ವಾರಣಾಸಿಯಲ್ಲಿ ಫ್ಲೈಓವರ್ ಕುಸಿತ : ತನಿಖೆಗಾಗಿ ಮೂವರು ಸದಸ್ಯರ ತಂಡವನ್ನು ರಚಿಸಿದ ಯೋಗಿ ಆದಿತ್ಯನಾಥ್
ಪ್ರಧಾನಿ ನರೇಂದ್ರಮೋದಿ ಅವರ ಸ್ವಕ್ಷೇತ್ರವಾಗಿರುವ ವಾರಣಾಸಿಯ ರೈಲ್ವೆ ನಿಲ್ದಾಣದ ಬಳಿ ಮೇಲ್ಸುತುವೆ ಕುಸಿದು 18 ಮಂದಿ ಸಾವನ್ನಪ್ಪಿದ್ದು, 50 ಕ್ಕೂ ಹೆಚ್ಚು ಅವಶೇಷಗಳಡಿಯಲ್ಲಿ ಸಿಲುಕಿದ್ದಾರೆ ಎಂದು ಅಧಿಕಾರಿಗಳು...

ಉತ್ತರ ಪ್ರದೇಶ :ಪ್ರಧಾನಿ ನರೇಂದ್ರಮೋದಿ ಅವರ ಸ್ವಕ್ಷೇತ್ರವಾಗಿರುವ ವಾರಣಾಸಿಯ ರೈಲ್ವೆ ನಿಲ್ದಾಣದ ಬಳಿ ಮೇಲ್ಸುತುವೆ ಕುಸಿದು 18 ಮಂದಿ ಸಾವನ್ನಪ್ಪಿದ್ದು, 50 ಕ್ಕೂ ಹೆಚ್ಚು ಅವಶೇಷಗಳಡಿಯಲ್ಲಿ ಸಿಲುಕಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೇಲ್ಸುತುವೆ ಕುಸಿತ ಉಂಟಾಗಿದ್ದ ಪ್ರದೇಶದಿಂದ 18 ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಉತ್ತರ ಪ್ರದೇಶ ಪರಿಹಾರ ಆಯುಕ್ತ ಸಂಜಯ್ ಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಅನೇಕ ಮಂದಿ ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿದ್ದು, ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಅವಶೇಷಗಳ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಬಸ್ ಸೇರಿದಂತೆ ಕೆಲ ವಾಹನಗಳು ನಜ್ಜು ಗುಜ್ಜಾಗಿವೆ. ಮೂವರನ್ನು ರಕ್ಷಿಸಲಾಗಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಅಧಿಕಾರಿಗಳು ಹೇಳಿದ್ದಾರೆ.
2261 ಮೀಟರ್ ಉದ್ದದ ಮೇಲ್ಸುತುವೆ ಇದಾಗಿದ್ದು, ಸುಮಾರು 129 ಕೋಟಿ ವೆಚ್ಚದಲ್ಲಿ ಉತ್ತರ ಪ್ರದೇಶ ಮೇಲ್ಸುತುವೆ ಕಾಮಗಾರಿ ನಿಗಮದಿಂದ ಸೇತುವೆ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿತ್ತು, ಮೇಲ್ಸುತುವೆ ದುರಂತದಲ್ಲಿ ಮೃತಪಟ್ಟ ಕುಟುಂಬ ಸದಸ್ಯರಿಗೆ ಪ್ರಧಾನಿ ನರೇಂದ್ರಮೋದಿ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತೀವ್ರ ಸಂತಾಪ ಸೂಚಿಸಿದ್ದಾರೆ.
ಈ ಮಧ್ಯೆ ದೇಶದಲ್ಲಿಯೇ ಅತಿ ಹೆಚ್ಚಿನ ಪ್ರಾಧಾನ್ಯತೆ ಹೊಂದಿರುವ ಪ್ರಧಾನಿ ಅವರ ಸ್ವಕ್ಷೇತ್ರದಲ್ಲಿಯೇ ಇಂತಹ ದುರಂತ ನಡೆದಿರುವುದಕ್ಕೆ ಪ್ರತಿಪಕ್ಷಗಳು ರಾಜ್ಯಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿವೆ.
ಈ ದುರಂತ ಕುರಿತ ತನಿಖೆಗಾಗಿ ಮೂವರು ಸದಸ್ಯರನ್ನೊಳಗೊಂಡ ತಂಡವನ್ನು ಯೋಗಿ ಆದಿತ್ಯನಾಥ್ ರಚಿಸಿದ್ದು, ಮೃತಪಟ್ಟ ಕುಟುಂಬಕ್ಕೆ 5 ಲಕ್ಷ ಹಾಗೂ ಗಂಭೀರವಾಗಿ ಗಾಯಗೊಂಡಿರುವವರಿಗೆ 2 ಲಕ್ಷ ಪರಿಹಾರ ಘೋಷಿಸಿದ್ದಾರೆ.

ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ನಿರ್ದೇಶನ ನೀಡಿದ್ದಾರೆ. ಅಧಿಕಾರಿಗಳು ಅಗತ್ಯ ನೆರೆವು ನೀಡುವಂತೆ ಹಾಗೂ ಗಾಯಾಳುಗಳು ಬೇಗನೆ ಚೇತರಿಸಿಕೊಳ್ಳಲಿ ಎಂದು ಪ್ರಧಾನಿ ನರೇಂದ್ರಮೋದಿ ಟ್ವೀಟ್ ಮಾಡಿದ್ದಾರೆ.
ಉತ್ತರ ಪ್ರದೇಶ ಸರ್ಕಾರ ಪರಿಸ್ಥಿತಿಯನ್ನು ಹತ್ತಿರದಲ್ಲಿದ್ದು ನಿರ್ವಹಿಸುತ್ತಿದೆ. ದುರಂತದಲ್ಲಿ ಸಿಲುಕಿ ಸಂಕಷ್ಟಕ್ಕೊಳಗಾದವರಿಗೆ ಸೂಕ್ತ ಪರಿಹಾರ ನೀಡುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗುವಂತೆಯೂ ಪ್ರಧಾನಿ ನರೇಂದ್ರಮೋದಿ ಟ್ವೀಟ್ ಸಂದೇಶದಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


