ನನ್ನ ಹೇಳಿಕೆ ವೈಯಕ್ತಿಕ, ಯಾರ ಭಾವನೆಗೂ ಧಕ್ಕೆಯಾಗಬಾರದೆಂದು ಅದನ್ನು ಹಿಂಪಡೆಯುತ್ತೇನೆ: ಅನಿಲ್ ವಿಜ್
ಎಲ್ಲಾ ವರ್ಗಗಳಿಂದ ಟೀಕೆಗಳು ಕೇಳಿಬಂದ ನಂತರ ಬಿಜೆಪಿ ನಾಯಕ ಮತ್ತು ಹರ್ಯಾಣ ಸರ್ಕಾರದ ಸಚಿವ ಅನಿಲ್ ವಿಜ್ ತಮ್ಮ....

Published On :
ನವದೆಹಲಿ: ಎಲ್ಲಾ ವರ್ಗಗಳಿಂದ ಟೀಕೆಗಳು ಕೇಳಿಬಂದ ನಂತರ ಬಿಜೆಪಿ ನಾಯಕ ಮತ್ತು ಹರ್ಯಾಣ ಸರ್ಕಾರದ ಸಚಿವ ಅನಿಲ್ ವಿಜ್ ತಮ್ಮ ಹೇಳಿಕೆಯನ್ನು ಹಿಂಪಡೆದಿದ್ದಾರೆ.
ಮಹಾತ್ಮಾ ಗಾಂಧಿಯವರ ಬಗ್ಗೆ ನೀಡಿದ ಹೇಳಿಕೆ ವೈಯಕ್ತಿಕ. ಯಾರೊಬ್ಬರ ಭಾವನೆಗಳಿಗೆ ಧಕ್ಕೆಯಾಗಬಾರದೆಂಬ ಉದ್ದೇಶದಿಂದ ನನ್ನ ಹೇಳಿಕೆಯನ್ನು ಹಿಂಪಡೆಯುತ್ತೇನೆ ಎಂದು ಹೇಳಿದ್ದಾರೆ.
ಖಾದಿ ಗ್ರಾಮ ಕೈಗಾರಿಕೆ ಆಯೋಗದ ಕ್ಯಾಲೆಂಡರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರವನ್ನು ಮುದ್ರಿಸಲಾಗಿದ್ದು, ಅದಕ್ಕೆ ಸಂಬಂಧಪಟ್ಟಂತೆ ಸಚಿವ ಅನಿಲ್ ವಿಜ್ ಹೇಳಿಕೆ ನೀಡಿ ಮೋದಿಯವರ ಹೆಸರು ಮಾಹಾತ್ಮಾ ಗಾಂಧಿಗಿಂತಲೂ ದೊಡ್ಡದು. ಖಾದಿ ಜೊತೆ ಮಹಾತ್ಮಾ ಗಾಂಧಿಯವರ ಹೆಸರು ಬಳಕೆಯಾದ ದಿನದಿಂದ ಅದು ಅಭಿವೃದ್ಧಿ ಹೊಂದಲಿಲ್ಲ. ಮಹಾತ್ಮಾ ಗಾಂಧಿಯವರ ಭಾವಚಿತ್ರ ರೂಪಾಯಿ ಮೇಲೆ ಮುದ್ರಣಗೊಂಡಾಗ ಅದರ ಅಪಮೌಲ್ಯ ಆರಂಭವಾಯಿತು. ನಿಧಾನವಾಗಿ ಗಾಂಧೀಜಿ ರೂಪಾಯಿಯಿಂದಲೂ ಕಣ್ಮರೆಯಾಗುತ್ತಾರೆ. ಗಾಂಧಿಯವರ ಬದಲಿಗೆ ಅವರ ಸ್ಥಾನದಲ್ಲಿ ಮೋದಿಯವರನ್ನು ತಂದಿರುವುದು ಒಳ್ಳೆಯದು. ಮೋದಿಯವರ ಹೆಸರು ಗಾಂಧೀಜಿಗಿಂತ ಜನಪ್ರಿಯ. ಮೋದಿಯವರು ಖಾದಿ ಜೊತೆ ಸೇರಿಕೊಂಡಾಗಿನಿಂದ ಉತ್ಪನ್ನದ ಮಾರಾಟದಲ್ಲಿ ಶೇಕಡಾ 14ರಷ್ಟು ಹೆಚ್ಚಳವಾಗಿದೆ ಎಂದು ವಿಜ್ ಹೇಳಿದ್ದರು.
ಇವರ ಹೇಳಿಕೆಗೆ ಕಾಂಗ್ರೆಸ್ ಸೇರಿದಂತೆ ಅನೇಕ ಪಕ್ಷಗಳಿಂದ ವ್ಯಾಪಕ ಟೀಕೆ, ವಿರೋಧ ವ್ಯಕ್ತವಾಗಿತ್ತು. ಬಿಜೆಪಿ ಯಾವತ್ತಿಗೂ ಜನರ ಮಧ್ಯೆ ದ್ವೇಷವನ್ನು ಹೆಚ್ಚಿಸುತ್ತದೆ, ಅಲ್ಲದೆ ಮೋದಿಯವರು ಇದೀಗ ಭಾರತದಲ್ಲಿ ಗಾಂಧಿಯವರ ನೆನಪು ಮರೆತುಹೋಗುವಂತೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಬ್ರಿಟಿಷರು ಮಾಡಿದ್ದನ್ನೇ ಇಂದು ಬಿಜೆಪಿ ಮಾಡುತ್ತಿದೆ. ಮಹಾತ್ಮಾ ಗಾಂಧಿಯವರು ಭಾರತ ದೇಶದ ಆತ್ಮವಿದ್ದಂತೆ. ಇಂತಹ ಆಕ್ಷೇಪಾರ್ಹ ಮತ್ತು ಅಸಂಬದ್ಧ ಹೇಳಿಕೆಗಳನ್ನು ಬಿಜೆಪಿ ನಾಯಕರು ಮತ್ತು ಸಚಿವರು ಮಾತ್ರ ನೀಡಲು ಸಾಧ್ಯ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಬಿಜೆಪಿ ಪ್ರತಿಕ್ರಿಯೆ: ಸಚಿವ ವಿಜ್ ಅವರ ಹೇಳಿಕೆಯಿಂದ ದೂರವುಳಿಯಲು ಬಿಜೆಪಿ ಬಯಸಿದೆ. ಮಹಾತ್ಮಾ ಗಾಂಧಿಯವರು ನಮ್ಮ ದೇಶದ ಲಾಂಛನವಿದ್ದಂತೆ.ಬಿಜೆಪಿ ಅವರ ಹೇಳಿಕೆಯನ್ನು ಖಂಡಿಸುತ್ತದೆ. ಇದು ಅವರ ವೈಯಕ್ತಿಕ ಹೇಳಿಕೆಯೇ ಹೊರತು ಪಕ್ಷದ ನಿಲುವಲ್ಲ ಎಂದು ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್ ತಿಳಿಸಿದ್ದಾರೆ.
ಮಹಾತ್ಮಾ ಗಾಂಧಿಯವರ ಮೊಮ್ಮಗ ತುಷಾರ್ ಗಾಂಧಿ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯೆ ನೀಡಿ, ಹಣವನ್ನು ಭ್ರಷ್ಟ ರಾಜಕೀಯ ನಾಯಕರು ಬಳಸುವ ರೀತಿ ಹೇಸಿಗೆ ಹುಟ್ಟಿಸುತ್ತದೆ. ಬಾಪು ಅವರ ಚಿತ್ರವನ್ನು ನೋಟುಗಳಿಂದ ತೆಗೆದುಹಾಕಿದರೆ ಒಳ್ಳೆಯದೇ ಎಂದು ಪ್ರತಿಕ್ರಿಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


