ವೃದ್ಧ ಪೋಷಕರನ್ನು ಆಶ್ರಮಕ್ಕೆ ಕಳುಹಿಸಿದರೆ ಮಾಸಿಕ 30 ಸಾವಿರ ಪರಿಹಾರ ಕೊಡಿ!
ಮಹತ್ವದ ಬೆಳವಣಿಗೆಯೊಂದರಲ್ಲಿ ವೃದ್ಧ ಪೋಷಕರನ್ನು ತೊರೆಯುವ ಮಕ್ಕಳ ವಿರುದ್ಧ ಛಾಟಿ ಬೀಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಆಶ್ರಮಕ್ಕೆ ತೆರಳುವ ಪೋಷಕರಿಗೆ ಮಾಸಿಕ 30 ಸಾವಿರ ರು.ಹಣವನ್ನು ನೀಡಬೇಕು ಎನ್ನುವ ಹೊಸ ಕಾನೂನು ರಚನೆ ಮಾಡಲು ಸರ್ಕಾರ ಮುಂದಾಗಿದೆ.

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ವೃದ್ಧ ಪೋಷಕರನ್ನು ತೊರೆಯುವ ಮಕ್ಕಳ ವಿರುದ್ಧ ಛಾಟಿ ಬೀಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಆಶ್ರಮಕ್ಕೆ ತೆರಳುವ ಪೋಷಕರಿಗೆ ಮಾಸಿಕ 30 ಸಾವಿರ ರು.ಹಣವನ್ನು ನೀಡಬೇಕು ಎನ್ನುವ ಹೊಸ ಕಾನೂನು ರಚನೆ ಮಾಡಲು ಸರ್ಕಾರ ಮುಂದಾಗಿದೆ.
ಮಕ್ಕಳಿಂದ ನಿರ್ಲಕ್ಷಿತರಾಗಿ ವೃದ್ಧಾಶ್ರಮಗಳಲ್ಲಿರುವ ಹಿರಿಯ ನಾಗರಿಕರ ನೆರವಿಗೆ ಕೇಂದ್ರ ಸರ್ಕಾರ ಧಾವಿಸಲಿದ್ದು, ಮಕ್ಕಳಿಂದ ಬೇರ್ಪಟ್ಟು ವೃದ್ಧಾಶ್ರಮಗಳಲ್ಲಿರುವ ಹಿರಿಯ ನಾಗರಿಕರು ಅಥವಾ ತಂದೆ-ತಾಯಂದಿರಿಗೆ ಮಕ್ಕಳು / ಸಂಬಂಧಿಕರು ನೀಡುವ ಮಾಸಾಶನವನ್ನು ಈಗಿನ 10 ಸಾವಿರ ರು.ನಿಂದ 25 ಸಾವಿರ ರು. ಅಥವಾ 30 ಸಾವಿರ ರು.ಗೆ ಹೆಚ್ಚಿಸಲು ಶಾಸನ ತಿದ್ದುಪಡಿಗೆ ಕೇಂದ್ರ ಸರ್ಕಾರ ಮುಂದಾಗಿದೆ ಎಂದು ತಿಳಿದುಬಂದಿದೆ.
ಪಾಲಕರು ಮತ್ತು ಹಿರಿಯ ನಾಗರಿಕರ ಮಾಸಾಶನ ಕಾಯ್ದೆ-2007 ಈಗಾಗಲೇ ಜಾರಿಯಲ್ಲಿದ್ದು, ಅದರಂತೆ ಹಿರಿಯ ನಾಗರಿಕರು (60 ವರ್ಷ ಮೇಲ್ಪಟ್ಟವರು) ಹಾಗೂ ಪಾಲಕರು (ಯಾವುದೇ ವಯಸ್ಸಿನ ನಿರ್ಬಂಧ ಇಲ್ಲ) ವೃದ್ಧಾಶ್ರಮಗಳಲ್ಲಿ ಇದ್ದರೆ ಅವರಿಗೆ ಅವರ ಮಕ್ಕಳು ಮಾಸಿಕ 10 ಸಾವಿರ ರು. ನೀಡಬೇಕು ಎಂಬ ನಿಯಮವಿದೆ. ಆದರೆ ಈ ಹಣ ಪಾಲಕರಿಗೆ ಸಾಲುತ್ತಿಲ್ಲ. ಮೇಲಾಗಿ ಹಲವಾರು ಮಕ್ಕಳಿಗೆ ಹೆಚ್ಚಿನ ಮೊತ್ತ ನೀಡುವ ಶಕ್ತಿ ಇದ್ದರೂ ಕಾನೂನಿನ ನೆಪ ಹೇಳಿ ನೀಡುತ್ತಿಲ್ಲ ಎಂಬ ಆರೋಪಗಳು ಕೂಡ ಕೇಳಿಬರುತ್ತಿವೆ. ಹೀಗಾಗಿ ಮೊತ್ತ ಹೆಚ್ಚಳಕ್ಕೆ ಕಾಯ್ದೆ ತಿದ್ದುಪಡಿ ತರಲಿದ್ದೇವೆ ಎಂದು ಸಾಮಾಜಿಕ ನ್ಯಾಯ ಇಲಾಖೆಯ ಕಾರ್ಯದರ್ಶಿ ಲತಾ ಕೃಷ್ಣರಾವ್ ಹೇಳಿದ್ದಾರೆ.
ಅಂತೆಯೇ ಮಕ್ಕಳು ಪೋಷಕರಿಗೆ ಹಣ ನೀಡದೇ ಹೋದರೆ 3 ತಿಂಗಳು ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ ಎಂದೂ ಕೂಡ ಅವರು ತಿಳಿಸಿದ್ದಾರೆ. ಭಾರತದಲ್ಲಿ 11 ಕೋಟಿಗೂ ಅಧಿಕ ವೃದ್ಧ ಮತ್ತು ಹಿರಿಯ ನಾಗರಿಕರು ಇದ್ದು, ಈ ಪೈಕಿ ಬಹುತೇಕ ಮಂದಿ ಮಕ್ಕಳಿಂದ ಬೇರ್ಪಟ್ಟಿದ್ದಾರೆ. ಹೀಗಾಗಿ ಇದೇ ಮಾನ್ಸೂನ್ ಕಲಾಪದಲ್ಲಿ ಈ ಬಗ್ಗೆ ಕಾಯ್ದೆಗೆ ತಿದ್ದುಪಡಿ ತಂದು ಕಾನೂನು ಜಾರಿಗೊಳಿಸಲಾಗುತ್ತದೆ ಎಂದು ರಾವ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


