ದೇಶ

ತಮಿಳುನಾಡಿನ ಜನರಿಗಾಗಿ ನಾನು ಮುಖ್ಯಮಂತ್ರಿಯಾಗಲು ಬಯಸುತ್ತೇನೆ: ಕಮಲ್ ಹಾಸನ್

ನಾನು ತಮಿಳು ನಾಡು ಜನತೆಗೆ ಮುಖ್ಯಮಂತ್ರಿಯಾಗಲು ಬಯಸುತ್ತೇನೆ, ಇದು ಖ್ಯಾತ ಹಿರಿಯ ನಟ, ನಿರ್ದೇಶಕ ಕಮಲ್ ಹಾಸನ್ ....

ತಮಿಳುನಾಡಿನ ಜನರಿಗಾಗಿ ನಾನು ಮುಖ್ಯಮಂತ್ರಿಯಾಗಲು ಬಯಸುತ್ತೇನೆ: ಕಮಲ್ ಹಾಸನ್
ನಿನ್ನೆ ಚೆನ್ನೈನಲ್ಲಿ ಸಂದರ್ಶನದಲ್ಲಿ ಮಾತನಾಡಿದ ನಟ ಕಮಲ್ ಹಾಸನ್. ಈ ಸಂದರ್ಭದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇದ್ದರು.
Published On :
ಚೆನ್ನೈ: ನಾನು ತಮಿಳು ನಾಡು ಜನತೆಗೆ ಮುಖ್ಯಮಂತ್ರಿಯಾಗಲು ಬಯಸುತ್ತೇನೆ, ಇದು ಖ್ಯಾತ ಹಿರಿಯ ನಟ, ನಿರ್ದೇಶಕ ಕಮಲ್ ಹಾಸನ್ ಹೇಳಿರುವ ಮಾತು.
ಇಂಡಿಯಾ ಟುಡೆ ಸುದ್ದಿ ಚಾನೆಲ್ ಗೆ ಸಂದರ್ಶನ ನೀಡಿದ ವೇಳೆಯಲ್ಲಿ ಅವರು, ತಾವು ರಾಜಕೀಯಕ್ಕೆ ಅಧಿಕೃತವಾಗಿ ಸೇರ್ಪಡೆಯಾಗುವ ಮೊದಲು ಅದರ ನೀಲನಕ್ಷೆಯೊಂದನ್ನು ಸಿದ್ಧಪಡಿಸುತ್ತೇನೆ ಎಂದು ಹೇಳಿದ್ದಾರೆ.
ರಾಜಕೀಯಕ್ಕೆ ಸೇರುವುದೆಂದರೆ ಮುಳ್ಳಿನ ಕಿರೀಟ ಧರಿಸಿದ ಹಾಗೆ ಎಂದು ಕಮಲ್ ಹಾಸನ್ ವ್ಯಾಖ್ಯಾನಿಸಿದ್ದಾರೆ. ನಿನ್ನೆ ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಕಮಲ್ ಹಾಸನ್ ಅವರನ್ನು ಅವರ ಚೆನ್ನೈನ ನಿವಾಸದಲ್ಲಿ ಭೇಟಿ ಮಾಡಿದ್ದರು. ಇವರಿಬ್ಬರ ಈ ಭೇಟಿಯಿಂದ ಕಮಲ್ ಹಾಸನ್ ಭ್ರಷ್ಟಾಚಾರ ವಿರೋಧ ವೇದಿಕೆಯನ್ನು ಮುಂದಿಟ್ಟುಕೊಂಡು ಅಲ್ಪಾವಧಿಯಲ್ಲಿಯೇ ರಾಜ್ಯವೊಂದರಲ್ಲಿ ಅಧಿಕಾರಕ್ಕೆ ಬಂದ ಆಮ್ ಆದ್ಮಿ ಪಕ್ಷವನ್ನು ಸೇರುತ್ತಾರೆಯೇ ಅಥವಾ ತಮ್ಮದೇ ಸ್ವಂತ ಪಕ್ಷ ಕಟ್ಟುತ್ತಾರೆಯೇ ಎಂಬ ಕುತೂಹಲ ಮೂಡಿಸಿದೆ.
ತಮಿಳು ನಾಡಿನಲ್ಲಿ ಈಗಿರುವ ಎಡಪ್ಪಾಡಿ ಕೆ. ಪಳನಿಸ್ವಾಮಿ ನೇತೃತ್ವದ ಸರ್ಕಾರದ ವಿರುದ್ಧ ಹರಿಹಾಯ್ದ ಅವರು, ಅದನ್ನು ಭ್ರಷ್ಟ ಸರ್ಕಾರ ಎಂದು ಕರೆದಿದ್ದಾರೆ. ರಾಜ್ಯದ ಎಲ್ಲಾ ಪ್ರಸ್ತುತ ರಾಜಕಾರಣಿಗಳ ಬಗ್ಗೆ ಎಚ್ಚರದಿಂದಿರಿ ಎಂದು ಅವರು ಇದೇ ಸಂದರ್ಭದಲ್ಲಿ ತಮಿಳು ನಾಡಿನ ಜನತೆಗೆ ಹೇಳಿದರು.
ಜನರ ಕೆಲಸ ಮಾಡಿಕೊಡಲು ಜನರಿಂದ ಲಂಚ ಸ್ವೀಕರಿಸುವ ಸಚಿವರುಗಳನ್ನು ಜನತೆ ವಿರೋಧಿಸಬೇಕು ಎಂದು ಒತ್ತಾಯಿಸಿದರು.

ತಮ್ಮ ಮುಂದಿನ ನಡೆ ಏನು ಎಂದು ಸುದ್ದಿ ಮಾಧ್ಯಮದ ಪ್ರತಿನಿಧಿ ಕೇಳಿದಾಗ, ರಾಜಕೀಯಕ್ಕೆ ಧುಮುಕುವ ಮೊದಲು ನಾನು ಸಿದ್ಧತೆ ಮಾಡಿಕೊಳ್ಳಬೇಕು. ಜನರನ್ನು ಭೇಟಿ ಮಾಡಿ ಸದ್ಯದಲ್ಲಿಯೇ ಅವರಿಗೆ ನನ್ನ ನೀಲನಕ್ಷೆಯೊಂದನ್ನು ನೀಡುತ್ತೇನೆ ಎಂದರು.

ಕ್ರಾಂತಿಕಾರಿ ಚಿಂತನೆಯ ನಟ ಕಮಲ್ ಹಾಸನ್ ಇತ್ತೀಚೆಗೆ ಕೇರಳ ಮುಖ್ಯಮಂತ್ರಿ ಹಾಗೂ ಕಮ್ಯೂನಿಸ್ಟ್ ಪಕ್ಷದ ನಾಯಕ ಪಿನರಯಿ ವಿಜಯನ್ ಅವರನ್ನು ಭೇಟಿ ಮಾಡಿದ್ದರು. ರಾಜಕೀಯದಲ್ಲಿ ತಮ್ಮ ತತ್ವ, ನಿಲುವುಗಳೇನು ಎಂದು ಕೇಳಿದ್ದಕ್ಕೆ, ಯಾವುದನ್ನೂ ತಾವು ಗ್ರಹಿಸಿಲ್ಲ ಎಂದರು. ಜನರಿಗೆ ಯಾವುದೇ ಎಡರಂಗ, ಬಲರಂಗ ಅಥವಾ ಪಂಥೀಯವಾದದ ಬಗ್ಗೆ ಆಸಕ್ತಿಯಿರುವುದಿಲ್ಲ. ಸಾಮಾನ್ಯ ಜನತೆಯ ಕಷ್ಟ ಸುಖಗಳಿಗೆ ಸ್ಪಂದಿಸಿದರೆ ಪಂಥೀಯವಾದಗಳಿಗೆ ಒಂದು ದಾರಿ ಸಿಗುತ್ತದೆ ಎಂದರು.

ಸಂದರ್ಶನಕ್ಕೆ ಕಪ್ಪು ಬಣ್ಣದ ಶರ್ಟ್ ಧರಿಸಿದ್ದ ಕಮಲ್ ಹಾಸನ್ ಇದು ತಮ್ಮ ರಾಜಕೀಯದ ಬಣ್ಣ. ಇದರಲ್ಲಿ ಕೇಸರಿ ಸೇರಿದಂತೆ ಎಲ್ಲಾ ಬಣ್ಣಗಳು ಅಡಗಿರುತ್ತದೆ ಎಂದರು.
ಇದಕ್ಕೂ ಮುನ್ನ ಸಂದರ್ಶನದಲ್ಲಿ ಅವರು ತಾವು ರಾಜಕೀಯ ಕುಟುಂಬದ ಹಿನ್ನೆಲೆಯಿಂದ ಬಂದವನು. ನಾನು ಮೊದಲ ಬಾರಿಗೆ ಮತ ಚಲಾಯಿಸಿದಾಗಲೇ ರಾಜಕೀಯಕ್ಕೆ ಬಂದೆ ಎಂದು ಪ್ರತಿಪಾದಿಸಿದರು.

ತಾವು ರಾಜಕೀಯಕ್ಕೆ ಪ್ರವೇಶಿಸಿದ ಮೇಲೆ ನಿಧಾನವಾಗಿ ಉತ್ತಮ ಬದಲಾವಣೆ ತರಲು ಬಯಸುತ್ತೇನೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.