ರಾಷ್ಟ್ರಪತಿ ಚುನಾವಣೆಗೆ ದೇಶಾದ್ಯಂತ ಮತದಾನ ಆರಂಭ
ಬಹು ನಿರೀಕ್ಷಿತ ರಾಷ್ಟ್ರಪತಿ ಚುನಾವಣೆಗೆ ದೇಶಾದ್ಯಂತ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ದೆಹಲಿಯಲ್ಲಿ ಮತದಾನ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

ನವದೆಹಲಿ: ಬಹು ನಿರೀಕ್ಷಿತ ರಾಷ್ಟ್ರಪತಿ ಚುನಾವಣೆಗೆ ದೇಶಾದ್ಯಂತ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ದೆಹಲಿಯಲ್ಲಿ ಮತದಾನ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.
ಯುಪಿಎ ಅಭ್ಯರ್ಥಿ ಮೀರಾ ಕುಮಾರ್ ಹಾಗೂ ಎನ್ ಡಿಎ ಅಭ್ಯರ್ಥಿ ರಾಮನಾಥ ಕೋವಿಂದ್ ಅವರ ನಡುವೆ ಜಿದ್ದಾ ಜಿದ್ದಿನ ಪೈಪೋಟಿ ನಿರೀಕ್ಷಿಸಲಾಗತ್ತಿದ್ದು, ಜುಲೈ 20ರಂದು ಫಲಿತಾಂಶ ಪ್ರಕಟವಾಗಲಿದೆ.
71 ವರ್ಷದ ರಾಮನಾಥ ಕೋವಿಂದ ಉತ್ತಮ ನಾಯಕರೆಂಬ ವರ್ಚಸ್ಸು ಹೊಂದಿದ್ದಾರೆ. ಕಾನೂನು ಮತ್ತು ಸಂವಿಧಾನದಲ್ಲಿ ಪಾಂಡಿತ್ಯ ಹೊಂದಿರುವ ಕೋವಿಂದ್, ದಲಿತ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಎರಡು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲುಂಡಿದ್ದ ಇವರು, ಈ ಹಿಂದೆ ಬಿಹಾರದ ರಾಜ್ಯಪಾಲರಾಗಿದ್ದರು. ಇನ್ನು ಯುಪಿಎ ಅಭ್ಯರ್ಥಿ ಮೀರಾ ಕುಮಾರ್ ಅವರ ವಿಚಾರಕ್ಕೆ ಬರುವುದಾದರೆ ಬಿಹಾರದಲ್ಲಿ ಜನಿಸಿದ ಮೀರಾ ಕುಮಾರ್ (72) ಸರಳ ಹಾಗೂ ಸೌಜನ್ಯದ ವ್ಯಕ್ತಿತ್ವ ಹೊಂದಿದ್ದಾರೆ. ಉತ್ತಮ ನಾಯಕಿಯಾಗಿ ವರ್ಚಸ್ಸು ಪಡೆದಿದ್ದಾರೆ. ಲೋಕಸಭೆ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವ ಮೀರಾ ಕುಮಾರ್ ಅವರು ಇಂಡಿಯನ್ ಫಾರಿನ್ ಸರ್ವಿಸ್ನಲ್ಲಿ ಸೇವೆ ಸಲ್ಲಿಸಿದ್ದರಿಂದ ವಿದೇಶ ನೀತಿಗಳ ಬಗ್ಗೆ ಅರಿವು ಹೊಂದಿದ್ದಾರೆ.
ದಲಿತ ನಾಯಕಿಯಾಗಿಯೂ ಮೀರಾ ಕುಮಾರ್ ಅವರು ಗುರುತಿಸಿಕೊಂಡಿದ್ದು, ಉಪಪ್ರಧಾನಿಯಾಗಿದ್ದ ಜಗಜೀವನರಾಮ್ ಅವರ ಮಗಳು ಎಂಬುದು ಮತ್ತೊಂದು ಹಿರಿಮೆ. ರಾಮವಿಲಾಸ್ ಪಾಸ್ವಾನ್ ಮತ್ತು ಮಾಯಾವತಿಯಂಥ ದಿಗ್ಗಜ ನಾಯಕರಿಗೆ ಮೀರಾ ಕುಮಾರ್ ಅವರು ಚುನಾವಣೆಯಲ್ಲಿ ಸೋಲಿನ ರುಚಿ ಉಣಿಸಿದ್ದಾರೆ. ಕರೋಲ್ಬಾಗ್ ಕ್ಷೇತ್ರದಿಂದ 3 ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ.
ವಿಧಾನಸೌಧದಲ್ಲೂ ಮತದಾನ ಪ್ರಕ್ರಿಯೆ ಆರಂಭ
ಇತ್ತ ಕರ್ನಾಟಕದಲ್ಲೂ ರಾಷ್ಟ್ರಪತಿ ಚುನಾವಣೆಗೆ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಬೆಂಗಳೂರಿನ ವಿಧಾನಸೌಧದ ಕೊಠಡಿ ಸಂಖ್ಯೆ 106ರಲ್ಲಿ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಮೂಲಗಳ ಪ್ರಕಾರ ಈಗಾಗಲೇ ಶಾಸಕರಾದ ಸಿಟಿರವಿ, ಆನಂದ್ ಸಿಂಗ್ ಸೇರಿದಂತೆ ಹಲವು ಮತದಾನ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಮತದಾನ ಪ್ರಕ್ರಿಯೆ ಸಂಜೆ 5 ಗಂಟೆಯವರೆಗೂ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


