ಚತ್ತೀಸ್ ಗಢದಲ್ಲಿ ಕಾಂಗ್ರೆಸ್ ಗೆ ಕೈಕೊಟ್ಟ ಬೆಹನ್: ಮಾಯವತಿ ನಡೆ ಹಿಂದಿನ ಮರ್ಮವೇನು?
ಚತ್ತೀಸ್ ಗಢ, ರಾಜಸ್ಥಾನ, ಮಧ್ಯಪ್ರದೇಶ ಚುನಾವಣೆಯನ್ನು ಮಹಾಘಟಬಂಧನದ ಸತ್ವ ಪರೀಕ್ಷೆ ಎಂದೇ ವಿಶ್ಲೇಷಿಸಲಾಗುತ್ತಿತ್ತು.

Published On :
ಚತ್ತೀಸ್ ಗಢ, ರಾಜಸ್ಥಾನ, ಮಧ್ಯಪ್ರದೇಶ ಚುನಾವಣೆಯನ್ನು ಮಹಾಘಟಬಂಧನದ ಸತ್ವ ಪರೀಕ್ಷೆ ಎಂದೇ ವಿಶ್ಲೇಷಿಸಲಾಗುತ್ತಿತ್ತು. ಆದರೆ ಚತ್ತೀಸ್ ಗಢದಲ್ಲಿ ನಡೆದಿರುವ ಬೆಳವಣಿಗೆಗಳು ಮಹಾಘಟಬಂಧನ ಪ್ರಯೋಗ ಯಶಸ್ವಿಯಾಗುವುದೇ ಅನುಮಾನ ಎಂಬಂತೆ ಮಾಡಿದೆ. ಬುಡಕಟ್ಟು ಹಾಗೂ ದಲಿತ ಮತಗಳು ಹೆಚ್ಚಿರುವ ಚತ್ತೀಸ್ ಗಢದಲ್ಲಿ ಬಿಎಸ್ ಪಿ ಕಾಂಗ್ರೆಸ್ ಜೊತೆ ಕೈ ಜೋಡಿಸಲಿದೆ ಎಂಬ ನಿರೀಕ್ಷೆ ಇತ್ತು. ಆದರೆ ಎಲ್ಲರಿಗೂ ಅಚ್ಚರಿ ಉಂಟಾಗುವ ರೀತಿಯಲ್ಲಿ ಮಾಯಾವತಿ ನೇತೃತ್ವದ ಬಿಎಸ್ ಪಿ ಚತ್ತೀಸ್ ಗಢ ಮಾಜಿ ಸಿಎಂ ಅಜಿತ್ ಜೋಗಿ ಜೊತೆ ದೋಸ್ತಿಗೆ ಮುಂದಾಗಿದ್ದು, ಮಹಾಘಟಬಂಧನವನ್ನು ದಂಗಾಗಿಸಿದ್ದಾರೆ.
ಹಾಗೆ ನೋಡಿದರೆ ಚತ್ತೀಸ್ ಗಢದಲ್ಲಿ ಜೆಸಿಸಿ-ಬಿಎಸ್ ಪಿ ಜೊತೆಗಿನ ಮೈತ್ರಿಯ ಸುಳಿವು ಮಾಯಾವತಿ-ಅಜಿತ್ ಜೋಗಿ ಅವರನ್ನು ಜುಲೈ ನಲ್ಲಿ ಭೇಟಿ ಮಾಡಿದ್ದಾಗಲೇ ಸಿಕ್ಕಿತ್ತು. ದಲಿತ ಪ್ರಾಬಲ್ಯ ಹೊಂದಿರುವ ಕೇಂದ್ರ ಚತ್ತೀಸ್ ಗಢದ ಸತ್ನಾಮಿಯಲ್ಲಿ ಬಿಎಸ್ ಪಿ ತನ್ನ ಓಟ್ ಬ್ಯಾಂಕ್ ನ್ನು ಹೊಂದಿದೆ. ಕಳೆದ ನಾಲ್ಕು ಚುನಾವಣೆಗಳಲ್ಲಿ ಬಿಎಸ್ ಪಿ ಈ ಭಾಗದಲ್ಲಿ ಶೇ.5-10 ಮತಗಳನ್ನು ಪಡೆದಿದ್ದು ಓರ್ವ ಶಾಸಕನನ್ನೂ ಹೊಂದಿದೆ. ಬಿಎಸ್ ಪಿ ಸಂಸ್ಥಾಪಕ ಕಾನ್ಷಿ ರಾಮ್ ತಮ್ಮ ಮೊದಲ ಲೋಕಸಭಾ ಚುನಾವಣೆಯನ್ನು ಎದುರಿಸಿದ್ದ ಚತೀಸ್ ಗಢದಲ್ಲಿ ಅವರ ಶಿಷ್ಯೆ ಮಾಯಾವತಿ ಈಗ ಹೊಸ ರಾಜಕೀಯ ದಾಳ ಉರುಳಿಸಿದ್ದಾರೆ. ಮಾಯಾವತಿ ಅವರ ಈ ಹೊಸ ದಾಳ ಮಹಾಘಟಬಂಧನಕ್ಕೆ ಹೇಗೆ ಉರುಳಾಗಲಿದೆ ಎಂಬುದು ಮತ್ತಷ್ಟು ಕುತೂಹಲಕಾರಿ ವಿಷಯ.
ಮಾಯವಾತಿ ಅವರ ಚತ್ತೀಸ್ ಗಢದ ನಡೆ ಮಾತ್ರ ಮಹಾಘಟಬಂಧನದೊಂದಿಗೆ ಬಿಎಸ್ ಪಿ ಗುರುತಿಸಿಕೊಂಡಿಲ್ಲ ಎಂಬುದನ್ನು ಸೂಚಿಸುತ್ತಿಲ್ಲ. ಮಧ್ಯಪ್ರದೇಶದಲ್ಲಿ 22 ಅಭ್ಯರ್ಥಿಗಳನ್ನು ಏಕಪಕ್ಷೀಯವಾಗಿ ಘೋಷಿಸುವ ಮೂಲಕ ತಾವು ಮಹಾಘಟಬಂಧನದೊಂದಿಗೆ ಇಲ್ಲ ಎಂಬುದನ್ನು ಮಾಯಾವತಿ ಖಾತ್ರಿ ಪಡಿಸುತ್ತಿದ್ದಾರೆ ಎಂಬುದು ರಾಜಕೀಯ ಪಂಡಿತರ ವಿಶ್ಲೇಷಣೆ.
ಚತ್ತೀಸ್ ಗಢದ ಮಟ್ಟಿಗೆ ಮಾಯಾವತಿ ಅವರ ನಡೆಯಿಂದ, ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಬಿಜೆಪಿಗೇ ಹೆಚ್ಚು ಅನುಕೂಲವಾಗಲಿದೆ ಎಂಬ ಮಾತು ಕೇಳಿಬರುತ್ತಿದೆ. ಬಿಜೆಪಿ ಆಣತಿ ಮೆರೆಗೆ ಮಾಯಾವತಿ ಅಜಿತ್ ಜೋಗಿ ಅವರೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಬೊಬ್ಬೆ ಹಾಕುತ್ತಿರೋದನ್ನು ಗಮನಿಸಿದರೆ ಲೋಕಸಭಾ ಚುನಾವಣೆಗೆ ಮಹಾಘಟಬಂಧನದಿಂದ ಪ್ರಮುಖ ವಿಪಕ್ಷವೊಂದು ದೂರ ಉಳಿದಂತಾಗಿರುವುದಂತೂ ಸ್ಪಷ್ಟ.
ತಾತ್ಕಾಲಿಕ ಹಾಗೂ ದೂರಗಾಮಿ ಲೆಕ್ಕಾಚಾರಗಳಿಂದಲೇ ಮಾಯಾವತಿ ಅವರ ಈ ನಡೆ ಇಟ್ಟಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಮಾಯವಾತಿ ನಡೆಗೆ ಕಾರಣ ಏನೆಂಬುದನ್ನು ವಿಶ್ಲೇಷಿಸಿದರೆ ಸಿಗುವ ಉತ್ತರ "ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪ್ರಾಬಲ್ಯ ಮೆರೆಯದಂತೆ ನೋಡಿಕೊಳ್ಳುವುದಾಗಿದೆ". ಮಧ್ಯಪ್ರದೇಶ, ಚತ್ತೀಸ್ ಗಢ, ರಾಜಸ್ಥಾನಗಳಲ್ಲಿ ತಮ್ಮದೇ ಆದ ಲೆಕ್ಕಾಚಾರದಿಂದ ಚುನಾವಣೇಗಳನ್ನು ಎದುರಿಸಿದ್ದೇ ಆದಲ್ಲಿ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು ಎಂಬುದು ಮಾಯಾವತಿಯ ಪ್ಲ್ಯಾನ್. ಉತ್ತರ ಪ್ರದೇಶ ಮಹಾಘಟಬಂಧನದ ಯಶಸ್ಸಿಗೆ ಬಿಎಸ್ ಪಿ, ಎಸ್ ಪಿ ಅನಿವಾರ್ಯ. ಅಂದರೆ ಕಾಂಗ್ರೆಸ್ ನ ಪಾತ್ರ ಗೌಣ. ಒಂದು ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ತನ್ನ ನೆಲೆಯನ್ನು ಭದ್ರಪಡಿಸಿಕೊಂಡರೆ ತನ್ನ ಸಂಸದರ ಸಂಖ್ಯೆಗೆ ಹೊಡೆತ ಬೀಳುತ್ತದೆ. ಅಷ್ಟೇ ಅಲ್ಲದೇ ಅತಂತ್ರ ಪರಿಸ್ಥಿತಿ ನಿರ್ಮಾಣವಾದರೆ ತಮ್ಮ ಪ್ರಧಾನಿ ಆಕಾಂಕ್ಷೆಗೂ ಹೊಡೆತ ಬೀಳುತ್ತದೆ, ಆದ್ದರಿಂದ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ನ್ನು ನಿಯಂತ್ರಿಸಲು ಬೇರೆ ರಾಜ್ಯಗಳಲ್ಲಿ ತಮ್ಮದೇ ಆದ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಮಾಯಾವತಿ ನಡೆಗೆ ಕಾರಣವಾಗಿರುವ ಅಂಶವೆಂದರೆ, ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆಯುವ ಉದ್ದೇಶ. ಹೇಗೆ ಅಂತೀರಾ? ಮಧ್ಯಪ್ರದೇಶ, ಚತ್ತೀಸ್ ಗಢ, ರಾಜಸ್ಥಾನಗಳಲ್ಲಿ ತಮ್ಮದೇ ಲೆಕ್ಕಾಚಾರದಿಂದ ಚುನಾವಣೆ ಎದುರಿಸಿದರೆ ಕಾಂಗ್ರೆಸ್ ನ ನಿಯಂತ್ರಣದಿಂದ ತಪ್ಪಿಸಿಕೊಳ್ಳುವುದರ ಜೊತೆಗೆ ತಮ್ಮ ಅಸ್ಥಿತ್ವವನ್ನು ಬೇರೆ ರಾಜ್ಯಗಳಿಗೂ ವಿಸ್ತರಿಸಿದಂತಾಗುತ್ತದೆ. ಅಷ್ಟೇ ಅಲ್ಲದೇ ತಮ್ಮ ಪಕ್ಷ ರಾಷ್ಟ್ರೀಯ ಪಕ್ಷವೆಂಬ ಮನ್ನಣೆನ್ನು ಉಳಿಸಿಕೊಂಡಂತಾಗುತ್ತದೆ ಎಂಬುದು ದೀರ್ಘಾವಧಿಯ ಯೋಜನೆ. ಮಾಯಾವತಿ ಅವರಿಗೆ ಅಧಿಕಾರಕ್ಕಾಗಿ ಚೌಕಾಶಿ ಮಾಡುವುದು ಸಾಧ್ಯವಾದಷ್ಟೂ ಹೆಚ್ಚು ದಲಿತ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದರ ಮೇಲೆ ಅವಲಂಬಿತವಾಗಿದೆ. ಆದ್ದರಿಂದಲೇ ಅಧಿಕಾರಕ್ಕಾಗಿ ಚೌಕಾಶಿ ಮಾಡಬಹುದಾದ ಪಕ್ಷಗಳಾದ, ತಮಗೆ ಸಿಗಬಹುದಾಗಿರುವುದಕ್ಕಿಂತ ಹೆಚ್ಚು ನೀಡಬಲ್ಲ ಜೆಸಿಸಿ ಹಾಗೂ ಜೆಡಿಎಸ್ ನೊಂದಿಗೆ ಮಾಯಾವತಿ ಮೈತ್ರಿಗೆ ಮುಂದಾಗಿದ್ದಾರೆ.
ಮೂರನೆಯಾದ್ದಾಗಿ ಮಾಯವಾತಿ ತಮ್ಮ ಪಕ್ಷದ ಅಸ್ಥಿತ್ವವನ್ನು ವಿಸ್ತರಿಸದೇ ಇದ್ದಲ್ಲಿ, ದಲಿತ ಮತಗಳು ಕಾಂಗ್ರೆಸ್ ಅಥವಾ ಬಿಜೆಪಿಗೆ ವರ್ಗಾವಣೆಯಾಗುವ ಸಾಧ್ಯತೆ ಇದೆ. ಇದನ್ನು ತಪ್ಪಿಸಬೇಕೆಂದರೆ ತಮ್ಮ ಅಸ್ಥಿತ್ವವನ್ನು ವಿಸ್ತರಿಸಿಕೊಳ್ಳುವ ಅನಿವಾರ್ಯತೆ ಅಂದರೆ ಪ್ಯಾನ್ ಇಂಡಿಯಾ ಅಪ್ರೋಚ್ ಮಾಯಾವತಿಗೆ ಅನಿವಾರ್ಯವಾಗಿ ಮಾರ್ಪಾಡಾಗಿದೆ. ಈ ಹಿನ್ನೆಲೆಯಲ್ಲಿ ಮಾಯಾವತಿ ಮಧ್ಯಪ್ರದೇಶ, ಚತ್ತೀಸ್ ಗಢ, ರಾಜಸ್ಥಾನಗಳಲ್ಲಿ ಕಾಂಗ್ರೆಸ್ ಜೊತೆಗೆ ಮೈತ್ರಿಗೆ ಮುಂದಾಗದೇ ತಮ್ಮ ದಲಿತ, ಬುಡಕಟ್ಟು ಓಟ್ ಬ್ಯಾಂಕ್ ನ್ನು ಭದ್ರಪಡಿಸಿಕೊಳ್ಳುವುದಕ್ಕಾಗಿ ಸ್ಥಳೀಯ ಪಕ್ಷಗಳೊಂದಿಗೆ ಮೈತ್ರಿಗೆ ಮುಂದಾಗುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


