ಲಂಚ ಸ್ವೀಕಾರ ಪ್ರಕರಣ: ಸುಪ್ರೀಂ ಕೋರ್ಟ್ ಹಿರಿಯ ನ್ಯಾಯಾಧೀಶರ ಮಧ್ಯೆ ಮುಂದುವರಿದ ಭಿನ್ನಾಭಿಪ್ರಾಯ
ಸುಪ್ರೀಂ ಕೋರ್ಟ್ ನ ಉನ್ನತ ನ್ಯಾಯಾಧೀಶರ ನಡುವಿನ ಭಿನ್ನಾಭಿಪ್ರಾಯ ಮುಂದುವರಿದಿದ್ದು...

Published On :
ನವದೆಹಲಿ: ಸುಪ್ರೀಂ ಕೋರ್ಟ್ ನ ಉನ್ನತ ನ್ಯಾಯಾಧೀಶರ ನಡುವಿನ ಭಿನ್ನಾಭಿಪ್ರಾಯ ಮುಂದುವರಿದಿದ್ದು, ಕಳೆದ ಗುರುವಾರ ನ್ಯಾಯಾಧೀಶ ಜೆ.ಚೆಲಮೇಶ್ವರ್ ಅವರು ಹೊರಡಿಸಿದ್ದ ಆದೇಶವನ್ನು ತಳ್ಳಿಹಾಕಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮೂವರು ನ್ಯಾಯಾಧೀಶರ ಸಾಂವಿಧಾನಿಕ ಪೀಠವನ್ನು ರಚಿಸಿದ್ದಾರೆ.
ನ್ಯಾಯಪೀಠ ಉನ್ನತ ನ್ಯಾಯಾಂಗದಲ್ಲಿ ಕೇಳಿಬರುತ್ತಿರುವ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸಲು ನ್ಯಾಯಮೂರ್ತಿ ಜೆ.ಚೆಲಮೇಶ್ವರ ಐವರು ನ್ಯಾಯಾಧೀಶರ ತಂಡವನ್ನು ರಚಿಸಿದ್ದರು. ಈ ತಂಡ ಭ್ರಷ್ಟಾಚಾರ ತನಿಖೆಗೆ ವಿಶೇಷ ತನಿಖಾ ತಂಡದ ಅಗತ್ಯವಿದೆಯೇ ಇಲ್ಲವೇ ಎಂದು ತೀರ್ಮಾನಿಸಲಿದೆ.
ಮುಖ್ಯ ನ್ಯಾಯಮೂರ್ತಿ ಐವರು ನ್ಯಾಯಾಧೀಶರ ನ್ಯಾಯಪೀಠವನ್ನು ಬದಲಾಯಿಸಿ ಮೂವರು ನ್ಯಾಯಾಧೀಶರ ನ್ಯಾಯಪೀಠವನ್ನು ರಚಿಸಿದ್ದಾರೆ. ಅಲ್ಲದೆ ಸುತ್ತೋಲೆಯೊಂದನ್ನು ಹೊರಡಿಸಿದ್ದು ಇಲ್ಲಿಂದ ನಂತರ ಎಲ್ಲಾ ವಕೀಲರು ಮುಖ್ಯ ನ್ಯಾಯಮೂರ್ತಿಯವರ ಮುಂದೆಯೇ ಎಲ್ಲಾ ಹೊಸ ಪ್ರಕರಣಗಳ ವಿಚಾರಣೆ ನಡೆಸಬೇಕು ಎಂದು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ನ್ಯಾಯಮೂರ್ತಿ ಚೆಲಮೇಶ್ವರ ನ್ಯಾಯಪೀಠದಿಂದ ವಕೀಲೆ ಕಾಮಿನಿ ಜೈಸ್ವಾಲ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ತಳ್ಳಿ ಹಾಕಿ ಆಡಳಿತಾತ್ಮಕ ಆದೇಶ ಹೊರಡಿದ್ದಾರೆ. ವೈದ್ಯಕೀಯ ಕಾಲೇಜುಗಳ ಪರವಾಗಿ ಆದೇಶ ನೀಡಲು ಹಿರಿಯ ನ್ಯಾಯಾಧೀಶರುಗಳು ಲಂಚ ಸ್ವೀಕರಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಪಟ್ಟಂತೆ ವಿಚಾರಣೆ ನಡೆಸಲು ವಿಶೇಷ ತನಿಖಾ ತಂಡ ರಚಿಸಬೇಕೆಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಕಾಮಿನಿ ಜೈಸ್ವಾಲ್ ಒತ್ತಾಯಿಸಿದ್ದರು.
ಇದೀಗ ಮುಖ್ಯ ನ್ಯಾಯಮೂರ್ತಿಗಳು ರಚಿಸಿರುವ ಮೂವರು ನ್ಯಾಯಾಧೀಶರುಗಳನ್ನೊಳಗೊಂಡ ಪೀಠ ನಾಳೆ ವಿಚಾರಣೆ ನಡೆಸಲಿದೆ. ಮೂವರು ನ್ಯಾಯಾಧೀಶರ ನ್ಯಾಯಪೀಠದಲ್ಲಿ ನ್ಯಾಯಮೂರ್ತಿ ಚೆಲಮೇಶ್ವರ ಆಗಲಿ ಸುಪ್ರೀಂ ಕೋರ್ಟ್ ನ ಹಿರಿಯ ನ್ಯಾಯಾಧೀಶರುಗಳಾಗಲಿ ಇಲ್ಲ. ಇದು ನ್ಯಾಯಾಲಯದ ಉನ್ನತ ನ್ಯಾಯಾಧೀಶರ ಮಧ್ಯೆ ಇರುವ ಭಿನ್ನಾಭಿಪ್ರಾಯ, ಮನಸ್ತಾಪಗಳನ್ನು ಸೂಚಿಸುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


