ಅಮೆರಿಕಾದಲ್ಲಿ ಬಂಧಿತ ವಿದ್ಯಾರ್ಥಿಗಳ ರಕ್ಷಣೆಗೆ ಮೊದಲ ಆದ್ಯತೆ: ಸುಷ್ಮಾ ಸ್ವರಾಜ್
ಅಕ್ರಮ ವೀಸಾ ಹೊಂದಿದ ಆರೋಪದ ಮೇಲೆ ಬಂಧಿತರಾಗಿರುವ ಭಾರತೀಯ ಮೂಲದ ವಿದ್ಯಾರ್ಥಿಗಳ ರಕ್ಷಣೆಗೆ ಭಾರತ ಸರ್ಕಾರ ಬದ್ಧವಾಗಿರುವುದಾಗಿ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ...

ನವದೆಹಲಿ: ಅಕ್ರಮ ವೀಸಾ ಹೊಂದಿದ ಆರೋಪದ ಮೇಲೆ ಬಂಧಿತರಾಗಿರುವ ಭಾರತೀಯ ಮೂಲದ ವಿದ್ಯಾರ್ಥಿಗಳ ರಕ್ಷಣೆಗೆ ಭಾರತ ಸರ್ಕಾರ ಮೊದಲ ಆದ್ಯತೆ ನೀಡುವುದಾಗಿ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.
ಅಮೆರಿಕದಲ್ಲಿ ದೊಡ್ಡ ಪ್ರಮಾಣದ ವೀಸಾ ಹಗರಣ ಬೆಳಕಿಗೆ ಬಂದಿದ್ದು ಒಟ್ಟು 130 ವಿದೇಶಿ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಈ ಪೈಕಿ 129 ಮಂದಿ ವಿದ್ಯಾರ್ಥಿಗಳು ಭಾರತೀಯರು ಎಂದು ತಿಳಿದುಬಂದಿದೆ.ಅಮೆರಿಕದ ಡಿಪಾರ್ಟ್ ಮೆಂಟ್ ಆಫ್ ಹೋಮ್ ಲ್ಯಾಂಡ್ ಸೆಕ್ಯುರಿಟಿ ನಡೆಸಿದ ಕಾರ್ಯಾಚರಣೆಯಲ್ಲಿ ಡೆಟ್ರಾಯ್ಟ್ ನ ಫಾರ್ಮಿಂಗ್ಟನ್ ಹಿಲ್ಸ್ ನಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಪ್ರಮುಖವಾಗಿ ವಿಚಾರಣೆಗೆ ಒಳಪಡಿಸಿದಾಗ ಅದು ನಕಲಿ ವಿ.ವಿ ಎಂದು ಮತ್ತು ಅಕ್ರಮವಾಗಿ ವೀಸಾ ಪಡೆದಿರುವುದು ಬೆಳಕಿಗೆ ಬಂದಿತ್ತು.
ಉಳಿಯುವಿಕೆಗೆ ಹಣ ಪಾವತಿ(ಪೇ ಟು ಸ್ಟೇ ಯೋಜನೆ)ಯಡಿ ವಿದೇಶಿ ವಿದ್ಯಾರ್ಥಿಗಳು ಗೊತ್ತಿದ್ದುಕೊಂಡೇ ತಮ್ಮ ಅಕ್ರಮ ವಿದ್ಯಾರ್ಥಿ ವೀಸಾ ಮೂಲಕ ನಕಲಿ ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ದಾಖಲಾತಿ ಮಾಡಿಕೊಂಡು ಅಮೆರಿಕಾದಲ್ಲಿ ನೆಲೆಸಿದ್ದಾರೆ ಎಂದು ಅಮೆರಿಕಾ ಫೆಡರಲ್ ಪ್ರಾಸಿಕ್ಯೂಟರ್ ವಿಚಾರಣೆ ನಡೆಸಿ ಹೇಳಿದ್ದಾರೆ. ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು ತೀವ್ರ ತನಿಖೆ ನಡೆಸುತ್ತಿದ್ದು, ವಿದ್ಯಾರ್ಥಿಗಳ ಪೋಷಕರಿಗೂ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಅಮೆರಿಕಾ ಸಂಯುಕ್ತ ಸಂಸ್ಥಾನದ ಯುಎಸ್, ನ್ಯೂಜೆರ್ಸಿ, ಅಟ್ಲಾಂಟ, ಹ್ಯೂಸ್ಟನ್, ಮಿಚಿಗನ್, ಕ್ಯಾಲಿಫೋರ್ನಿಯಾ, ಲೂಯಿಸಿಯಾನಾ, ಉತ್ತರ ಕ್ಯಾಲಿಫೋರ್ನಿಯಾ ಮತ್ತು ಸೈಂಟ್ ಲೂಯಿಸ್ ರಾಜ್ಯಗಳಲ್ಲಿ ನಕಲಿ ವಿದ್ಯಾರ್ಥಿ ವೀಸಾ ಬೆಳಕಿಗೆ ಬಂದು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಈ ವಿದ್ಯಾರ್ಥಿಗಳು ಸ್ಟೂಡೆಂಟ್ ವೀಸಾದಡಿ ಅಮೆರಿಕಾಕ್ಕೆ ಕಾನೂನುಬದ್ಧವಾಗಿಯೇ ಹೋಗಿ ಫ್ರೇಮಿಂಗ್ಟನ್ ವಿಶ್ವವಿದ್ಯಾಲಯಕ್ಕೆ ಕೆಲಸ ಮಾಡಲೆಂದು ವೀಸಾವನ್ನು ಅಕ್ರಮವಾಗಿ ವರ್ಗಾಯಿಸಿಕೊಂಡಿದ್ದಾರೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.
ವಿದ್ಯಾರ್ಥಿಗಳ ಹಿಂದಿನ ವಿದ್ಯಾರ್ಹತೆಗೆ ಹಣ ನೀಡುವುದಾಗಿ ಸುಳ್ಳು ಭರವಸೆ ನೀಡಿ ನಕಲಿ ವಿಶ್ವವಿದ್ಯಾಲಯ ಮೋಸ ಮಾಡಿದೆ ಎಂದು ಅಟ್ಲಾಂಟದಲ್ಲಿರುವ ವಲಸೆ ಅಟಾರ್ನಿ ರವಿ ಮನ್ನನ್ ತಿಳಿಸಿದ್ದಾರೆ.
ವಿಶ್ವವಿದ್ಯಾಲಯಕ್ಕೆ ದಾಖಲಾದ ವಿದ್ಯಾರ್ಥಿಗಳಿಗೆ ಕೆಲಸ ನೀಡುವುದಾಗಿ ಫ್ರೇಮಿಂಗ್ಟನ್ ವಿಶ್ವವಿದ್ಯಾಲಯ ಅವಕಾಶ ನೀಡಿತ್ತು. ಅಮೆರಿಕಾದಲ್ಲಿ ಇಂತಹ ಅನೇಕ ವಿಶ್ವವಿದ್ಯಾಲಯಗಳು ಈ ರೀತಿಯ ಅವಕಾಶವನ್ನು ನೀಡುತ್ತವೆ. ಹೀಗೆ ನೀಡಿದರೆ ವಿದ್ಯಾರ್ಥಿಗಳಿಗೆ ಅದು ನಕಲಿ ವಿಶ್ವವಿದ್ಯಾಲಯ ಎಂದು ಸಂಶಯ ಬರುವುದಿಲ್ಲ. ಅದು ಅಧಿಕೃತ ವಿ.ವಿ ಎಂದು ಭಾವಿಸಿ ಎಫ್-1 ವೀಸಾ(ಪಠ್ಯಕ್ರಮ ಪ್ರಾಯೋಗಿಕ ತರಬೇತಿ) ಪಡೆಯುತ್ತಾರೆ.
ಆದರೆ ವಕೀಲರು ಹೇಳುವ ಪ್ರಕಾರ ವಿದ್ಯಾರ್ಥಿಗಳು ಇಲ್ಲಿ ಅಮಾಯಕರಲ್ಲ. ಅಕ್ರಮ ವಿಶ್ವವಿದ್ಯಾಲಯ ಎಂದು ತಿಳಿದಿದ್ದರೂ ಕೂಡ ಅಕ್ರಮ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತಾರೆ ಎನ್ನುತ್ತಾರೆ ಅಟೊರ್ನಿ ಮೈಕೆಲ್ ಸೊಫೊ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


