ಹಿಂದೂ ಮಹಾಸಾಗರದಲ್ಲಿ ಗಸ್ತು ತಿರುಗುತ್ತಿದ್ದು, ನೌಕಾಪಡೆಯ ಅತ್ಯಾಧುನಿಕ ಯುದ್ಧ ನೌಕೆಗಳನ್ನು ಗಸ್ತು ಕಾರ್ಯಕ್ಕಾಗಿ ಸಮುದ್ರಕ್ಕೆ ಇಳಿಸಲಾಗಿದೆ. ಅಂತೆಯೇ ವಾಯುಪಡೆಯ ಎಲ್ಲ ವಾಯುನೆಲೆಗಳೂ ಸರ್ವ ಸನ್ನದ್ಧವಾಗಿರುವಂತೆ ಸೂಚನೆ ನೀಡಲಾಗಿದ್ದು ಎಲ್ಲ ವಿಮಾನಗಳು ಯಾವುದೇ ಪರಿಸ್ಥಿತಿ ಎದುರಿಸಲು ಸಿದ್ಧವಾಗಿರುವಂತೆ ಸೂಚನೆ ನೀಡಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.