ಉಪಹಾರ್ ದುರಂತ: ನಾಳೆ ಗೋಪಾಲ್ ಅನ್ಸಲ್ ನ್ಯಾಯಾಲಯಕ್ಕೆ ಶರಣು!
1997ರ ಉಪಹಾರ್ ಚಿತ್ರ ಮಂದಿರದಲ್ಲಿನ ಅಗ್ನಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಿಂದ ಶಿಕ್ಷೆಗೆ ಗುರಿಯಾಗಿರುವ ಚಿತ್ರಮಂದಿರ ಮಾಲೀಕ ಗೋಪಾಲ್ ಅನ್ಸಲ್ ಗುರುವಾರ ನ್ಯಾಯಾಲಯಕ್ಕೆ ಶರಣಾಗುವ ಸಾಧ್ಯತೆ ಇದೆ.

ನವದೆಹಲಿ: 1997ರ ಉಪಹಾರ್ ಚಿತ್ರ ಮಂದಿರದಲ್ಲಿನ ಅಗ್ನಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಿಂದ ಶಿಕ್ಷೆಗೆ ಗುರಿಯಾಗಿರುವ ಚಿತ್ರಮಂದಿರ ಮಾಲೀಕ ಗೋಪಾಲ್ ಅನ್ಸಲ್ ಗುರುವಾರ ನ್ಯಾಯಾಲಯಕ್ಕೆ ಶರಣಾಗುವ ಸಾಧ್ಯತೆ ಇದೆ.
ಈ ಹಿಂದೆ ಫೆಬ್ರವರಿಯಲ್ಲಿ ನಡೆದಿದ್ದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ತನ್ನ ಅಂತಿಮ ತೀರ್ಪು ಪ್ರಕಟಿಸಿತ್ತು. ಈ ವೇಳೆ ಗೋಪಾಲ್ ಅನ್ಸಲ್ ಅವರಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿತ್ತು. ಅಲ್ಲದೆ ಗೋಪಾಲ್ ಅನ್ಸಾಲ್ ಇನ್ನೊಂದು ತಿಂಗಳು ಅಂದರೆ ನಾಲ್ಕು ವಾರಗಳ ಒಳಗೆ ಪೊಲೀಸರಿಗೆ ಶರಣಾಗಿ ಶಿಕ್ಷೆ ಅನುಭವಿಸಬೇಕು ಎಂದು ಆದೇಶ ಹೊರಡಿಸಿತ್ತು. ಆದರೆ ಸುಪ್ರೀಂ ಕೋರ್ಟ್ ಆದೇಶದ ಬಳಿಕ ನ್ಯಾಯಾಲಯಕ್ಕೆ ಮತ್ತೆ ಮನವಿ ಸಲ್ಲಿಸಿದ್ದ ಗೋಪಾಲ್ ಅನ್ಸಲ್, ತಮ್ಮ ಸಹೋದರ ಸುಶೀಲ್ ಅನ್ಸಲ್ ರಂತೆಯೇ ತಾವೂ ಕೂಡ ಅನಾರೋಗ್ಯ ಪೀಡಿತರಾಗಿದ್ದು, ತಮಗೂ ತಮ್ಮ ಸಹೋದರನಿಗೆ ನೀಡಿರುವ ವಿನಾಯಿತಿ ನೀಡಬೇಕು ಎಂದು ಕೋರಿದ್ದರು.
ಆದರೆ ನ್ಯಾಯಾಲಯ ಗೋಪಾಲ್ ಅನ್ಸಲ್ ಅವರ ಮನವಿ ತಿರಸ್ಕರಿಸಿದ್ದು, ನಾಳೆ ಅನಿವಾರ್ಯವಾಗಿ ಗೋಪಾಲ್ ಅನ್ಸಲ್ ನ್ಯಾಯಾಲಯಕ್ಕೆ ಹಾಜರಾಗಿ ಶರಣಾಗಬೇಕಿದೆ. ಅಂತೆಯೇ ಒಂದು ವರ್ಷ ಜೈಲು ಶಿಕ್ಷೆಯನ್ನು ಕೂಡ ಅನುಭವಿಸಬೇಕಿದೆ.
ಇನ್ನು ಇಂದು ನಡೆದ ವಿಚಾರಣೆಯಲ್ಲಿ ಉಪಹಾರ್ ದುರಂತದ ಸಂತ್ರಸ್ತರ ಪರ ವಕೀಲರಾದ ನೀಲಂ ಕೃಷ್ಣ ಮೂರ್ತಿ ಅವರು ತಮ್ಮ ವಾದ ಮಂಡಿಸುತ್ತಾ, ಗೋಪಾಲ್ ಅನ್ಸಲ್ ಅವರು ಉದ್ದೇಶ ಪೂರ್ವಕವಾಗಿ ಶರಣಾಗತಿಯನ್ನು ವಿಳಂಬ ಮಾಡುತ್ತಿದ್ದಾರೆ. ಕಳೆದ 10 ದಿನಗಳಿಂದಲೂ ಗೋಪಾಲ್ ಅನ್ಸಲ್ ಶರಣಾಗತಿ ವಿಳಂಬಕ್ಕೆ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ ಎಂದು ವಾದ ಮಂಡಿಸಿದ್ದರು.
ದೇಶ ಕಂಡ ಅತ್ಯಂತ ಭೀಕರ ಅಗ್ನಿ ದುರಂತಗಳಲ್ಲಿ ಉಪಹಾರ್ ದುರಂತ ಕೂಡ ಒಂದು ಎನ್ನಲಾಗುತ್ತದೆ. ದಕ್ಷಿಣ ದೆಹಲಿಯ ಗ್ರೀನ್ ಪಾರ್ಕ್ ಸಮೀಪವಿರುವ ಉಪಹಾರ್ ಚಿತ್ರಮಂದಿರದಲ್ಲಿ 1997 ಜೂನ್ 13ರಂದು "ಬಾರ್ಡರ್" ಚಿತ್ರ ಪ್ರದರ್ಶನಗೊಳ್ಳುತ್ತಿದ್ದ ವೇಳೆಯಲ್ಲಿ ಸಂಭವಿಸಿದ ಅಗ್ನಿ ಅಕಸ್ಮಿಕದಿಂದಾಗಿ ಸುಮಾರು 59 ಮಂದಿ ಅಸುನೀಗಿದ್ದರು. ಅಲ್ಲದೆ ಘಟನೆಯಲ್ಲಿ ಉಸಿರುಗಟ್ಟಿ ಮತ್ತು ಕಾಲ್ತುಳಿತದಿಂದಾಗಿ ಸುಮಾರು 100ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಚಿತ್ರಮಂದಿರದಲ್ಲಿ ಅಗ್ನಿ ನಿಯಂತ್ರಕ ಸಾಧನಗಳಿಲ್ಲದೇ ಇದ್ದುದರಿಂದ ದುರಂತದಲ್ಲಿ ಸಾವಿನ ಸಂಖ್ಯೆ ಹೆಚ್ಚಾಯಿತು ಎಂದು ನ್ಯಾಯಾಲಯದಲ್ಲಿ ಆರೋಪಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


