ದೇಶ

ಮೇಘಾಲಯ: ಗಣಿಯಲ್ಲಿ ಸಿಲುಕಿದ 13 ಕಾರ್ಮಿಕರ ರಕ್ಷಣೆಗೆ ಹರಸಾಹಸ

ಮೇಘಾಲಯದ ಗಣಿಯೊಂದರಲ್ಲಿ ಸಂಭವಿಸಿದ ದಿಢೀರ್ ಪ್ರವಾಹದಿಂದಾಗಿ ಅಲ್ಲಿ ಕೆಲಸ ಮಾಡುತ್ತಿದ್ದ 13 ಮಂದಿ ಕಾರ್ಮಿಕರು ಅಪಾಯಕ್ಕೆ ಸಿಲುಕಿದ್ದು ಸಾವು-ಬದುಕಿನ ಹೋರಾಟ ನಡೆಸುತ್ತಿರುವ ಕಾರ್ಮಿಕರ ರಕ್ಷಣೆಗಾಗಿ ಕಾರ್ಯಾಚರಣೆ ಆರಂಭಿಸಲಾಗಿದೆ.

ಮೇಘಾಲಯ: ಗಣಿಯಲ್ಲಿ ಸಿಲುಕಿದ 13 ಕಾರ್ಮಿಕರ ರಕ್ಷಣೆಗೆ ಹರಸಾಹಸ
ಕಾರ್ಯಾಚರಣೆ ನಿರತ ಎನ್ ಡಿಆರ್ ಎಫ್ ಸಿಬ್ಬಂದಿ
Published On :
ಶಿಲ್ಲಾಂಗ್: ಮೇಘಾಲಯದ ಗಣಿಯೊಂದರಲ್ಲಿ ಸಂಭವಿಸಿದ ದಿಢೀರ್ ಪ್ರವಾಹದಿಂದಾಗಿ ಅಲ್ಲಿ ಕೆಲಸ ಮಾಡುತ್ತಿದ್ದ 13 ಮಂದಿ ಕಾರ್ಮಿಕರು ಅಪಾಯಕ್ಕೆ ಸಿಲುಕಿದ್ದು ಸಾವು-ಬದುಕಿನ ಹೋರಾಟ ನಡೆಸುತ್ತಿರುವ ಕಾರ್ಮಿಕರ ರಕ್ಷಣೆಗಾಗಿ ಕಾರ್ಯಾಚರಣೆ ಆರಂಭಿಸಲಾಗಿದೆ.
ಮೇಘಾಲಯದ ಪಶ್ಚಿಮ ಜೈನ್ತಿಯಾ ಜಿಲ್ಲೆಯಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆಯಲ್ಲಿ 13 ಮಂದಿ ಸಿಲುಕಿದ್ದು ಅವರನ್ನು ರಕ್ಷಿಸುವ ಕಾರ್ಯ ಗುರುವಾರದಿಂದ ಶನಿವಾರ ಮುಂಜಾನೆವರೆಗೂ ಮುಂದುವರೆದಿದೆ. ಪ್ರವಾಹದ ಕಾರಣ ಗಣಿಯಲ್ಲಿ ನೀರು ನುಗ್ಗಿದ್ದು 13 ಮಂದಿ ಕಾರ್ಮಿಕರು ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾರೆ.  ಗಣಿಯಿಂದ ನೀರನ್ನು ಹೊರಹಾಕುವಲ್ಲಿ ಸಾಧ್ಯವಾಗದ ಕಾರಣ ಇದುವರೆಗೆ ಯಾರನ್ನೂ ರಕ್ಷಿಸಲು ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುರುವಾರ ಮುಂಜಾನೆ ಅವಘಡದ ಸಂಗತಿ ತಿಳಿಯುತ್ತಿದ್ದಂತೆ ಗಣಿಯಿಂದ ನೀರನ್ನು ಪಂಪ್ ಮೂಲಕ ಹೊರಹಾಕಲು ಪ್ರಯತ್ನಿಸಲಾಯಿತು. 
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್ ಡಿಆರ್ ಎಫ್) 60 ಸಿಬ್ಬಂದಿ ಹಾಗೂ ರಾಜ್ಯ ವಿಪತ್ತು ಪರಿಹಾರ ಪಡೆಯ 12 ಮಂದಿ ರಕ್ಷಣಾ ಸಿಬ್ಬಂದಿಯಿಂದ ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ. ಈ ಕಲ್ಲಿದ್ದಲು ಗಣಿ ಸುಮಾರು 370 ಅಡಿ ಆಳ ಇದ್ದು ಪ್ರವಾಹದ ಕಾರಣ 70 ಅಡಿಯವರೆಗೂ ನೀರು ತುಂಬಿಕೊಂಡಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪಂಪ್ ಗಳನ್ನುಅಳವಡಿಸಿ ನೀರನ್ನು ಹೊರಹಾಕಲಾಗುತ್ತಿದೆ.  ಒಳಗೆ ಸಿಲುಕಿರುವ ಕಾರ್ಮಿಕರನ್ನು ಗುರುತಿಸಲು ಮುಳುಗು ತಜ್ಞರ ಸಹಾಯ ಪಡೆಯಲಾಗಿದೆ ಎಂದು ಪೊಲೀಸ್ ಡಿಐಜಿ (ಪೂರ್ವ ವಲಯ) ಎ ಆರ್ ಮಾವ್‍ತೋಹ್ ತಿಳಿಸಿದ್ದಾರೆ. 
ಉಕ್ಕಿದ ಲೈಟಿನ್ ನದಿಯಿಂದ ಪ್ರವಾಹ
ಇನ್ನು ಗಣಿಗಾರಿಕೆ ನಡೆಯುತ್ತಿದ್ದ ಸಮೀಪದ ಲೈಟಿನ್ ನದಿಯ ನೀರು ಗಣಿಗೆ ನುಗ್ಗಿದಾಗ ಐದು ಮಂದಿ ಮಾತ್ರ ಹೊರಬರಲು ಸಾಧ್ಯವಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ಅವೈಜ್ಞಾನಿಕ ರ‍್ಯಾಟ್ ಹೋಲ್ ಗಣಿಗಾರಿಕೆಯನ್ನು 2014ರಲ್ಲೇ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ನಿಷೇಧಿಸಿದೆ. ಆದರೂ ಈ ರೀತಿಯ ಗಣಿಗಾರಿಕೆ ಅಕ್ರಮವಾಗಿ ನಡೆಯುತ್ತಿದ್ದು ಇದೀಗ ದುರಂತ ಸಂಭವಿಸಿದೆ. ಈ ಅಕ್ರಮ ಗಣಿಗಾರಿಕೆಯ ಕಿಂಗ್ ಪಿನ್ ಜೇಮ್ಸ್ ಸುಕ್ಲೈನ್ ಪರಾರಿಯಾಗಿದ್ದು ಪೊಲೀಸರು ಈತನ ಪತ್ತೆಗೆ ಬಲೆ ಬೀಸಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.