ದೇಶ

ಬಂಗಾಳ ಸಿಎಂ ಪರ ಒಲವು: ಪುರುಷರಷ್ಟೇ ಪ್ರಧಾನಿ ಏಕೆ? ಮಮತಾ ಯಾಕಾಗಬಾರದು?- ದೇವೇಗೌಡ

ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದು, ಪ್ರತಿಪಕ್ಷಗಳ ಪಾಳೆಯ ಒಮ್ಮತದ ಪ್ರಧಾನಿ ಅಭ್ಯರ್ಥಿ ಕೊರತೆಯನ್ನು ಎದುರಿಸುತ್ತಿದ್ದು, ಈ ನಡುವಲ್ಲೇ ತೃಣಮೂಲ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ...

ಬಂಗಾಳ ಸಿಎಂ ಪರ ಒಲವು: ಪುರುಷರಷ್ಟೇ ಪ್ರಧಾನಿ ಏಕೆ? ಮಮತಾ ಯಾಕಾಗಬಾರದು?- ದೇವೇಗೌಡ
ಜೆಡಿಎಸ್ ರಾಷ್ಟ್ರಾಧ್ಯಕ್ಷ ದೇವೇಗೌಡ
Published On :
ನವದೆಹಲಿ: ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದು, ಪ್ರತಿಪಕ್ಷಗಳ ಪಾಳೆಯ ಒಮ್ಮತದ ಪ್ರಧಾನಿ ಅಭ್ಯರ್ಥಿ ಕೊರತೆಯನ್ನು ಎದುರಿಸುತ್ತಿದ್ದು, ಈ ನಡುವಲ್ಲೇ ತೃಣಮೂಲ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪರ ಜೆಡಿಎಸ್ ರಾಷ್ಟ್ರಾಧ್ಯಕ್ಷ ದೇವೇಗೌಡ ಅವರು ಮಾತನಾಡಿದ್ದಾರೆ. 
ಪಿಟಿಐ ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ದೇವೇಗೌಡ ಅವರು, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ಪ್ರಧಾನಮಂತ್ರಿ ಹುದ್ದೆಗೆ ಬಿಂಬಿಸಿದರೆ ಅದನ್ನು ಸ್ವಾಗತಿಸುತ್ತೇನೆಂದು ಹೇಳಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ ಬೇರೊಂದು ಪಕ್ಷದ ಮುಖೇನ ಮಮತಾ ಬ್ಯಾನರ್ಜಿಯವರ ಹೆಸರು ಪ್ರಧಾನಿ ರೇಸ್'ಗೆ ನಾಮ ನಾಮನಿರ್ದೇಶನವಾದಂತಾಗಿದೆ. 
ಕರ್ನಾಟಕದಲ್ಲಿ ಕಾಂಗ್ರೆಸ್ ಜೊತೆಗೂಡಿ ಸರ್ಕಾರ ನಡೆಸುತ್ತಿರುವ ಜೆಡಿಎಸ್ ಪಕ್ಷದ ಮುಖ್ಯಸ್ಥ ದೇವೇಗೌಡ ಅವರು ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ರಾಹುಲ್ ಬದಲಿಗೆ ಮಮತಾ ಪರ ಬ್ಯಾಟ್ ಬೀಸಿರುವುದು ಇದೀಗ ಕುತೂಹಲಕ್ಕೆ ಕಾರಣವಾಗಿದೆ. 
ಇಂದಿರಾ ಗಾಂಧಿಯವರು 17 ವರ್ಷಗಳ ಕಾಲ ದೇಶವನ್ನು ಮುನ್ನಡೆಸಿದ್ದರು. ಪುರುಷರಷ್ಟೇ ಏಕೆ ಪ್ರಧಾನಮಂತ್ರಿಯಾಗಬೇಕು? ಮಮತಾ ಬ್ಯಾನರ್ಜಿ ಅಥವಾ ಮಾಯಾವತಿ ಏಕೆ ಆಗಬಾರದು? ಎನ್ನುವ ಮೂಲತ ತಾವು ಮಹಿಳಾ ಪ್ರಧಾನಿ ಪ್ರಸ್ತಾವಕ್ಕೆ ವಿರೋಧಿಯಲ್ಲ ಎದು ಸ್ಪಷ್ಟಪಡಿಸಿದ್ದಾರೆ. 
1996ರಲ್ಲಿ ದೇವೇಗೌಡ ಅವರು ದೇಶದ ಪ್ರಧಾನಮಂತ್ರಿಗಳಾಗಿದ್ದಾಗಲೇ ಮಹಿಳಾ ಮೀಸಲು ಮಸೂದೆ ಲೋಕಸಭೆಯಲ್ಲಿ ಅಂಗೀಕಾರಗೊಂಡಿತ್ತು. ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸಲು ಜೆಡಿಎಸ್ ಯಾವುದೇ ಪ್ರಯತ್ನ ನಡೆಸಿಲ್ಲ. ಆದರೆ, ಬಿಜೆಪಿ ವಿರುದ್ಧದ ಹೋರಾಟದಲ್ಲಿ ಇತರೆ ಪಕ್ಷಗಳಿಗೆ ಸಹಕಾರ ನೀಡಲು ಸಿದ್ಧವಾಗಿದೆ. ಏಕೆಂದರೆ, ದೇಶದಲ್ಲಿಂದು ಭಯದ ವಾತಾವರಣ ನಿರ್ಮಾಣವಾಗಿದೆ. 
ಉತ್ತರಪ್ರದೇಶ, ಬಿಹಾರ, ಗುಜರಾತ್'ನಂತಹ ರಾಜ್ಯಗಳಲ್ಲಿ ಉಸಿರುಗಟ್ಟುವ ವಾತಾವರಣಗಳಿವೆ. 2019ರಲ್ಲಿ ಬಿಜೆಪಿಯನ್ನು ಎದುರಿಸಲು ಬಲಿಷ್ಠ ಒಕ್ಕೂಟದ ಅವಶ್ಯಕವಿದೆ ಎಂದು ತಿಳಿಸಿದ್ದಾರೆ. 
ಬಿಜೆಪಿ ವಿರುದ್ಧದ ರಾಜಕೀಯ ಪರ್ಯಾಯಕ್ಕೆ ನಿಧಾನವಾಗಿ ಬಲ ಬರಲಿದೆ. ರಾಷ್ಟ್ರೀ ಪಕ್ಷವಾಗಿರುವ ಕಾಂಗ್ರೆಸ್ ಕೂಡ ಪ್ರಧಾನ ಪಾತ್ರ ನಿರ್ವಹಿಸಲಿದೆ. ಮುಂದಿನ 2-3 ತಿಂಗಳಲ್ಲಿ ಯಾವ ರೀತಿಯ ಬೆಳವಣಿಗೆಗಳು ನಡೆಯಲಿವೆ ಎಂಬುದನ್ನು ನೋಡಲು ಬಯಸಿದ್ದೇನೆ. ತೃತೀಯ ರಂಗ ಎಂಬುದು ಇನ್ನೂ ಆರಂಭಿಕ ಆರಂಭಿಕ ಹಂತದಲ್ಲಿದೆ. ಬಿಜೆಪಿಯೇತರ ಪಕ್ಷಗಳನ್ನು ಒಗ್ಗೂಡಿಸಲು ಮಮತಾ ಶಕ್ತಿ ಮೀರಿ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. 
ಲೋಕಸಭೆ ಚುನಾವಣೆಯನ್ನು ಕರ್ನಾಟಕದಲ್ಲಿ ಕಾಂಗ್ರೆಸ್ ಜೊತೆಗೂಡಿ ಎದುರಿಸಲಾಗುವುದು. ಸೀಟು ಹಂಚಿಕೆ ಬಗ್ಗೆ ಈವರೆಗೆ ಯಾವುದೇ ಚರ್ಚೆಗಳಾಗಿಲ್ಲ. ಚುನಾವಣೆಗೂ ಮೊದಲೇ ಪ್ರಧಾನಿ ಅಭ್ಯರ್ಥಿ ವಿಚಾರ ಚರ್ಚೆಗೆ ಬಂದರೆ ಹೊಡೆತ ಬೀಳಬಹುದು ಎಂಬ ಕಾರಣಕ್ಕೆ ಆ ಬಗ್ಗೆ ಚುನಾವಣೆ ನಂತರ ನಿರ್ಧರಿಸಲು ಕಾಂಗ್ರೆಸ್ ಹಾಗೂ ಇನ್ನಿತರೆ ಪ್ರತಿಪಕ್ಷಗಳು ಒಲವು ತೋರಿವೆ. ಬಿಜೆಪಿ ಹಾಗೂ ಆರ್'ಎಸ್ಎಸ್ ಬೆಂಬಲವಿಲ್ಲದ ಪ್ರತಿಪಕ್ಷಗಳ ಪಾಳಯದ ಯಾವುದೇ ಅಭ್ಯರ್ಥಿಯನ್ನು ಪ್ರಧಾನಮಂತ್ರಿಯಾಗಿ ಬೆಂಬಲಿಸಲು ಹಿಂದೇಟು ಹಾಕುವುದಿಲ್ಲ ಎಂಬ ಸುಳಿವನ್ನು ಈಗಾಗಲೇ ಕಾಂಗ್ರೆಸ್ ಮೂಲಗಳು ನೀಡಿವೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.