ದೇಶ

ಬ್ಯಾಂಕ್ ವಂಚನೆ ಪ್ರಕರಣ: ವಿದೇಶದಲ್ಲಿರುವ ನೀರವ್ ಮೋದಿ ಆಸ್ತಿ ಜಪ್ತಿಗೂ ಮುಂದಾದ ಇಡಿ!

ಉದ್ಯಮಿ ನೀರವ್ ಮೋದಿ ಮತ್ತು ಆತನ ಕುಟುಂಬಕ್ಕೆ ಸಂಬಂಧಿಸಿದ ವಿದೇಶಿ ಆಸ್ತಿಗಳನ್ನೂ ಕೂಡ ಜಪ್ತಿ ಮಾಡಲು ಅನುಮತಿ ನೀಡಬೇಕು ಎಂದು ಜಾರಿ ನಿರ್ದೇಶನಾಲಯ ಕೋರ್ಟ್ ಗೆ ಮನವಿ ಸಲ್ಲಿಕೆ ಮಾಡಿದೆ.

ಬ್ಯಾಂಕ್ ವಂಚನೆ ಪ್ರಕರಣ: ವಿದೇಶದಲ್ಲಿರುವ ನೀರವ್ ಮೋದಿ ಆಸ್ತಿ ಜಪ್ತಿಗೂ ಮುಂದಾದ ಇಡಿ!
ಸಂಗ್ರಹ ಚಿತ್ರ
Published On :
ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಖ್ಯಾತ ವಜ್ರಾಭರಣ ವ್ಯಾಪಾರಿ, ಉದ್ಯಮಿ ನೀರವ್ ಮೋದಿ ಮತ್ತು ಆತನ ಕುಟುಂಬಕ್ಕೆ ಸಂಬಂಧಿಸಿದ ವಿದೇಶಿ ಆಸ್ತಿಗಳನ್ನೂ ಕೂಡ ಜಪ್ತಿ ಮಾಡಲು ಅನುಮತಿ ನೀಡಬೇಕು ಎಂದು ಜಾರಿ ನಿರ್ದೇಶನಾಲಯ ಕೋರ್ಟ್ ಗೆ ಮನವಿ ಸಲ್ಲಿಕೆ ಮಾಡಿದೆ.
ಈಗಾಗಲೇ ಭಾರತದಲ್ಲಿರುವ ನೀರವ್ ಮೋದಿ ಮತ್ತು ಆತನ ಕುಟುಂಬಸ್ಥರಿಗೆ ಸಂಬಂಧಿಸಿದ ಬಹುತೇಕ ಆಸ್ತಿ-ಪಾಸ್ತಿಗಳ ಮೇಲೆ ದಾಳಿ ಮಾಡಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇದೀಗ ನೀರವ್ ಮೋದಿಗೆ ಸಂಬಂಧಿಸಿದ ವಿದೇಶಿ ಆಸ್ತಿಗಳ ಮೇಲೆ ಕಣ್ಣು ಹಾಕಿದ್ದಾರೆ. ಅದರಂತೆ ನೀರವ್ ಮೋದಿ ಮತ್ತು ಆತನ ಕುಟುಂಬಸ್ಥರಿಗೆ ಸಂಬಂಧಿಸಿದ ವಿದೇಶಿ ಆಸ್ತಿ-ಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಅನುಮತಿ ನೀಡುವಂತೆ ಕೋರ್ಟ್ ಮೊರೆ ಹೋಗಿದ್ದಾರೆ. 
ಈ ಬಗ್ಗೆ ವಿಶೇಷ ನ್ಯಾಯಾಧೀಶರಾದ ಎಂಎಸ್ ಅಜ್ಮಿ ಅವರ ನ್ಯಾಯಪೀಠಕ್ಕೆ ಇಡಿ ಮನವಿ ಸಲ್ಲಿಕೆ ಮಾಡಿದ್ದು, ಈ ಮನವಿ ಕುರಿತು ವಿಚಾರಣೆಯನ್ನು ಕೈಗೆತ್ತಿಕೊಳ್ಳಲು ಏಕಸದಸ್ಯ ನ್ಯಾಯಪೀಠ ಸಮ್ಮತಿ ಕೂಡ ನೀಡಿದೆ. ಮೂಲಗಳ ಪ್ರಕಾರ ಉದ್ಯಮಿ ನೀರವ್ ಮೋದಿ, ಯುಎಸ್ಎ, ಯುಎಇ, ಯುಕೆ, ಸಿಂಗಪುರ, ಚೀನಾ, ಹಾಂಕಾಂಗ್ ಮತ್ತು ದಕ್ಷಿಣ ಆಫ್ರಿಕಾ ಸೇರಿದಂತೆ ಹಲವು ದೇಶಗಳಲ್ಲಿ ಉದ್ಯಮ ಮತ್ತು ಆಸ್ತಿ-ಪಾಸ್ತಿ ಹೊಂದಿದ್ದಾರೆ.  ಹೀಗಾಗಿ ಈ ಬಗ್ಗೆ ಹಾಂಕಾಂಗ್, ಚೀನಾ ಸೇರಿದಂತೆ ವಿವಿಧ ದೇಶಗಳ ನ್ಯಾಯಾಲಯಗಳಿಗೆ ಮನವಿ ನೀಡಲೂ ಕೂಡ ಜಾರಿ ನಿರ್ದೇಶನಾಲಯ ಮುಂದಾಗಿದೆ.
ಭಾರತದ ಪಿಎಂಎಲ್ಎ ಕಾಯ್ದೆ ಅಡಿಯಲ್ಲಿ ನೀರವ್ ಮೋದಿ ವಿರುದ್ಧ ಜಾರಿ ನಿರ್ದೇಶನಾಲಯ ದೂರು ದಾಖಲಿಸಿಕೊಂಡಿದ್ದು, ಇದಲ್ಲದೇ ಹಣ ದುರ್ಬಳಕೆ, ಹವಾಲ ಸೇರಿದಂತೆ ವಂಚನೆ ಪ್ರಕರಣಗಳೂ ಕೂಡ ನೀರವ್ ಮೋದಿ ವಿರುದ್ಧ ದಾಖಲಾಗಿದೆ.  ಇದಲ್ಲದೇ ಸಿಬಿಐ ಕೂಡ ದೂರು ದಾಖಲಿಸಿಕೊಂಡಿದ್ದು, ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣ ಸಂಬಂಧ 2 ಪ್ರತ್ಯೇಕ ಎಫ್ ಐಆರ್ ಗಳನ್ನು ದಾಖಲಿಸಿಕೊಂಡಿದೆ.  ನೀರವ್ ಮೋದಿ ಮಾತ್ರವಲ್ಲದೇ ಆತನ ಸಹೋದರ ಮಾವ ಮತ್ತೋರ್ವ ಉದ್ಯಮಿ ಮೆಹುಲ್ ಚೋಕ್ಸಿ ವಿರುದ್ಧವೂ ಹಲವು ಪ್ರಕರಣಗಳು ದಾಖಲಾಗಿವೆ.
ಕೆಲ ದಿನಗಳ ಹಿಂದಷ್ಟೇ ವಂಚನೆ ಪ್ರಕರಣ ಸಂಬಂಧ ವಿದೇಶದಿಂದಲೇ ಪ್ರತಿಕ್ರಿಯೆ ನೀಡಿದ್ದ ನೀರವ್ ಮೋದಿ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಪ್ರಕರಣವನ್ನು ಜಗಜ್ಜಾಹಿರು ಮಾಡಿದೆ. ಹೀಗಾಗಿ ತಾನು ತೆಗೆದುಕೊಂಡ ಹಣ ವಾಪಾಸ್ ಮಾಡವುದಿಲ್ಲ. ಬೇಕಿದ್ದರೆ ಭಾರತದಲ್ಲಿರುವ  ನನ್ನಆಸ್ತಿ ಜಪ್ತಿ ಮಾಡಿಕೊಳ್ಳಲಿ ಎಂಬರ್ಥದಲ್ಲಿ ಮಾತನಾಡಿದ್ದರು, ಇದೀಗ ಅಧಿಕಾರಿಗಳು ಆತನ ವಿದೇಶಿ ಆಸ್ತಿಗೂ ಕೊಕ್ಕೆ ಹಾಕಲು ಜಾರಿ ನಿರ್ದೇಶನಾಲಯ ಮುಂದಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.