ಪಂದ್ಯ ಮುಗಿಸಿ ಮನೆಗೆ ಮರಳುವಾಗ ಭೀಕರ ಅಪಘಾತ, 4 ಕ್ರಿಕೆಟಿಗರ ದಾರುಣ ಸಾವು!
ಲಖನೌನಲ್ಲಿ ಕ್ರಿಕೆಟ್ ಪಂದ್ಯವೊಂದನ್ನು ಆಡಿದ ಬಳಿಕ ಆರು ಮಂದಿ ಕ್ರಿಕೆಟಿಗರು ಮಾರುತಿ ಎರ್ಟಿಗಾ ಕಾರಿನಲ್ಲಿ ದೇವರಿಯಾಗೆ ಹಿಂದಿರುಗುತ್ತಿದ್ದ ವೇಳೆ, ಅವರ ಕಾರು ಗುರುತು ಪತ್ತೆಯಾಗದ ಲಾರಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ..

ಲಖನೌ: ಉತ್ತರ ಪ್ರದೇಶದ ಸುಲ್ತಾನ್‌ಪುರ ಜಿಲ್ಲೆಯ ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇಯಲ್ಲಿ ಬುಧವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಯುವ ಕ್ರಿಕೆಟಿಗರು ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಸುಲ್ತಾನ್‌ಪುರದ ಧನಪತ್‌ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಸುಖಬದೇರ್ ಬಳಿ ಬೆಳಗ್ಗೆ ಸುಮಾರು 5.15ಕ್ಕೆ ಅಪಘಾತ ಸಂಭವಿಸಿದೆ.
ಲಖನೌನಲ್ಲಿ ಕ್ರಿಕೆಟ್ ಪಂದ್ಯವೊಂದನ್ನು ಆಡಿದ ಬಳಿಕ ಆರು ಮಂದಿ ಕ್ರಿಕೆಟಿಗರು ಮಾರುತಿ ಎರ್ಟಿಗಾ ಕಾರಿನಲ್ಲಿ ದೇವರಿಯಾಗೆ ಹಿಂದಿರುಗುತ್ತಿದ್ದ ವೇಳೆ, ಅವರ ಕಾರು ಗುರುತು ಪತ್ತೆಯಾಗದ ಲಾರಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ ಎಂದು ಮೂಲಗಳು ತಿಳಿಸಿವೆ.
ಅಪಘಾತದಲ್ಲಿ ನಿತ್ಯ ಪ್ರಜಾಪತಿ (22), ಇರ್ಫಾನ್ ಅನ್ಸಾರಿ (20), ಅನಿಕೇತ್ (24) ಹಾಗೂ ಆನಂದ್ ಯಾದವ್ (23) ಎಂಬುವವರು ಮೃತಪಟ್ಟಿದ್ದಾರೆ.
ಗಾಯಗೊಂಡಿರುವ ರಾಜು (22) ಮತ್ತು ಜಯಂತೋ ಶರ್ಮಾ (30) ಅವರನ್ನು ಕುಮಾರ್‌ಗಂಜ್ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ದರ್ಶನ ನಗರದ ಮೆಡಿಕಲ್ ಕಾಲೇಜಿಗೆ ಸ್ಥಳಾಂತರಿಸಲಾಗಿದೆ.
ಕ್ರಿಕೆಟ್ ಪಂದ್ಯ ಮುಗಿಸಿ ಮನೆಗೆ ವಾಪಸ್ ಆಗುತ್ತಿದ್ದ ವೇಳೆ ದುರಂತ
ಲಖನೌನಲ್ಲಿ ಕ್ರಿಕೆಟ್ ಪಂದ್ಯ ಮುಗಿಸಿಕೊಂಡು ತಂಡ ದೇವರಿಯಾಗೆ ವಾಪಸ್ ಆಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎಂದು ಸುಲ್ತಾನ್‌ಪುರ ಎಸ್‌ಪಿ ವಿನೀತ್ ಜೈಸ್ವಾಲ್ ತಿಳಿಸಿದ್ದಾರೆ.
ಪ್ರತಿಭಾವಂತ ಆಟಗಾರರನ್ನು ಕಳೆದುಕೊಂಡ ತಂಡ
ಇನ್ನು ತಂಡದ ನಾಯಕ ಮೋಹಿತ್ ಪಾಂಡೆ ಮಾತನಾಡಿ, ಮೃತಪಟ್ಟ ನಾಲ್ವರೂ ಪ್ರತಿಭಾವಂತ ಕ್ರಿಕೆಟಿಗರಾಗಿದ್ದು, ನಿಯಮಿತವಾಗಿ ಖಾಸಗಿ ಕ್ರಿಕೆಟ್ ಪಂದ್ಯಗಳಲ್ಲಿ ಆಡುತ್ತಿದ್ದರು ಎಂದು ಹೇಳಿದ್ದಾರೆ.
"ಅನಿಕೇತ್ ಉತ್ತಮ ಆಲ್‌ರೌಂಡರ್ ಆಗಿದ್ದ. ಆತ ಕಪಿಲ್ ದೇವ್ ಅವರಂತೆ ಎಲ್ಲ ವಿಭಾಗಗಳಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದ್ದ. ನಿತ್ಯ ಪ್ರಜಾಪತಿ ಮತ್ತು ಇರ್ಫಾನ್ ಉತ್ತಮ ಬ್ಯಾಟರ್‌ಗಳಾಗಿದ್ದರು. ಆನಂದ್ ಯಾದವ್ ವೇಗದ ಬೌಲರ್ ಆಗಿದ್ದ" ಎಂದು ಮೋಹಿತ್ ಪಾಂಡೆ ತಿಳಿಸಿದ್ದಾರೆ.
ನಿದ್ರೆಯಲ್ಲಿದ್ದ ಕ್ರಿಕೆಟಿಗರು
ಗಾಯಗೊಂಡಿರುವ ಆಟಗಾರ ಜಯಂತೋ ಶರ್ಮಾ ನೀಡಿರುವ ಮಾಹಿತಿ ಪ್ರಕಾರ, ಕಾರಿನಲ್ಲಿದ್ದ ಆರು ಮಂದಿಯೂ ಪ್ರಯಾಣದ ವೇಳೆ ನಿದ್ರಿಸುತ್ತಿದ್ದರು. ಲಾರಿಗೆ ಕಾರು ಹೇಗೆ ಡಿಕ್ಕಿ ಹೊಡೆದಿತು ಎಂಬುದು ಯಾರಿಗೂ ತಿಳಿದಿರಲಿಲ್ಲ ಎಂದು ಅವರು ಹೇಳಿದ್ದಾರೆ.
ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಯುಪಿಇಐಡಿಎ (UPEIDA) ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಕಾರಿನಿಂದ ಹೊರತೆಗೆದು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಅಪಘಾತಕ್ಕೆ ಕಾರಣವಾದ ಗುರುತು ಪತ್ತೆಯಾಗದ ಲಾರಿಗಾಗಿ ಶೋಧ ನಡೆಸಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



