ಕಾಶ್ಮೀರ: ಮುಂದುವರೆದ ಎನ್ಐಎ ದಾಳಿ; ಪ್ರತ್ಯೇಕತಾವಾದಿಗಳ ಸ್ಥಳಗಳಲ್ಲಿ ಪಾಕ್ ಕರೆನ್ಸಿ ಪತ್ತೆ
ಜಮ್ಮು ಮತ್ತು ಕಾಶ್ಮೀರದಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್ಐಎ) ತನ್ನ ದಾಳಿಗಳನ್ನು ಮುಂದುವರೆಸಿದ್ದು, ಭಾನುವಾರ ನಡೆಸಲಾದ ದಾಳಿಯಲ್ಲಿ ಪ್ರತ್ಯೇಕತಾವಾದಿಗಳ ಸ್ಥಳಗಳಲ್ಲಿ ಪಾಕಿಸ್ತಾನ ಕರೆನ್ಸಿ ನೋಟುಗಳು ಪತ್ತೆಯಾಗಿದೆ...

Published On :
ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್ಐಎ) ತನ್ನ ದಾಳಿಗಳನ್ನು ಮುಂದುವರೆಸಿದ್ದು, ಭಾನುವಾರ ನಡೆಸಲಾದ ದಾಳಿಯಲ್ಲಿ ಪ್ರತ್ಯೇಕತಾವಾದಿಗಳ ಸ್ಥಳಗಳಲ್ಲಿ ಪಾಕಿಸ್ತಾನ ಕರೆನ್ಸಿ ನೋಟುಗಳು ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಕಾಶ್ಮೀರದಲ್ಲಿ ಹಿಂಸಾಚಾರ ಸೃಷ್ಟಿಸುವ ಸಲುವಾಗಿ ಪ್ರತ್ಯೇಕತಾವಾದಿ ಸಂಘಟನೆಗಳಿಗೆ ಪಾಕಿಸ್ತಾನ ಆರ್ಥಿಕ ನೆರವು ನೀಡುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿ ಬಂದ ಹಿನ್ನಲೆಯಲ್ಲಿ ಎನ್ಐಎ ತನಿಖೆ ಆರಂಭಿಸಿತ್ತು. ಇದರಂತೆ ಕಳೆದ ಮೂರು ದಿನಗಳಿಂದಲೂ ಕಾಶ್ಮೀರದಲ್ಲಿ ಹಲವೆಡೆ ದಾಳಿ ನಡೆಸುತ್ತಿದೆ.
ದಾಳಿ ವೇಳೆ ಪಾಕಿಸ್ತಾನ, ಯುಎಇ ಮತ್ತು ಸೌದಿ ಅರೇಬಿಯಾ ದೇಶಗಳ ನೋಟುಗಳು ಮತ್ತು ದಾಖಲೆಗಳು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತೆಹ್ರೀಕ್-ಇ-ಹುರಿಯತ್ ಸಂಘಟನೆಯ ವಕ್ತಾರ ಅಯಾಜ್ ಅಕ್ಬರ್ ಹಾಗೂ ಸಯ್ಯದ್ ಅಲಿ ಷಾ ಗಿಲಾನಿ ಮತ್ತು ಪೀರ್ ಸೈಫುಲ್ಲಾ ನಿವಾಸಗಳ ಮೇಲೆಯೂ ದಾಳಿ ನಡೆಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಕಾಶ್ಮೀರದ ಉರಿಯಲ್ಲಿನ ಗಡಿ ನಿಯಂತ್ರಣ ರೇಖೆ ಮತ್ತು ಜಮ್ಮುವಿನ ಛಕನ್-ದ-ಬಾದ್ ನಲ್ಲಿ ವಿನಿಮಯ ವ್ಯವಸ್ಥೆಯ ಆಧಾರದ ಮೇಲೆ ವ್ಯಾಪಾರ ನಡೆಸಲಾಗುತ್ತದೆ. ಕೆಲ ವ್ಯಾಪಾರಿಗಳು ಕಡಿಮೆ ಅಥವಾ ಅತಿ ಹೆಚ್ಚು ಹಣ ಪಾವತಿಸಿದ ಬಿಲ್ ಗಳನ್ನು ಸೃಷ್ಟಿಸುತ್ತಾರೆ. ಬಳಿಕ ವ್ಯತ್ಯಾಸದ ಹಣವನ್ನು ವಿಧ್ವಂಸಕ ಕೃತ್ಯಗಳಿಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆಂದು ಹೇಳಲಾಗುತ್ತಿದೆ.
ಕಾಶ್ಮೀರ, ದೆಹಲಿ ಮತ್ತು ಹರಿಯಾಣದ ಹಲವೆಡೆ ಎನ್ಐಎ ದಾಳಿ ನಡೆಸಿತ್ತು. ಅಲ್ಲದೆ, ಜಮ್ಮು ಕಾಶ್ಮೀರದಲ್ಲಿ ಹವಾಲಾ ದಂಧೆ ಮೂಲಕ ಉಗ್ರರಿಗೆ ಹಣದ ನೆರವು ನೀಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಪ್ರತ್ಯೇಕತಾವಾದಿಗಳ ಸ್ಥಳಗಳ ಮೇಲೂ ದಾಳಿ ನಡೆಸಲಾಗಿತ್ತು. ಕಾರ್ಯಾಚಱಣೆ ಮುಂಡುವರೆದಿದ್ದು, ಸಂಬಂಧ ವ್ಯಕ್ತಿಗಳನ್ನು ವಿಚಾರಣೆಗೊಳಪಡಿಸಲಾಗುತ್ತಿದೆ ಎಂದು ಎನ್ಐಎ ವಕ್ತಾರ ಹೇಳಿದ್ದಾರೆ.
ಪ್ರಸ್ತುತ ಶೋಧ ಕಾರ್ಯಾಚರಣೆ ಮುಂದುವರೆದಿದ್ದು, ಸಂಬಂಧಪಟ್ಟ ವ್ಯಕ್ತಿಗಳ ವಿಚಾರಣೆ ನಡೆಸಲಾಗುತ್ತಿದೆ. ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ, ಶಾಲೆಗಳಿಗೆ ಬೆಂಕಿ ಮತ್ತು ಸರ್ಕಾರಿ ಕಚೇರಿಗಳಿಗೆ ಹಾನಿ ಮಾಡಿರುವುದು ಸೇರಿದಂತೆ ಭಯೋತ್ಪಾದನಾ ಚಟುವಟಿಕೆಗಳಿಗೆ ಹಣಕಾಸಿನ ನೆರವು ನೀಡಿರುವ ಕುರಿತು ಸಮಗ್ರ ತನಿಖೆ ನಡೆಸಲಾಗುತ್ತಿದೆ. ತನಿಖೆಯ ಸಂದರ್ಭದಲ್ಲಿ ಬ್ಯಾಂಕ್ ಖಾತೆಗಳು ಮತ್ತು ಲಾಕರ್ ಗಳನ್ನು ಮುಟ್ಟುಗೊಲು ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಶನಿವಾರ 29 ಸ್ಥಳಗಳಲ್ಲಿ ದಾಳಿ ನಡೆಸಲಾಗಿತ್ತು. ಈ ವೇಳೆ ರೂ.2 ಕೋಟಿ ಹಣ, 85 ಚಿನ್ನದ ನಾಣ್ಯಗಳು ಮತ್ತು ರೂ.40 ಲಕ್ಷ ಮೌಲ್ಯದ ಆಭರಣಗಳು ಮತ್ತು ನಿಷೇಧಿತ ಉಗ್ರ ಸಂಘಟನೆಗಳ ಲೆಟರ್ ಹೆಡ್ ಗಳನ್ನು ವಶಕ್ಕೆ ಪಡೆಯಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


