ಲೋಕಸಭೆ ಕಣಕ್ಕೆ ಹಾರ್ದಿಕ್ ಪಟೇಲ್: ಕೈ ಪಾಳಯಕ್ಕೆ ಸೇರಲಿದ್ದಾರಾ ಪಟೇಲ್ ನಾಯಕ?
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗುಜರಾತಿನಲ್ಲಿ ಪಟೇಲ್ ಸಮುದಾಯದ ಮೀಸಲಿಗಾಗಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಹಾರ್ದಿಕ್ ಪಟೇಲ್....

Published On :
ಲಖನೌ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗುಜರಾತಿನಲ್ಲಿ ಪಟೇಲ್ ಸಮುದಾಯದ ಮೀಸಲಿಗಾಗಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಹಾರ್ದಿಕ್ ಪಟೇಲ್ ಸ್ಪರ್ಧಿಸುವುದು ಖಚಿತವಾಗಿದೆ. ಪಟೇಲ್ ಈ ಸಂಬಂಧ ಬುಧವಾರ ಅಧಿಕೃತ ಘೋಷಣೆ ಮಾಡಿದ್ದಾರೆ.
ಪಟೇಲ್ ತಾವು ಯಾವುದೇ ರಾಜಕೀಯ ಪಕ್ಷದಿಂದ ಸ್ಪರ್ಧಿಸಲಿದ್ದಾರೆಯೆ ಅಥವಾ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎನ್ನುವುದನ್ನು ಅವರು ಹೇಳಿಲ್ಲವಾದರೂ ಚುನಾವಣೆಯಲ್ಲಿ ಹೋರಾಟ ನಡೆಸಲು ಅವರು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಬಹುದು ಎಂದು ಮೂಲಗಳು ಹೇಳಿದೆ.
ನಾನು ಖಂಡಿತವಾಗಿಯೂ 2019 ರ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದೇವೆ ಎಂದು ಪಟೇಲ್ ಅವರು ಲಖನೌದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಈ ವೇಳೆ ನೀವೇನಾದರೂ ಕಾಂಗ್ರೆಸ್ ಗೆ ಸೇರುವಿರೆ ಎಂದು ಕೇಳಲಾಗಿ "ನಾನಿನ್ನೂ ಆ ನಿರ್ಧಾರಕ್ಕೆ ಬಂದಿಲ್ಲ, ಇದರ ಕುರಿತು ಮುಂದೆ ಯೋಚಿಸಿ ನಿರ್ಧರಿಸುತ್ತೇನೆ" ಎಂದಿದ್ದಾರೆ.
ಇತ್ತ ಚುನಾವಣೆಗೆ ಸ್ಪರ್ಧಿಸುವ ಕುರಿತಂತೆ ಹಾಗೂ ಪಕ್ಷಕ್ಕೆ ಸೇರುವ ಕುರಿತಂತೆ ಪಟೇಲ್ ಅವರೊಡನೆ ಮಾತುಕತೆ ನಡೆದಿತ್ತು ಎಂದು ಕಾಂಗ್ರೆಸ್ ಪಕ್ಷದ ಮೂಲಗಳು ಹೇಳಿದೆ. ಪಟೇಲ್ ಮೆಹ್ಸಾನಾ ಅಥವಾ ಅಮ್ರೇಲಿ ಕ್ಷೇತ್ರದಿಂದ ಕಣಕ್ಕಿಳಿಯುವ ಸಾಧ್ಯತೆ ಇದೆ.ಈ ಕ್ಷೇತ್ರಗಳು ಪಟೇಲ್ ಸಮುದಾಯದ ಪ್ರಬಲ ಕೋಟೆಯಾಗಿದೆ ಎಂದು ಕೈ ಪಕ್ಷ ಹೇಳಿದೆ.
ಆದರೆ 2015 ರ ಪಟಿದಾರ್ ಆಂದೋಲನದ ಸಂದರ್ಭದಲ್ಲಿ ಹಿಂಸಾಚಾರ ನಡೆದಿದ್ದು ಈ ವೇಳೆ ಮೆಹ್ಸಾನಾಗೆ ಹಾರ್ದಿಕ್ ಪಟೇಲ್ ಪ್ರವೇಶವನ್ನು ನ್ಯಾಯಾಲಯ ನಿಷೇಧಿಸಿದೆ.ಈ ಸಂಬಂಧ ಕೆಳ ನ್ಯಾಯಾಲಯ ನೀಡಿದ್ದ ತೀರ್ಪಿನ ವಿರುದ್ಧ ಪಟೇಲ್ ಗುಜರಾತ್ ಹೈಕೋರ್ಟ್ ಗೆ ಮನವಿ ಸಲ್ಲಿಸಿದ್ದರು."ಒಂದು ವೇಳೆ ಹೈಕೋರ್ಟ್ ಪಟೇಲ್ ಅವರಿಗೆ ಮೆಹ್ಸಾನಾ ಪ್ರವೇಶಕ್ಕಾಗಿ ಅನುಮತಿಸಿದರೆ ಅವರು ಅಲ್ಲಿಂದ ಸ್ಪರ್ಧಿಸಲಿದ್ದಾರೆ. ಅಮ್ರೇಲಿ ಅವರ ಆದ್ಯತೆಯ ಇನ್ನೊಂದು ಕ್ಷೇತ್ರವಾಗಿದೆ" ಕಾಂಗ್ರೆಸ್ ನಾಯಕರು ಹೇಳಿದ್ದಾರೆ.
ಇದೇ ವೇಳೆ ಹಾರ್ದಿಕ್ ಪಟೇಲ್ ಸ್ವತಂತ್ರ ಅಭ್ಯರ್ಥಿಯಾಗಿ ಕಾಂಗ್ರೆಸ್ ನ ಪರೋಕ್ಷ ಬೆಂಬಲದೊಡನೆ ಕಣಕ್ಕೊಳಿಯುವುದನ್ನು ಸಹ ಕೈ ಪಾಳಯ ಸಂಪೂರ್ಣ ಅಲ್ಲಗೆಳೆದಿಲ್ಲ.
ಗುಜರಾತಿನಲ್ಲಿ ಹಾರ್ದಿಕ್ ಪಟೇಲ್ ಸ್ಪರ್ಧೆ ಲೋಕಸಭೆ ಚುನಾವಣೆ ಮೇಲೆ ಪರಿಣಾಮ ಬೀರಲಿದೆ. ರಾಜ್ಯದಲ್ಲಿ 1995ರಿಂದ ಬಿಜೆಪಿ ಅಧಿಕಾರದಲ್ಲಿದೆ. ಅಲ್ಲದೆ 2014 ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ 26 ಲೋಕಸಭಾ ಸ್ಥಾನಗಳನ್ನು ಗೆದ್ದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


