ಮಹಿಳೆಯರ ಮೇಲೆ 14 ಮಂದಿ ಪುಂಡರ ದಾಳಿ; ಇಂಟರ್ ನೆಟ್ ನಲ್ಲಿ ವಿಡಿಯೋ ಲೀಕ್!
ಉತ್ತರ ಪ್ರದೇಶದ ನೂತನ ಸಿಎಂ ಯೋಗಿ ಆದಿತ್ಯನಾಥ್ ಅವರ ಆ್ಯಂಟಿ ರೋಮಿಯೋ ಪಡೆ ಸ್ಥಾಪನೆ ವಿಚಾರ ವ್ಯಾಪಕ ಚರ್ಚೆಗೀಡಾಗಿರುವಂತೆಯೇ ಇಬ್ಬರು ಮಹಿಳೆಯರ ಮೇಲೆ 14 ಮಂದಿ ಕಾಮುಕರ ತಂಡ ದಾಳಿ ಮಾಡಿ ವಿಡಿಯೋ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.

ಲಖನೌ: ಉತ್ತರ ಪ್ರದೇಶದ ನೂತನ ಸಿಎಂ ಯೋಗಿ ಆದಿತ್ಯನಾಥ್ ಅವರ ಆ್ಯಂಟಿ ರೋಮಿಯೋ ಪಡೆ ಸ್ಥಾಪನೆ ವಿಚಾರ ವ್ಯಾಪಕ ಚರ್ಚೆಗೀಡಾಗಿರುವಂತೆಯೇ ಇಬ್ಬರು ಮಹಿಳೆಯರ ಮೇಲೆ 14 ಮಂದಿ ಕಾಮುಕರ ತಂಡ ದಾಳಿ ಮಾಡಿ ವಿಡಿಯೋ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.
ಉತ್ತರ ಪ್ರದೇಶದ ರಾಮಪುರ ಜಿಲ್ಲೆಯ ಹಳ್ಳಿಯೊಂದರ ಸಮೀಪದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದ್ದು, ರಸ್ತೆ ಮೂಲಕ ಬರುತ್ತಿದ್ದ ಇಬ್ಬರು ಮಹಿಳೆಯರನ್ನು ಅಡ್ಡಹಾಕಿದ 14 ಯುವಕರ ತಂಡ ಅವರ ಬಳಿ ಅಸಭ್ಯವಾಗಿ ವರ್ತಿಸಿದ್ದಾರೆ. ಮಹಿಳೆಯರೊಂದಿಗೆ ಅಶ್ಲೀಲವಾಗಿ ವರ್ತಿಸಿದ್ದಲ್ಲದೇ ಅದನ್ನು ಮೊಬೈಲ್ ನಲ್ಲಿ ವಿಡಿಯೋ ಮಾಡಿಕೊಂಡ ಪುಂಡರು ಬಳಿಕ ಅದನ್ನು ಅಂತರ್ಜಾಲದಲ್ಲಿ ಹರಿಬಿಟ್ಟಿದ್ದಾರೆ.
ಯಾವಾಗ ಈ ವಿಡಿಯೋ ಚಿತ್ರೀಕರಣ ನಡೆಸಲಾಗಿದೆ ಎಂಬುದು ಸ್ಪಷ್ಟವಾಗಿಲ್ಲವಾದರೂ ಕಳೆದ ಸುಮಾರು 15 ದಿನಗಳಿಂದ ಈ ಘಟನೆಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ದೃಶ್ಯಾವಳಿಯ ಆಧಾರದಲ್ಲಿ ಸಂತ್ರಸ್ತರನ್ನು ಗುರುತಿಸಲು ಪೊಲೀಸರಿಗೆ ಸಾಧ್ಯವಾಗಿಲ್ಲ . ಆದರೆ ಮರಗಿಡಗಳಿಂದ ಆವೃತವಾದ ಕಿರಿದಾದ ದಾರಿಯಲ್ಲಿ ಸಾಗುತ್ತಿದ್ದ ಇಬ್ಬರು ಮಹಿಳೆಯರನ್ನು ಬೈಕ್ ನಲ್ಲಿ ಬಂದ 14 ಮಂದಿ ಸುತ್ತುವರಿದು ಕಿರುಕುಳ ನೀಡುವ ದೃಶ್ಯ ಸ್ಪಷ್ಟವಾಗಿದೆ. ಮಹಿಳೆಯರ ಮೈಮುಟ್ಟುತ್ತಾ, ಅವರನ್ನು ಎಳೆದಾಡಿ, ಅಸಭ್ಯವಾಗಿ ನಿಂದಿಸುವ, ಮಹಿಳೆಯರು ಗೋಳಾಡುತ್ತಾ ಕಿರುಚುವ ದೃಶ್ಯ ವಿಡಿಯೋದಲ್ಲಿ ದಾಖಲಾಗಿದೆ.
ಈ ವೇಳೆ ಸಂತ್ರಸ್ತ ಮಹಿಳೆಯರು ತಮ್ಮನ್ನು ಬಿಟ್ಟುಬಿಡಿ ಎಂದು ಗೋಗರೆದರೂ ಈ ಕಾಮುಕರು ಅವರನ್ನು ಬಿಡದೆ ತಮ್ಮ ಕಪಿಚೇಷ್ಟೆ ಮುಂದುವರೆಸಿದ್ದಾರೆ. ಅಲ್ಲದೆ ಈ ದೃಶ್ಯವನ್ನು ತಮ್ಮ ಮೊಬೈಲ್ ಫೋನಿನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗಿದ್ದು, ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಆದಿತ್ಯನಾಥ್, ಇದು ದುರದೃಷ್ಟಕರವಾಗಿದ್ದು, ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಿ ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಘಟನೆಯಲ್ಲಿ ಒಳಗೊಂಡಿರುವ ವ್ಯಕ್ತಿಗಳನ್ನು ಗುರುತಿಸಲಾಗಿದ್ದು, ಪ್ರಮುಖ ಅರೋಪಿಯನ್ನು ಬಂಧಿಸಲಾಗಿದೆ. ಪ್ರಕರಣದ ಬಗ್ಗೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ರಾಂಪುರ್ ಜಿಲ್ಲಾ ಎಸ್‌ಪಿ ವಿಪಿನ್ ಟಾಡ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


