ದೇಶ

ಬಿಹಾರದ ಜ್ಯೂನಿಯರ್​ ಇಂಜಿನಿಯರ್ ಹುದ್ದೆ ಪರೀಕ್ಷೆಯಲ್ಲಿ ಸನ್ನಿ ಲಿಯೊನ್ ಟಾಪರ್​!

ಬಿಹಾರ ಸರ್ಕಾರ ಜ್ಯೂನಿಯರ್ ಇಂಜಿನಿಯರ್ ಹುದ್ದೆಗೆ ನಡೆಸಿದ ಪರೀಕ್ಷೆಯಲ್ಲಿ ಸನ್ನಿ ಲಿಯೋನ್ ಅತ್ಯಧಿಕ ಅಂಕ ಪಡೆದು ಟಾಪರ್ ಆಗಿ ಹೊರಹೊಮ್ಮಿದ್ದಾರೆ!

ಬಿಹಾರದ ಜ್ಯೂನಿಯರ್​ ಇಂಜಿನಿಯರ್ ಹುದ್ದೆ ಪರೀಕ್ಷೆಯಲ್ಲಿ ಸನ್ನಿ ಲಿಯೊನ್ ಟಾಪರ್​!
ಸನ್ನಿ ಲಿಯೋನ್
Published On :
ಪಾಟ್ನಾ: ಬಿಹಾರ ಸರ್ಕಾರ ಜ್ಯೂನಿಯರ್ ಇಂಜಿನಿಯರ್ ಹುದ್ದೆಗೆ ನಡೆಸಿದ ಪರೀಕ್ಷೆಯಲ್ಲಿ ಸನ್ನಿ ಲಿಯೋನ್ ಅತ್ಯಧಿಕ ಅಂಕ ಪಡೆದು ಟಾಪರ್ ಆಗಿ ಹೊರಹೊಮ್ಮಿದ್ದಾರೆ!
ಹೌದು, ಅಚ್ಚರಿಯಾದರೂ ಇದು ಸತ್ಯ. ಆದರೆ, ನೀವು ಭಾವಿಸುವಂತೆ ಜ್ಯೂನಿಯರ್​ ​ ಇಂಜಿನಿಯರ್​ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ಸನ್ನಿ ಲಿಯೊನ್​ ನೀಲಿಚಿತ್ರಗಳ ಮಾಜಿ ತಾರೆ ಹಾಗೂ ಬಾಲಿವುಡ್​ ನಟಿ ಸನ್ನಿ ಲಿಯೊನ್​ ಅಲ್ಲ. ಲಿಯೊನ್ ಲಿಯೊನ್ ಎಂಬುವರ ಮಗಳು 27 ವರ್ಷದ ಸನ್ನಿ ಲಿಯೊನ್!
ಜ್ಯೂನಿಯರ್ ಇಂಜಿನಿಯರ್ ಹುದ್ದೆಗಾಗಿ ಬಿಹಾರದ ಸಾರ್ವಜನಿಕ ಆರೋಗ್ಯ ಇಂಜಿನಿಯರಿಂಗ್​ ವಿಭಾಗ (ಪಿಎಚ್​ಇಡಿ) ನಡೆಸಿದ ಪರೀಕ್ಷೆಯ ಫಲಿತಾಂಶ ಹಾಗೂ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಅಧಿಕೃತ ವೆಬ್ ಸೈಟ್(phed.bih.nic.in)ನಲ್ಲಿ ಪ್ರಕಟಿಸಲಾಗಿದ್ದು, ಸನ್ನಿ ಲಿಯೊನ್ ಅರ್ಹತಾ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಸೇರಿದಂತೆ ಪದವಿಯಲ್ಲಿ ಪಡೆದ ಅಂಕಗಳು ಸೇರಿ ಒಟ್ಟಾರೆ 98.5 ಅಂಕ ಗಳಿಸುವ ಮೂಲಕ ಮೆರಿಟ್ ಲಿಸ್ಟ್‌ನಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ಈ ಸುದ್ದಿ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಸುದ್ದಿ ವೈರಲ್ ಆಗುತ್ತಿದ್ದಂತೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಪಿಎಚ್ ಇಡಿ ಸಚಿವ ವಿನೋದ್ ನಾರಾಯಣ್ ಜಾ ಅವರು, ಇದು ಅಂತಿಮ ಪಟ್ಟಿಯಲ್ಲ. ಪಟ್ಟಿಯಲ್ಲಿರುವ ಹೆಸರುಗಳನ್ನು ಮತ್ತು ದಾಖಲೆಗಳನ್ನು ಮತ್ತೊಮ್ಮೆ ಪರಿಶೀಲಿಸಲಾಗುವುದು ಎಂದಿದ್ದಾರೆ.
ಸನ್ನಿ ಲಿಯೋನ್ ಯಾರು ಅಂತ ನನಗೆ ಗೊತ್ತಿಲ್ಲ. ಆ ಹೆಸರು ವೆಬ್ ಸೈಟ್ ನಲ್ಲಿ ಪ್ರಕಟವಾಗಿದ್ದು, ಸದ್ದು ಮಾಡುತ್ತಿದೆ. ಒಂದು ವೇಳೆ ತಪ್ಪಾಗಿ ಪ್ರಕಟವಾಗಿದ್ದರೆ ಪರಿಶೀಲಿಸಲಾಗುವುದು ಎಂದು ಇಲಾಖೆ ವಿಶೇಷ ಕಾರ್ಯದರ್ಶಿ ಸತೀಶ್ ಚಂದ್ರ ಮಿಶ್ರಾ ಅವರು ಹೇಳಿದ್ದಾರೆ.
ಕೇವಲ ಲಿಯೊನ್​ ಅವರ ಒಬ್ಬರ ಹೆಸರು ಮಾತ್ರ ಹೀಗೆ ಆಶ್ಚರ್ಯಕರವಾಗಿಲ್ಲ. ಇದೇ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಅಭ್ಯರ್ಥಿಯ ಹೆಸರು 'bvcxzbnnb' ಎಂದು ಇದೆ. ಇವರ ತಂದೆ ಹೆಸರು ಕೂಡ ಹೀಗೆ ಅಸಂಬದ್ಧ ಅಕ್ಷರಗಳಿಂದ ಕೂಡಿದೆ.
214 ಜೂನಿಯರ್ ಸಿವಿಲ್​ ಇಂಜಿನಿಯರ್​ ಹುದ್ದೆ ಕರೆಯಲಾಗಿದ್ದ ಪರೀಕ್ಷೆಗೆ ಒಟ್ಟು 17,911 ಅಭ್ಯರ್ಥಿಗಳು ಅರ್ಜಿ ಹಾಕಿದ್ದರು. ಇವರಲ್ಲಿ 643 ಮಂದಿ ತಾತ್ಕಾಲಿಕ ಪಟ್ಟಿಯಲ್ಲಿ ಆಯ್ಕೆಯಾಗಿದ್ದಾರೆ. ಇವರಲ್ಲಿ ಸನ್ನಿ ಲಿಯೊನ್​ ಎಂಬುವವರು ಮೊದಲ ಸ್ಥಾನ ಪಡೆದಿದ್ದಾರೆ. 
ಸನ್ನಿ ಲಿಯೊನ್​ ಸೇರಿದಂತೆ ಆಯ್ಕೆಯಾಗಿರುವ ಅಭ್ಯರ್ಥಿಗಳು ತಮ್ಮ ಗುರುತಿನ ಮಾಹಿತಿಯನ್ನು ವಿಭಾಗಕ್ಕೆ ಒದಗಿಸಬೇಕಿದೆ. ವಿಭಾಗವು ಅಭ್ಯರ್ಥಿಗಳಿಗೆ ಫೆ.24ರವರೆಗೆ ಕಾಲಾವಕಾಶ ನೀಡಿದ್ದು, ಅಷ್ಟರಲ್ಲಿ ಪಟ್ಟಿಯಲ್ಲಿ ತಪ್ಪಾದ ಮಾಹಿತಿಯನ್ನು ನವೀಕರಿಸಲು ಹಾಗೂ ತಮ್ಮ ಗುರುತನ್ನು ಸಾಬೀತುಪಡಿಸಬೇಕಿದೆ. ಇಲ್ಲವಾದಲ್ಲಿ ಅವರು ಅನರ್ಹರಾಗುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.