ಕರ್ನಾಟಕ ಕೂಡ ಬಿಜೆಪಿ ಪಾಲಾದರೇ...?; ಆತಂಕದಲ್ಲಿ ಟಿಡಿಪಿ!
ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶದ ಕುರಿತು ಕೇವಲ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಮಾತ್ರ ಕುತೂಹಲದಿಂದ ಕಾಯುತ್ತಿಲ್ಲ..ಬದಲಿಗೆ ನೆರೆಯ ಆಂಧ್ರ ಪ್ರದೇಶದ ಆಡಳಿತಾ ರೂಢ ಟಿಡಿಪಿ ಕೂಡ ಫಲಿತಾಂಶಕ್ಕಾಗಿ ಕುತೂಹಲದಿಂದ ಕಾಯುತ್ತಿದೆ.

Published On :
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶದ ಕುರಿತು ಕೇವಲ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಮಾತ್ರ ಕುತೂಹಲದಿಂದ ಕಾಯುತ್ತಿಲ್ಲ..ಬದಲಿಗೆ ನೆರೆಯ ಆಂಧ್ರ ಪ್ರದೇಶದ ಆಡಳಿತಾ ರೂಢ ಟಿಡಿಪಿ ಕೂಡ ಫಲಿತಾಂಶಕ್ಕಾಗಿ ಕುತೂಹಲದಿಂದ ಕಾಯುತ್ತಿದೆ.
ಕರ್ನಾಟಕ ಚುನಾವಣೆಗೂ ಆಂಧ್ರ ಪ್ರದೇಶದ ಪ್ರಾದೇಶಿಕ ಪಕ್ಷ ಟಿಡಿಪಿಗೂ ಏನು ಸಂಬಂಧ ಎಂದು ಕೇಳುತ್ತಿದ್ದೀರಾ.. ಸಂಬಂಧ ಇದೆ.. ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿ ಆ ರಾಜ್ಯದಲ್ಲಿ ನಡೆದ ವ್ಯಾಪಕ ಪ್ರತಿಭಟನೆಗಳಿಗೆ ಕೇಂದ್ರದ ಎನ್ ಡಿಎ ಸರ್ಕಾರ ಕ್ಯಾರೇ ಎನ್ನಲಿಲ್ಲ. ಇದೇ ಕಾರಣಕ್ಕೆ ಬಿಜೆಪಿ ಜೊತೆ ಮುನಿಸಿಕೊಂಡಿದ್ದ ಟಿಡಿಪಿ ಮೈತ್ರಿಯಿಂದ ಹೊರ ಬಂದಿತ್ತು. ಅಲ್ಲದೆ ಇದೀಗ ಆಂಧ್ರ ಪ್ರದೇಶದಲ್ಲಿ ಬಿಜೆಪಿ ವಿರುದ್ಧ ತೊಡೆ ತಟ್ಟಿ ನಿಂತಿದೆ.
ಒಂದು ವೇಳೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದೇ ಆದರೆ ಕೇಂದ್ರದಲ್ಲಿರುವ ಎನ್ ಡಿಎ ಸರ್ಕಾರಕ್ಕೆ ಮತ್ತಷ್ಟು ಬಲ ಬರಲಿದೆ. ಅಲ್ಲದೆ ತನ್ನ ವಿರುದ್ಧ ಬಿಜೆಪಿ ಮತ್ತಷ್ಟು ಆಕ್ರಮಣಕಾರಿಯಾಗುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಕರ್ನಾಟಕದಲ್ಲಿ ಬಿಜೆಪಿಗೆ ಸೋಲಾಗಲಿ ಎಂದು ಟಿಡಿಪಿ ಬಯಸುತ್ತಿದೆ. ಇತ್ತ ಚುನಾವಣೋತ್ತರ ಸಮೀಕ್ಷೆಗಳು ಅತಂತ್ರ ವಿಧಾನಸಭೆ ಕುರಿತು ವರದಿ ನೀಡಿದ್ದರೂ, ಟಿಡಿಪಿಗೆ ಮಾತ್ರ ಸಮಾಧಾನವಾಗಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಿಕ್ಕೆ ಬಂದರೆ ಆಂಧ್ರ ಪ್ರದೇಶದಲ್ಲಿ ಕೇಂದ್ರ ಸರ್ಕಾರ ತೊಂದರೆ ಮಾಡುವ ಸಾಧ್ಯತೆ ಕುರಿತು ಟಿಡಿಪಿ ಲೆಕ್ಕಾಚಾರ ಹಾಕಿದೆ. ಪ್ರಮುಖವಾಗಿ ವಿದ್ಯುತ್ ಹಂಚಿತೆ, ನದಿ ನೀರು ಹಂಚಿಕೆ, ವಾಣಿಜ್ಯ ವಹಿವಾಟು ಸೇರಿದಂತೆ ಹತ್ತಾರು ಕ್ಷೇತ್ರಗಳಲ್ಲಿ ಆಂಧ್ರ ಪ್ರದೇಶ ಮತ್ತು ಕರ್ನಾಟಕ ನಂಟು ಹೊಂದಿದೆ.
ಒಂದು ವೇಳೆ ಬಿಜೆಪಿ ಅಧಿಕಾರಕ್ಕೆ ಬಂದರೆ ಈ ಕ್ಷೇತ್ರಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಅಲ್ಲದೆ ತನ್ನ ಕೇಂದ್ರೀಯ ಸಂಸ್ಥೆಗಳನ್ನು ತನ್ನ ವಿರುದ್ಧ ಬಳಕೆ ಮಾಡಿಕೊಳ್ಳಲು ಕೂಡ ಕೇಂದ್ರ ಸರ್ಕಾರ ಮುಂದಾಗಬಹುದು. ಈಗಾಗಲೇ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಇದು ಸಾಬಿತಾಗಿದ್ದೂ, ಚುನಾವಣೆ ಸಂದರ್ಭದಲ್ಲೇ ಸಾಕಷ್ಚು ಕಾಂಗ್ರೆಸ್ ಮುಖಂಡರ ಮನೆಗಳ ಮೇಲೆ ಐಟಿ ದಾಳಿಗಳಾಗಿವೆ. ಅಲ್ಲದೆ ಪ್ರಸ್ತುತ ಕರ್ನಾಟಕ ಚುನಾವಣೆಯತ್ತ ಗಮನ ಹರಿಸಿರುವ ಕೇಂದ್ರ ಬಳಿಕ ಆಂಧ್ರ ಪ್ರದೇಶದತ್ತ ಖಂಡಿತಾ ಗಮನ ಹರಿಸಲಿದೆ. ಒಂದು ವೇಳೆ ಕರ್ನಾಟಕದಲ್ಲಿ ಬಿಜೆಪಿ ಸೋತರೆ ತನ್ನತ್ತ ಕೇಂದ್ರ ಸರ್ಕಾರ ಮೃದು ಧೋರಣೆ ತಳೆಯಬಹುದು ಎಂಬುದು ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಲೆಕ್ಕಾಚಾರವಾಗಿದೆ.
ಕರ್ನಾಟಕ ಚುನಾವಣೆ ಬಳಿಕ ರಾಜಸ್ಥಾನ ಮತ್ತು ಮಧ್ಯ ಪ್ರದೇಶಗಳಲ್ಲಿ ಚುನಾವಣೆ ನಡೆಯಲಿದ್ದು, ಮುಂದಿನ ವರ್ಷ ಆಂಧ್ರ ಪ್ರದೇಶ ವಿಧಾನಸಭೆಗೂ ಚುನಾವಣೆ ನಡೆಯಲಿದೆ.
ಈ ಬಗ್ಗೆ ಮಾತನಾಡಿರುವ ಆಂಧ್ರ ಪ್ರದೇಶದ ಹಿರಿಯ ಸಚಿವರೊಬ್ಬರು, ಕರ್ನಾಟಕ ಚುನಾವಣೆಯಲ್ಲಿ ಕೇಂದ್ರ ಸರ್ಕಾರ ತನ್ನ ಕೇಂದ್ರೀಯ ಸಂಸ್ಥೆಗಳನ್ನು ಬಳಕೆ ಮಾಡಿಕೊಂಡಿದೆ. ಅಲ್ಲದೆ ಸಾಕಷ್ಟು ಚುನಾವಣಾ ರಣತಂತ್ರವನ್ನೂ ಹೆಣೆದಿದೆ. ಕೇಂದ್ರೀಯ ತನಿಖಾ ಸಂಸ್ಥೆಗಳ ಮೂಲಕ ಕಾಂಗ್ರೆಸ್ ಮುಖಂಡರ ಮನೆ, ಕಚೇರಿಗಳ ಮೇಲೆ ದಾಳಿ ಮಾಡಿಸಿದೆ. ಕಳೆದ ಒಂದು ವರ್ಷದಿಂದ ಕರ್ನಾಟಕದಲ್ಲಿ ಬಿಜೆಪಿ ಇದೇ ತಂತ್ರಗಾರಿಕೆ ನಡೆಸಿದ್ದು, ಒಂದು ವೇಳೆ ಈ ತಂತ್ರಗಾರಿಕೆ ಫಲಿಸಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಇದೇ ಯೋಜನೆಯನ್ನು ಬಿಜೆಪಿ ಆಂಧ್ರ ಪ್ರದೇಶದ ಮೇಲೂ ಪ್ರಯೋಗಿಸಬಹುದು. ತನ್ನ ವಿರೋಧಿಗಳನ್ನು ಹಣಿಯಲು ಕೇಂದ್ರ ಸರ್ಕಾರ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳಬಹುದು ಎಂದು ಟಿಡಿಪಿ ಆತಂಕವಾಗಿದೆ.
ಇದೇ ಕಾರಣಕ್ಕೆ ಕರ್ನಾಟಕದಲ್ಲಿರುವ ತೆಲುಗು ಪ್ರಜೆಗಳಿಗೆ ಆಂಧ್ರ ಸಿಎಂ ಚಂದ್ರಬಾಬು ನಾಯ್ಡುಸೇರಿದಂತೆ ಹಲವು ನಾಯಕರು ಪ್ರಧಾನಿ ಮೋದಿ ವಿರುದ್ಧ ಅಂದರೆ ಬಿಜೆಪಿ ವಿರುದ್ಧ ಮತ ಚಲಾಯಿಸುವಂತೆ ಮನವಿ ಮಾಡಿದ್ದರು. ಆದರೆ ಈ ಮನವಿ ಮತ್ತು ಟಿಡಿಪಿ ಲೆಕ್ಕಾಚಾರಗಳು ಎಷ್ಟರ ಮಟ್ಟಿಗೆ ಫಲಿಸುತ್ತವೆ ಎಂಬುದನ್ನು ಕಾದುನೋಡಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


