ಜನಪ್ರಿಯತೆ, ಹಣಗಳಿಂದ ರಾಜಕೀಯದಲ್ಲಿ ಯಶಸ್ಸು ಗಳಿಸಲು ಸಾಧ್ಯವಿಲ್ಲ: ರಜನಿಕಾಂತ್
ಕೇವಲ ಹಣ ಹಾಗೂ ಜನಪ್ರಿಯತೆಗಳಿಂದ ರಾಜಕೀಯದಲ್ಲಿ ಯಶಸ್ಸು ಗಳಿಸಲು ಸಾಧ್ಯವಿಲ್ಲ ಎಂದು ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ನಟ ರಜನಿಕಾಂತ್ ಅವರು ಭಾನುವಾರ ಹೇಳಿದ್ದಾರೆ...

Published On :
ಚೆನ್ನೈ; ಕೇವಲ ಹಣ ಹಾಗೂ ಜನಪ್ರಿಯತೆಗಳಿಂದ ರಾಜಕೀಯದಲ್ಲಿ ಯಶಸ್ಸು ಗಳಿಸಲು ಸಾಧ್ಯವಿಲ್ಲ ಎಂದು ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ನಟ ರಜನಿಕಾಂತ್ ಅವರು ಭಾನುವಾರ ಹೇಳಿದ್ದಾರೆ.
ಖ್ಯಾತ ನಟ ದಿವಂಗತ ಶಿವಾಜಿ ಗಣೇಶನ್ ಅವರ ಜನ್ಮ ದಿನಾಚರಣೆ ಹಿನ್ನಲೆಯಲ್ಲಿ ಇಂದು ತಮಿಳುನಾಡು ಉಪ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಅವರು ಶಿವಾಜಿ ಗಣೇಶನ್ ಸ್ಮಾರಕವನ್ನು ಉದ್ಘಾಟನೆ ಮಾಡಿದರು.
ಚೆನ್ನೈನ ಅಡಿಯರ್ ನಲ್ಲಿ ಶಿವಾಜಿ ಗಣೇಶನ್ ಸ್ಮಾರಕ ನಿರ್ಮಿಸಲಾಗಿದ್ದು, ಉದ್ಘಾಟನಾ ಸಮಾರಂಭದಲ್ಲಿ ದಕ್ಷಿಣ ಭಾರತದ ಸೂಪರ್ ಸ್ಟಾರ್ ನಟರಾಗಿರುವ ರಜನಿಕಾಂತ್, ಕಮಲ್ ಹಾಸನ್, ಶಿವಾಜಿ ಗಣೇಶನ್ ಅವರ ಪುತ್ರ ಪ್ರಭು, ಮೊಮ್ಮಗ ವಿಕ್ರಮ್ ಪ್ರಭು ಹಾಗೂ ನಸೀರ್, ಶರತ್ ಕುಮಾರ್ ಹಾಗೂ ರಾಧಿಕಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿರುವ ರಜನಿಕಾಂತ್ ಅವರು, ರಾಜಕೀಯದಲ್ಲಿ ಯಶಸ್ಸು ಕಾಣಬೇಕೆಂದರೆ, ಸಿನಿಮಾ ರಂಗದಲ್ಲಿ ಗಳಿಸಿರವ ಜನಪ್ರಿಯತೆ ಹಾಗೂ ಹಣವೊಂದೇ ಸಾಕಾಗುವುದಿಲ್ಲ. ಇದೆಕ್ಕಿಂತಲೂ ಹೆಚ್ಚಿನದ್ದು ಅಗತ್ಯವಿದೆ. ಅದೇನು ಎಂಬುದು ಕಮಲ್ ಹಾಸನ್ ಅವರಿಗೆ ಗೊತ್ತಿರಬಹುದು. ಎರಡು ತಿಂಗಳ ಹಿಂದೆ ನಾನು ಕಮಲ್ ಹಾಸನ್ ಅವರನ್ನು ಇದನ್ನು ಕೇಳಿದ್ದರೆ, ಅದೇನು ಎಂಬುದನ್ನು ಅವರೇ ಹೇಳುತ್ತಿದ್ದರು. ಇದೀಗ ಕೇಳಲು ಹೋದರೆ, ನನ್ನೊಂದಿಗೆ ಬನ್ನ ಹೇಳುತ್ತೇನೆಂದು ಹೇಳುತ್ತಾರೆಂದು ಹೇಳಿದ್ದಾರೆ.
ಶಿವಾಜಿ ಗಣೇಶನ್ ಅವರು ಸಿನಿಮಾ ಹಾಗೂ ರಾಜಕೀಯ ಎರಡೂ ರಂಗದಲ್ಲೂ ನನಗೆ ಪಾಠವನ್ನು ಹೇಳಿಕೊಟ್ಟಿದ್ದಾರೆ. ಚುನಾವಣೆಯಲ್ಲಿ ನಿಂತ ವೇಳೆ ಸೋಲು ಕಂಡಿದ್ದರು. ಇದರಿಂದ ಅವರಿಗೆ ಗೌರವವಷ್ಟೇ ಅಲ್ಲದೆ. ಅವರ ಕ್ಷೇತ್ರದ ಜನರಿಗೆ ಕೆಟ್ಟ ಹೆಸರನ್ನೂ ತಂದುಕೊಟ್ಟಿತ್ತು. ಇದರಿಂದ ನಾವು ಪಾಠ ಕಲಿಯಬೇಕಿದೆ. ರಾಜಕೀಯದಲ್ಲಿ ಯಶಸ್ಸು ಗಳಿಸಬೇಕೆಂದರೆ ಅದಕ್ಕೆ ಕೇವಲ ಹಣ ಹಾಗೂ ಜನಪ್ರಿಯತೆಯೊಂದೇ ಸಾಲದು ಎಂಬುದನ್ನು ಇದರಿಂದ ಕಲಿಯಬೇಕು ಎಂದಿದ್ದಾರೆ.
ಬಳಿಕ ಮಾತನಾಡಿರುವ ನಟ ಕಮಲ್ ಹಾಸನ್ ಅವರು, ಶೀಘ್ರದಲ್ಲಿಯೇ ಹೊಸ ಪಕ್ಷವನ್ನು ಸ್ಥಾಪನೆ ಮಾಡುತ್ತೇನೆಂದು ಹೇಳಿದ್ದಾರೆ.
ರೂ.2.80 ಕೋಟಿ ವೆಚ್ಚದಲ್ಲಿ ಶಿವಾಜಿ ಗಣೇಶನ್ ಸ್ಮಾರಕ ನಿರ್ಮಿಸಲಾಗಿದ್ದು, ಸ್ಮಾರಕ ನಿರ್ಮಾಣ ಯೋಜನೆಯು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಕನಸ್ಸಿನ ಯೋಜನೆಯಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


