ಕ್ಯಾಬಿನ್ ಒತ್ತಡ ನಿರ್ವಹಿಸುವುದು ಮರೆತ ಜೆಟ್ ಏರ್ ವೇಸ್ ಸಿಬ್ಬಂದಿ: 30 ಪ್ರಯಾಣಿಕರ ಕಿವಿ, ಮೂಗಿನಲ್ಲಿ ರಕ್ತಸ್ರಾವ
ಜೆಟ್ ಏರ್‌ವೇಸ್ ವಿಮಾನ ಸಿಬ್ಬಂದಿಯ ಅಚಾತುರ್ಯದಿಂದಾಗಿ ಅದರಲ್ಲಿ ಪ್ರಯಾಣಿಸುತ್ತಿದ್ದವರ ಕಿವಿ, ಮೂಗಿನಲ್ಲಿ ರಕ್ತ ಬಂದ ಘಟನೆ ಗುರುವಾರ ನಡೆದಿದೆ. ಜೈಪುರಕ್ಕೆ ಹಾರಾಟ ನಡೆಸಿದ್ದ ಜೆಟ್ ಏರ್ ವೇಸ್ ವಿಮಾನದಲ್ಲಿ ...

ನವದೆಹಲಿ: ಜೆಟ್ ಏರ್‌ವೇಸ್ ವಿಮಾನ ಸಿಬ್ಬಂದಿಯ ಅಚಾತುರ್ಯದಿಂದಾಗಿ ಅದರಲ್ಲಿ ಪ್ರಯಾಣಿಸುತ್ತಿದ್ದವರ ಕಿವಿ, ಮೂಗಿನಲ್ಲಿ ರಕ್ತ ಬಂದ ಘಟನೆ ಗುರುವಾರ ನಡೆದಿದೆ.
ಜೈಪುರಕ್ಕೆ ಹಾರಾಟ ನಡೆಸಿದ್ದ ಜೆಟ್ ಏರ್ ವೇಸ್ ವಿಮಾನದಲ್ಲಿ ಆದ ದುರ್ಘಟನೆಗೆ ತುರ್ತು ಸ್ಪಂದಿಸಿರುವ ನಾಗರಿಕ ವಿಮಾನಯಾನ ಸಚಿವಾಲಯ, ಪ್ರಕರಣಕ್ಕೆ ಸಂಬಂಧಪಟ್ಟಂತೆ ವರದಿಯನ್ನು ತಕ್ಷಣವೇ ಸಲ್ಲಿಸುವಂತೆ ನಾಗರಿಕ ವಿಮಾನಯಾನ ಮಹಾ ನಿರ್ದೇಶಕರಿಗೆ ಮನವಿ ಮಾಡಿದೆ.
ವಿಮಾನದಲ್ಲಿದ್ದ ಸಿಬ್ಬಂದಿಗೆ ಮತ್ತೆ ಕರ್ತವ್ಯ ವಹಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ಘಟನೆಯೇನು?:ಇಂದು ಬೆಳಗ್ಗೆ ಮುಂಬೈಯಿಂದ ಜೈಪುರಕ್ಕೆ ಜೆಟ್ ಏರ್ ವೇಸ್ ವಿಮಾನ ಹಾರಾಟ ಆರಂಭಿಸಿತ್ತು. ಹಲವು ಪ್ರಯಾಣಿಕರು ಅದರಲ್ಲಿದ್ದರು. ವಿಮಾನದ ಸಿಬ್ಬಂದಿ ಹಾರಾಟದ ಆರಂಭದಲ್ಲಿ ಕ್ಯಾಬಿನ್ ಒತ್ತಡ ಸಮಸ್ಯೆಯನ್ನು ನಿಯಂತ್ರಿಸದೆ ಇದ್ದ ಕಾರಣ 30ಕ್ಕೂ ಹೆಚ್ಚು ಪ್ರಯಾಣಿಕರಿಗೆ ಒತ್ತಡವನ್ನು ತಡೆಯಲಾಗದೆ ತಲೆನೋವು ಕಾಣಿಸಿಕೊಂಡಿತು, ಮೂಗು ಮತ್ತು ಕಿವಿಯಲ್ಲಿ ರಕ್ತಸ್ರಾವವಾಗಲು ಆರಂಭವಾಯಿತು.
ವಿಮಾನ ಮೇಲೆ ಹಾರುತ್ತಿದ್ದಾಗ ಸಿಬ್ಬಂದಿ ಬ್ಲೀಡ್ ಸ್ವಿಚ್ ಆಯ್ಕೆ ಮಾಡಲು ಮರೆತಿದ್ದರಿಂದ ಕ್ಯಾಬಿನ್ ನ ಒತ್ತಡವನ್ನು ನಿರ್ವಹಿಸಲು ಸಾಧ್ಯವಾಗಿರಲಿಲ್ಲ. ಇದರಿಂದ ಪ್ರಯಾಣಿಕರಿಗೆ ಆಕ್ಸಿಜನ್ ಮುಖವಾಡ ನೀಡಲಾಯಿತು ಎಂದು ವಿಮಾನಯಾನ ನಿಯಂತ್ರಣ ಪ್ರಾಧಿಕಾರದ ಅಧಿಕಾರಿಗಳು ಘಟನೆ ಬಗ್ಗೆ ವಿವರಿಸಿದ್ದಾರೆ.
9 ಡಬ್ಲ್ಯು 697 ವಿಮಾನದಲ್ಲಿ ಈ ಘಟನೆ ನಡೆದಿದ್ದು, ಒಟ್ಟು 166 ಮಂದಿ ಪ್ರಯಾಣಿಕರು ಮತ್ತು 5 ಸಿಬ್ಬಂದಿಯಿದ್ದರು. ಪ್ರಯಾಣಿಕರು ಅಸ್ವಸ್ಥರಾಗುತ್ತಿದ್ದಂತೆ 45 ನಿಮಿಷದ ಹಾರಾಟದ ಬಳಿಕ ಮುಂಬಯಿ ವಿಮಾನ ನಿಲ್ದಾಣದಲ್ಲಿ ವಾಪಾಸ್ ಇಳಿಸಲಾಗಿದ್ದು, ಸದ್ಯ ಅಸ್ವಸ್ಥಗೊಂಡಿರುವ ಪ್ರಯಾಣಿಕರಿಗೆ ವೈದ್ಯರು ಚಿಕಿತ್ಸೆ ನೀಡಿದ್ದಾರೆ.
ವಿಮಾನದೊಳಗೆ ಒತ್ತಡ ನಿಯಂತ್ರಿಸುವ ಸ್ವಿಚ್ ಹಾಕಲು ಸಿಬ್ಬಂದಿ ಮರೆತ ಕಾರಣ ಈ ಘಟನೆ ನಡೆದಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಇದು ಸಿಬ್ಬಂದಿಯ ನಿರ್ಲಕ್ಷ್ಯತನದಿಂದ ಹೀಗೆ ಆಗಿದೆ ಎಂದು ಹೇಳಲಾಗುತ್ತಿದೆ.
ಈ ಘಟನೆ ಕುರಿತು ಎಎಐಬಿ ತನಿಖೆಗೆ ಆದೇಶಿಸಿದ್ದು, ಡಿಜಿಸಿಎಗೆ ದೂರನ್ನೂ ನೀಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


