ದೇಶ

ಸಿಬಿಐ ಆಯ್ತು, ಈಗ ಐಟಿ, ಇಡಿ ಅಧಿಕಾರ ಕತ್ತರಿಗೆ ಮುಂದಾದ ಆಂಧ್ರ ಸಿಎಂ ನಾಯ್ಡು?

ಸಿಬಿಐ ಅಧಿಕಾರ ವ್ಯಾಪ್ತಿಗೆ ಕತ್ತರಿ ಹಾಕಿ ನೇರವಾಗಿ ಕೇಂದ್ರ ಸರ್ಕಾರಕ್ಕೆ ಟಾಂಗ್ ನೀಡಿದ್ದ ಆಂಧ್ರ ಪ್ರದೇಶ ಸಿಎಂ ಎನ್ ಚಂದ್ರಬಾಬು ನಾಯ್ಡು ಅವರು ಈಗ ಆದಾಯ ತೆರಿಗೆ ಮತ್ತು ಜಾರಿ ನಿರ್ದೇಶನಾಲಯದ ಆಧಿಕಾರಕ್ಕೂ ಕತ್ತರಿ ಹಾಕಲು ಮುಂದಾಗಿದ್ದಾರೆ ಎನ್ನಲಾಗಿದೆ.

ಸಿಬಿಐ ಆಯ್ತು, ಈಗ ಐಟಿ, ಇಡಿ ಅಧಿಕಾರ ಕತ್ತರಿಗೆ ಮುಂದಾದ ಆಂಧ್ರ ಸಿಎಂ ನಾಯ್ಡು?
ಸಂಗ್ರಹ ಚಿತ್ರ
Published On :
ಅಮರಾವತಿ: ಸಿಬಿಐ ಅಧಿಕಾರ ವ್ಯಾಪ್ತಿಗೆ ಕತ್ತರಿ ಹಾಕಿ ನೇರವಾಗಿ ಕೇಂದ್ರ ಸರ್ಕಾರಕ್ಕೆ ಟಾಂಗ್ ನೀಡಿದ್ದ ಆಂಧ್ರ ಪ್ರದೇಶ ಸಿಎಂ ಎನ್ ಚಂದ್ರಬಾಬು ನಾಯ್ಡು ಅವರು ಈಗ ಆದಾಯ ತೆರಿಗೆ ಮತ್ತು ಜಾರಿ ನಿರ್ದೇಶನಾಲಯದ ಆಧಿಕಾರಕ್ಕೂ ಕತ್ತರಿ ಹಾಕಲು ಮುಂದಾಗಿದ್ದಾರೆ ಎನ್ನಲಾಗಿದೆ.
ರಾಜ್ಯದಲ್ಲಿ ತನಿಖೆ ನಡೆಸಲು ಸಿಬಿಐಗೆ ನೀಡಿದ್ದ ಒಪ್ಪಿಗೆಯ ಅನುಮತಿಯನ್ನು ಹಿಂಪಡೆದು , ಈ ಮೂಲಕ ಕೇಂದ್ರ ಸರ್ಕಾರ ಆಂಧ್ರ ಪ್ರದೇಶದಲ್ಲಿ ನಡೆಸುತ್ತಿದ್ದ ತನಿಖೆಗಳಿಗೆ ಬ್ರೇಕ್ ಹಾಕಿದ್ದ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಈಗ ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯದಂತಹ ಕೇಂದ್ರೀಯ ಸಂಸ್ಥೆಗಳ ಅಧಿಕಾರವನ್ನು ಮೊಟಕುಗೊಳಿಸುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. 
ಈ ಬಗ್ಗೆ ತೆಲುಗು ದೇಶಂ ಪಕ್ಷದ ಸಂಸದರೊಬ್ಬರು ಮಾಹಿತಿ ನೀಡಿದ್ದು, 'ಬಿಜೆಪಿಯ ಎಲ್ಲಾ ವಿರೋಧಿ ಪಕ್ಷಗಳೊಂದಿಗೆ ದೆಹಲಿಯಲ್ಲಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮ (ಸಿಎಂಪಿ) ವನ್ನು ಸಿದ್ಧಗೊಳಿಸುತ್ತೇವೆ. ಸಿಎಂಪಿ ಸಿದ್ಧವಾದಾಗ ಎಲ್ಲ ವಿರೋಧ ಪಕ್ಷಗಳು ಸೇರಿ ಕೇಂದ್ರೀಯ ಏಜೆನ್ಸಿಗಳಿಗೆ ತಮ್ಮ ತಮ್ಮ ರಾಜ್ಯದಲ್ಲಿ ನಡೆಸುತ್ತಿರುವ ತನಿಖೆಯನ್ನು ನಿಲ್ಲಿಸುವಂತೆ ಕೇಂದ್ರೀಯ ಏಜೆನ್ಸಿಗಳಿಗೆ ಸೂಚನೆ ನೀಡಲಿವೆ. ಈ ಮೂಲಕ ಕೇಂದ್ರದ ರಾಜಕೀಯ ಅಜೆಂಡಾವನ್ನು ಹತ್ತಿಕ್ಕುವುದು ನಮ್ಮ ಉದ್ದೇಶ. ಬಳಿಕ ಎಲ್ಲ ಪಕ್ಷಗಳು ( ಬಿಜೆಪಿ ವಿರೋಧಿ) ಮತ್ತೊಂದು ಸಮಾಲೋಚನಾ ಸಭೆ ನಡೆಸಲಿವೆ. ಅಗತ್ಯವಿದ್ದರೆ ಮತ್ತು ಒಮ್ಮತವಾದರೆ, ಆದಾಯ ತೆರಿಗೆ ಮತ್ತು ಇಡಿ ಅಧಿಕಾರಿಗಳನ್ನು ಮೊಟಕುಗೊಳಿಸುವಂತೆ ಸರ್ವೋಚ್ಚ ನ್ಯಾಯಾಲಯಕ್ಕೆ ಈ ಬಗ್ಗೆ ಮನವಿ ಮಾಡಿಕೊಳ್ಳುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.
ತೆಲುಗು ದೇಶಂ ಪಕ್ಷದ ಸಂಸದರಾದ ಸಿಎಂ ರಮೇಶ್, ಶಾಸಕ ಪೊಥುಲಾ ರಾಮರಾವ್ , ಮಾಜಿ ಶಾಸಕ ಬೀಡಾ ಮಸ್ತಾನ್ ರಾವ್ ಸೇರಿದಂತೆ ಟಿಡಿಪಿ ಮುಖಂಡರ ವಾಣಿಜ್ಯ ಕಚೇರಿಗಳ ಮೇಲೆ ದಾಳಿ ನಡೆಸಲು ಆದಾಯ ತೆರಿಗೆ ಇಲಾಖೆ ಹುಡುಕಾಟ ಪ್ರಾರಂಭಿಸಿದೆ. ಇದೆಲ್ಲ ನಡೆಯುತ್ತಿರುವುದು ನಾವು ಎನ್‌ಡಿಎ ಕೂಟದಿಂದ ಹೊರಬಿದ್ದ ಮೇಲೆ. ಕೇಂದ್ರ ಸರ್ಕಾರ ನಮ್ಮ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂತೆಯೇ ಇಂದು ಟಿಡಿಪಿ ಪಕ್ಷ ಆಂತರಿಕ ಸಭೆ ನಡೆಯಲಿದ್ದು,ಸಭೆಯಲ್ಲಿ ಈ ಬಗ್ಗೆ ಸೂಕ್ತ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಪಕ್ಷದ ಸಭೆಯಲ್ಲಿ ಅನುಮೋದನೆ ಸಿಕ್ಕಿದ್ದೇ ಆದರೆ ಆಂಧ್ರ ಪ್ರದೇಶ ಸರ್ಕಾರ ಈ ಬಗ್ಗೆ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆ ಮಾಡಲಿದೆ ಎನ್ನಲಾಗುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.