ದೇಶ

ಯಾವುದೇ ಪರಿಸ್ಥಿತಿ ಎದುರಿಸಲು ಭಾರತೀಯ ಸೇನೆ ಸನ್ನದ್ಧ: ಸೇನಾ ಮುಖ್ಯಸ್ಥ ಬಿಪಿನ್ ರಾವತ್

ದೇಶಕ್ಕೆ ಎದುರಾಗುವ ಆಂತರಿಕ ಅಥವಾ ಬಾಹ್ಯ ಯಾವುದೇ ರೀತಿಯ ಬೆದರಿಕೆಗಳನ್ನು ಎದುರಿಸಲು ಭಾರತೀಯ ಸೇನೆ ಸನ್ನದ್ಧವಾಗಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್...

ಯಾವುದೇ ಪರಿಸ್ಥಿತಿ ಎದುರಿಸಲು ಭಾರತೀಯ ಸೇನೆ ಸನ್ನದ್ಧ: ಸೇನಾ ಮುಖ್ಯಸ್ಥ ಬಿಪಿನ್ ರಾವತ್
ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್
Published On :
ನವದೆಹಲಿ: ದೇಶಕ್ಕೆ ಎದುರಾಗುವ ಆಂತರಿಕ ಅಥವಾ ಬಾಹ್ಯ ಯಾವುದೇ ರೀತಿಯ ಬೆದರಿಕೆಗಳನ್ನು ಎದುರಿಸಲು ಭಾರತೀಯ ಸೇನೆ ಸನ್ನದ್ಧವಾಗಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಗುರುವಾರ ಹೇಳಿದ್ದಾರೆ.
ರಾಷ್ಟ್ರೀಯ ಸುದ್ಧಿ ಸಂಸ್ಥೆಯೊಂದಿಗೆ ಮಾತನಾಡಿರುವ ಬಿಪಿನ್ ರಾವತ್ ಅವರು, ದೇಶದಲ್ಲಿ ಯಾವುದೇ ರೀತಿಯ ಪರಿಸ್ಥಿತಿ ಎದುರಾದರೂ ಅವುಗಳನ್ನು ಎದುರಿಸಲು ಸೇನೆ ಸಿದ್ಧವಾಗಿದೆ. ಭಯೋತ್ಪದನಾ ದಾಳಿಯಾಗಲೀ ಅಥವಾ ಇನ್ನಾವುದೇ ದಾಳಿಯಾದರೂ ದಿಟ್ಟ ಉತ್ತರ ನೀಡಲು ಸೇನೆ ಸನ್ನದ್ಧವಾಗಿದೆ ಎಂದು ಹೇಳಿದ್ದಾರೆ. 
ಪ್ರಧಾನಮಂತ್ರಿ ನರೇಂದ್ರ ಮೋದಿಯವರೂ ಕೂಡ ಕೆಲಸ ದಿನಗಳ ಹಿಂದಷ್ಟೇ ಹೇಳಿಕೆಯನ್ನು ನೀಡಿದ್ದರು. ಕಳೆದ 40 ವರ್ಷಗಳಿಂದ ಇಂಡೋ-ಚೀನಾ ಗಡಿಯಲ್ಲಿ ಒಂದು ಗುಂಡೂ ಕೂಡ ಹಾರಿಲ್ಲ ಎಂದು ಹೇಳಿದ್ದರು. 
ವಿಶೇಷ ಶಸ್ತ್ರಸಜ್ಜಿತ ಪೊಲೀಸರನ್ನು ಪರ್ವತ ಪ್ರದೇಶಗಳಲ್ಲಿ ನೇಮಿಸುವ ಪ್ರಕ್ರಿಯೆಯಲ್ಲಿ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿರುವ ಕುರಿತಂತೆ ಮಾತನಾಡಿರುವ ಅವರು, ಕೆಲ ಪ್ರಕ್ರಿಯೆಗಳು ಪೂರ್ಣಗೊಳ್ಳಲು ತಡವಾಗುತ್ತದೆ. ನೇಮಕಾತಿ ಪ್ರಕ್ರಿಯೆಗಳು ನಡೆಯುತ್ತಿವೆ. ಒಬ್ಬ ವ್ಯಕ್ತಿಯನ್ನು ಯೋಧನಾಗಿ ಸಿದ್ಧಪಡಿಸಲು ಕಾಲಾವಕಾಶ ಬೇಕಾಗುತ್ತದೆ. ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಯೋಧನಾಗಿ ತಯಾರು ಮಾಡಲು ಮೂರು ವರ್ಷ ಸಮಯಬೇಕು. ತರಬೇತಿ ನೀಡಿ ಸಿದ್ಧಗೊಳಿಸಬೇಕು. ನಂತವಷ್ಟೇ ಅವರನ್ನು ಕರ್ತವ್ಯಕ್ಕೆ ನಿಯೋಜಿಸಬೇಕು ಎಂದು ಹೇಳಿದ್ದಾರೆ. 
ಇದೇ ವೇಳೆ ಸೇನೆಯಲ್ಲಿ ಆಧುನೀಕರಣದ ಯೋಜನೆಗಳ ಕುರಿತಂತೆಮಾತನಾಡಿದ ಅವರು, ಸೇನೆಯ ಎಲ್ಲಾ ಆಗತ್ಯತೆಗಳ ಬಗ್ಗೆ ಸರ್ಕಾರಕ್ಕೆ ಅರಿವಿದೆ. ಪ್ರತೀ ಹಂತದಲ್ಲಿಯೂ ಉತ್ತಮ ರೀತಿಯಲ್ಲಿಯೇ ಬೆಂಬಲ ನೀಡುತ್ತಿದೆ. ಮೇಕ್ ಇನ್ ಇಂಡಿಯಾ ಉತ್ತಮವಾದ ಅಭಿಯಾನವಾಗಿದೆ. ಅಭಿಯಾನದ ಫಲಿತಾಂಶ 2-3 ವರ್ಷಗಳಲ್ಲೇ ತಿಳಿಯಲಿದೆ ಎಂದಿದ್ದಾರೆ. 
ಪ್ರಪಂಚದಲ್ಲಿರುವ ಪ್ರತೀಯೊಂದು ದೇಶದ ಸೇನೆಯೂ 30:40:30 ಅನುಪಾತವನ್ನು ಪಾಲಿಸುತ್ತಿದೆ. ನಮ್ಮದು ಕಲೆ ತಂತ್ರಜ್ಞಾನದ ದೇಶವಾಗಿದ್ದು, ಶೇ.30 ರಷ್ಟು ಸಲಕರಣೆಗಳಿವೆ. ಶೇ.40ರಷ್ಟು ಆಧುನೀಕರಣವನ್ನು ಅನುಸರಿಸಲಾಗುತ್ತಿದೆ. ಇನ್ನುಳಿದ ಶೇ.30 ರಷ್ಟು ಎಂದಿನಂತೆ ಕಾರ್ಯಗಳಉ ಮುಂದುವರೆಯುತ್ತಿವೆ ಎಂದು ತಿಳಿಸಿದ್ದಾರೆ. ಸೇನಾ ಪಡೆ ಪ್ರತ್ಯೇಕವಾಗಿ ಒಂದು ದೇಶದ ವಿರುದ್ಧ ಸಿದ್ಧತೆಗಳನ್ನು ನಡೆಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 
ಜಮ್ಮು ಮತ್ತು ಕಾಶ್ಮೀರ ಗಡಿಯಲ್ಲಿ ಪಾಕಿಸ್ತಾನ ಸೇನೆ ಪದೇಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಿರುವ ಕುರಿತಂತೆ ಮಾತನಾಡಿರುವ ಅವರು, ಸಾಮಾಜಿಕ ಜಾಲತಾಣಗಳ ಮೂಲಕ ಪಾಕಿಸ್ತಾನ ತಪ್ಪು ಮಾಹಿತಿಗಳನ್ನು ನೀಡುತ್ತಿದ್ದು, ಕಾಶ್ಮೀರ ಯುವಕರನ್ನು ಅಡ್ಡದಾರಿಗೆಳೆಯುತ್ತಿದೆ. ಪಾಕಿಸ್ತಾನ ಈ ಪ್ರಯತ್ನಗಳು ಎಂದಿಗೂ ಯಶಸ್ವಿಯಾಗಲ್ಲ. ಶೀಘ್ರದಲ್ಲೇ ಕಾಶ್ಮೀರ ಪರಿಸ್ಥಿತಿ ಸುಧಾರಿಸಲಿದೆ ಎಂದಿದ್ದಾರೆ.
ನಂತರ ಮಾನವ ಗುರಾಣಿ ವಿವಾದ ಕುರಿತಂತೆ ಸ್ಪಷ್ಟನೆ ನೀಡಿದ ಅವರು, ಮಾನವ ಗುರಾಣಿ ಬಳಕೆ ನಮ್ಮ ನಿಯಮದಲ್ಲಿಲ್ಲ. ಇಂತಹ ವರ್ತನೆಗಳನ್ನು ಮುಂದುವರೆಸುವುದನ್ನು ನಾವು ಬೆಂಬಲಿಸುವುದಿಲ್ಲ. ಆದರೆ, ಪರಿಸ್ಥಿತಿ ಹಾಗೂ ವಾತಾವರಣಕ್ಕೆ ಅನುಸಾರವಾಗಿ ಕೆಲವೊಮ್ಮೆ ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಪರಿಸ್ಥಿತಿ ಕೈಮೀರಿದ್ದ ಸಂದರ್ಭದಲ್ಲಿ ಹಿಂದೆ ತಿರುಗಿ ಅನುಮತಿಗಾಗಿ ಕಾಯಲು ಸಾಧ್ಯವಾಗುವುದಿಲ್ಲ. ಕಾಶ್ಮೀರ ಪರಿಸ್ಥಿತಿಯನ್ನು ನಿಯಂತ್ರಿಸುವ ಕುರಿತಂತೆ ಯಾರ ಬಳಿಯಾದರೂ ಉಪಾಯವಿದ್ದರೆ ಅದನ್ನು ನಮಗೆ ತಿಳಿಸಲಿ. ನಾವು ಆ ಬಗ್ಗೆ ಚಿಂತನೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.