ಕಾವೇರಿ ವಿವಾದ; ತಮಿಳುನಾಡಿನಲ್ಲಿ ತೀವ್ರಗೊಂಡ ಪ್ರತಿಭಟನೆ, 300 ಮಂದಿ ಬಂಧನ
ಕಾವೇರಿ ನದಿ ನೀರು ವಿವಾದ ಸಂಬಂಧ ಸುಪ್ರೀಂಕೋರ್ಟ್ ಆದೇಶದಂತೆ ಕೇಂದ್ರ ಸರ್ಕಾರ ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡುವಂತೆ ಆಗ್ರಹಿಸಿ ತಮಿಳುನಾಡು ರಾಜ್ಯದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ತೀವ್ರಗೊಂಡಿದ್ದು, 300ಕ್ಕೂ ಹೆಚ್ಚು ಮಂದಿಯನ್ನು...

Published On :
ಕೊಯಿಮತ್ತೂರು; ಕಾವೇರಿ ನದಿ ನೀರು ವಿವಾದ ಸಂಬಂಧ ಸುಪ್ರೀಂಕೋರ್ಟ್ ಆದೇಶದಂತೆ ಕೇಂದ್ರ ಸರ್ಕಾರ ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡುವಂತೆ ಆಗ್ರಹಿಸಿ ತಮಿಳುನಾಡು ರಾಜ್ಯದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ತೀವ್ರಗೊಂಡಿದ್ದು, 300ಕ್ಕೂ ಹೆಚ್ಚು ಮಂದಿಯನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ಸೋಮವಾರ ತಿಳಿದುಬಂದಿದೆ.
ನಿನ್ನೆ ಬೆಳಿಗ್ಗೆ ಶಾಸಕ ಎನ್ ಕಾರ್ತಿಕ್ ಅವರು ಸೇರಿದಂತೆ ಹಲವು ಪ್ರತಿಭಟನಾಕಾರರು ಸಿಂಗನಲ್ಲೂರ್ ರೈಲ್ವೇ ನಿಲ್ದಾಣಕ್ಕೆ ತೆರಳು ರೈಲುಗಳನ್ನು ಮುತ್ತಿಗೆ ಹಾಕಿದರು. ಈ ವೇಳೆ 50 ಮಂದಿಯನ್ನು ಪೊಲೀಸರು ಬಂಧನಕ್ಕೊಳಪಡಿಸಿದರು. ರೈಲ್ವೇ ಹಳಿಗಳನ್ನು ಮುತ್ತಿಗೆ ಹಾಕಿದ ಕಾರಣ ರೈಲು ಸಂಚಾರದಲ್ಲಿ 15 ನಿಮಿಷಗಳ ವ್ಯತ್ಯಾಸಗಳು ಕಂಡು ಬಂದವು.
ಜಿಲ್ಲಾ ಸಂಯೋಜಕರಾದ ಮುತ್ತುಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ರಸ್ತೆ ತಡೆ ಪ್ರತಿಭಟನೆಗಳನ್ನು ನಡೆಸಿದರು. ಇದರಿಂದ ಹಲವೆಡೆ ಸಂಚಾರ ದಟ್ಟಣೆ ಸಮಸ್ಯೆಗಳು ಎದುರಾಗಿದ್ದವು.
ಈ ನಡುವೆ ಡಿಎಂಕೆಯ ಇಬ್ಬರು ನಾಯಕರಾದ ಟಿ.ಮುರುಗನ್ (53) ಹಾಗೂ ಸಿಂಗೈ ಸುಧಾಸಿವಮ್ (54) ಎಂಬುವವರು ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಅವರನ್ನು ರಕ್ಷಣೆ ಮಾಡಿದರು. ನಂತರ ಇಬ್ಬರನ್ನು ಪೀಲಮೆಡು ಪೊಲೀಸ್ ಠಾಣೆಗೆ ಕರೆದೊಯ್ದರು.
ಈ ನಡುವೆ ಕೆಲ ಪ್ರತಿಭಟನಾಕಾರರು ಕೊಯಿಮತ್ತೂರಿನಿಂದ ಮೈಸೂರಿಗೆ ತೆರಳುತ್ತಿದ್ದ ಕೆಎಸ್ಆರ್'ಟಿಸಿ ಬಸ್ ಗಳನ್ನು ತಡೆಹಿಡಿದರು. ಈ ವೇಳೆ ಬಸ್'ನ್ನು ಧ್ವಂಸಗೊಳಿಸಲು ಯತ್ನ ನಡೆಸಿದರು. ನಂತರ ಮಧ್ಯೆ ಪ್ರವೇಶ ಮಾಡಿದ ಪೊಲೀಸರು 6 ಮಂದಿಯನ್ನು ಬಂಧನಕ್ಕೊಳಪಡಿಸಿದರು. ಈ ವೇಳೆ ಪ್ರತಿಭಟನಾನಿರತರು ಅಲ್ಲದೆ, ಕೇಂದ್ರ ಸರ್ಕಾರ ಹಾಗೂ ಬಿಜೆಪಿ ವಿರುದ್ಧ ಘೋಷಣಾ ವಾಕ್ಯಗಳನ್ನು ಕೂಗಿದರು.
ರಾಜ್ಯದಾದ್ಯಂತ ನಡೆದ ಪ್ರತಿಭಟನೆ ವೇಳೆ ಒಟ್ಟು 324 ಮಂದಿಯನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಏ.5ಕ್ಕೆ ತಮಿಳುನಾಡು ಬಂದ್
ಕೇಂದ್ರ ಸರ್ಕಾರ ಕೂಡಲೇ ಸುಪ್ರೀಂಕೋರ್ಟ್ ಆದೇಶದಂತೆ ಕಾವೇರಿ ನಿರ್ವಹಣಾ ಮಂಡಳಿಯನ್ನು ರಚನೆ ಮಾಡಬೇಕೆಂದು ಒತ್ತಾಯಿಸಿ ಡಿಎಕೆ ಏ.5 ರಂದು ತಮಿಳುನಾಡು ಬಂದ್ ಗೆ ಕರೆ ನೀಡಿದೆ.
ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ. ಸ್ಟಾಲಿನ್ ಅವರು, ರೈತರು ವ್ಯಾಪಾರಿಗಳು, ವಿದ್ಯಾರ್ಥಇ ಸಂಘಟನೆಗಳಿಂದ ಸಹಕಾರವನ್ನು ಕೋರಲಾಗಿದ್ದು ಬಂದ್ ನಡೆಸಲು ಒಮ್ಮತದ ನಿರ್ಧಾರಕ್ಕೆ ಬರಲಾಗಿದೆ. ಏ.5ಕ್ಕೆ ತಮಿಳುನಾಡು ರಾಜ್ಯ ಬಂದ್'ಗೆ ಕರೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಕಾವೇರಿ ನದಿ ನೀರು ವಿವಾದ ಕುರಿತು ಫೆ.16 ರಂದು ತೀರ್ಪು ನೀಡಿದ್ದ ಸುಪ್ರೀಂಕೋರ್ಟ್, 6 ವಾರಗಳಲ್ಲಿ ನಿರ್ವಹಣಾ ಮಂಡಳಿ ರಚಿಸುವಂತೆ ಆದೇಶ ನೀಡಿತ್ತು. ನ್ಯಾಯಾಲಯ ನೀಡಿದ್ದ ಗಡುವು ಮಾರ್ಚ್ 29 ಕ್ಕೆ ಮುಗಿದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


