ದೇಶ

ನಿಪಾಹ್ ವೈರಸ್ ಗೆ ಕೇರಳದಲ್ಲಿ ಮತ್ತೊಂದು ಬಲಿ, ಸಾವಿನ ಸಂಖ್ಯೆ 13ಕ್ಕೆ ಏರಿಕೆ!

ದೇವರನಾಡು ಕೇರಳದಲ್ಲಿ ಮಾರಣಾಂತಿಕ ನಿಪಾಹ್ ವೈರಾಣು ಸೋಂಕಿನ ಮರಣ ಮೃದಂಗ ಮುಂದುವರೆದಿದ್ದು, ಭಾನುವಾರ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದ ಮತ್ತೋರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ.

ನಿಪಾಹ್ ವೈರಸ್ ಗೆ ಕೇರಳದಲ್ಲಿ ಮತ್ತೊಂದು ಬಲಿ, ಸಾವಿನ ಸಂಖ್ಯೆ 13ಕ್ಕೆ ಏರಿಕೆ!
ಸಂಗ್ರಹ ಚಿತ್ರ
Published On :
ಕೊಯಿಕ್ಕೋಡ್: ದೇವರನಾಡು ಕೇರಳದಲ್ಲಿ ಮಾರಣಾಂತಿಕ ನಿಪಾಹ್ ವೈರಾಣು ಸೋಂಕಿನ ಮರಣ ಮೃದಂಗ ಮುಂದುವರೆದಿದ್ದು, ಭಾನುವಾರ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದ ಮತ್ತೋರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ.
ಕೇರಳದ ಕೊಯಿಕ್ಕೋಡ್ ನ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ನಿಪಾಹ್ ವೈರಾಣು ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದ 26 ವರ್ಷದ ಅಬಿನ್ ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಆ ಮೂಲಕ ನಿಪಾಹ್ ವೈರಾಣು ಸೊಂಕಿಗೆ ಬಲಿಯಾದವರ ಸಂಖ್ಯೆ 13ಕ್ಕೆ ಏರಿಕೆಯಾದಂತಾಗಿದೆ. 
ಇನ್ನು ಮೃತ ಅಬಿನ್, ಕೇರಳದ ಪಾಲಾಳಿ ಜಿಲ್ಲೆಯ ನಿವಾಸಿಯಾಗಿದ್ದು, ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಈತ ಚಿಕಿತ್ಸೆ ಪಡೆಯುತ್ತಿದ್ದ. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಆತ ಸಾವನ್ನಪ್ಪಿದ್ದಾನೆ. ನಿನ್ನೆಯಷ್ಟೇ ಸರ್ಕಾರಿ ಆಸ್ಪತ್ರೆಯಲ್ಲಿ ಕಲ್ಯಾಣಿ ಎಂಬ ಮಹಿಳೆ ಇದೇ ನಿಪಾಹ್ ವೈರಾಣು ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದ್ದರು. ಇನ್ನು ಇದಕ್ಕೂ ಮೊದಲು ಸೋಂಕು ಪೀಡಿತ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ನರ್ಸ್ ಲಿನಿ ಕೂಡ ಇದೇ ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದ್ದು ಆತಂಕಕ್ಕೆ ಕಾರಣವಾಗಿದ್ದು ಮಾತ್ರವಲ್ಲದೇ ದೇಶಾದ್ಯಂತ ವ್ಯಾಪಕ ಚರ್ಚೆಗೂ ಕಾರಣವಾಗಿತ್ತು.
ಅಂತೆಯೇ ಮೊದಲಿಗೆ ಸೋಂಕು ಕಾಣಿಸಿಕೊಂಡ ಕೊಯಿಕ್ಕೋಡ್ ನ ಪೆರಂಬರಾದಲ್ಲಿ ಇನ್ನೂ 16 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಸೋಂಕು ಪೀಡಿತರೆಲ್ಲರ ರಕ್ತದ ಮಾದರಿಯನ್ನು ಪರೀಕ್ಷೆ ಮಾಡಲಾಗಿದ್ದು, ಸೋಂಕು ಪೀಡಿತರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ನಿಗೂಢವಾಗಿ ಹಬ್ಬುತ್ತಿರುವ ಈ ಮಾರಣಾಂತಿಕ ಸೋಂಕಿನ ಪ್ರಸರಣಕ್ಕೆ ಕಾರಣವಾದ ಅಂಶ ಯಾವುದು ಎಂದು ಈ ವರೆಗೂ ಪತ್ತೆಯಾಗಿಲ್ಲ. ಈ ಹಿಂದೆ ಬಾವಲಿ ಮತ್ತು ಪ್ರಾಣಿಗಳ ಮೂಲಕ ಸೋಂಕು ಹರಡುತ್ತಿದೆ ಎಂದು ಶಂಕಿಸಲಾಗಿತ್ತಾದರೂ ಅಧ್ಯಯನಗಳು ಮತ್ತು ಸಂಶೋಧನೆಗಳೂ ಈ ವಿಚಾರವನ್ನು ಅಲ್ಲಗಳೆದಿದ್ದವು. ಈ ಬಗ್ಗೆ ಇನ್ನೂ ಸಂಶೋಧನೆಗಳು ಮುಂದುವರೆದಿದ್ದು, ಸೋಂಕು ಪ್ರಸರಣಕ್ಕೆ ಕಾರಣವಾದ ಅಂಶಕ್ಕಾಗಿ ಕೇರಳ ಆರೋಗ್ಯ ಇಲಾಖೆ ಹರಸಾಹಸ ಪಡುತ್ತಿದೆ.
ಅಲ್ಲದೆ ಕೇಂದ್ರ ಸರ್ಕಾರದ ನೆರವು ಕೂಡ ಕೋರಲಾಗಿದ್ದು, ಈಗಾಗಲೇ ಕೇಂದ್ರ ನುರಿತ ತಜ್ಞರ ತಂಡ ಕೇರಳದಲ್ಲಿ ಬೀಡು ಬಿಟ್ಟಿವೆ. ಇನ್ನು ನಿಪಾಹ್ ವೈರಾಣು ತಡೆಗಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಆಸ್ಟ್ರೇಲಿಯಾ ನೆರವು ಕೂಡ ಕೋರಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.