ಎನ್'ಕೌಂಟರ್ ಸ್ಥಳದಿಂದ ದೂರವಿರಿ: ಜನರಿಗೆ ಜಮ್ಮು-ಕಾಶ್ಮೀರ ಸರ್ಕಾರ ಸಲಹೆ
ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಕಠಿಣ ಸಂದೇಶ ರವಾನಿಸಿರುವ ಬೆನ್ನಲ್ಲೇ ಇದೀಗ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಕೂಡ ಜನರಿಗೆ ಸಲಹೆಗಳನ್ನು ನೀಡಿದ್ದು, ಎನ್'ಕೌಂಟರ್ ಸ್ಥಳದಿಂದ ದೂರುವಿರುವಂತೆ ಜನರಿಗೆ ಸೂಚನೆ ನೀಡಿದೆ ಎಂದು ಶುಕ್ರವಾರ ತಿಳಿದುಬಂದಿದೆ...

ಶ್ರೀನಗರ: ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಕಠಿಣ ಸಂದೇಶ ರವಾನಿಸಿರುವ ಬೆನ್ನಲ್ಲೇ ಇದೀಗ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಕೂಡ ಜನರಿಗೆ ಸಲಹೆಗಳನ್ನು ನೀಡಿದ್ದು, ಎನ್'ಕೌಂಟರ್ ಸ್ಥಳದಿಂದ ದೂರುವಿರುವಂತೆ ಜನರಿಗೆ ಸೂಚನೆ ನೀಡಿದೆ ಎಂದು ಶುಕ್ರವಾರ ತಿಳಿದುಬಂದಿದೆ.
ಭಾರತೀಯ ಸೇನಾ ಪಡೆ ಕೆಲ ಸೂಕ್ಷ್ಮ ಪ್ರದೇಶಗಳಲ್ಲಿ ಎನ್ ಕೌಂಟರ್ ನಡೆಸುತ್ತಿದ್ದು, ಈಗಾಗಲೇ ಸ್ಥಳಗಳನ್ನು ಜಮ್ಮು ಮತ್ತು ಕಾಶ್ಮೀರ ಸರ್ಕಾರ ಪಟ್ಟಿ ಮಾಡಿದೆ. ಇದರಂತೆ ಎನ್ ಕೌಂಟರ್ ನಡೆಸುತ್ತಿರುವ ಸ್ಥಳಗಳಲ್ಲಿ ಸಾರ್ವಜನಿಕರಿಗೆ ನಿರ್ಬಂಧ ಹೇರಲಾಗಿದ್ದು, ಕಾರ್ಯಾಚರಣೆ ನಡೆಸುತ್ತಿರುವ ಸ್ಥಳಗಳಿಗೆ ಜನರು ಪ್ರವೇಶ ಮಾಡಬಾರದು ಎಂದು ಈಗಾಗಲೇ ಜನರಿಗೆ ಸರ್ಕಾರ ಸಲಹೆ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಸರ್ಕಾರದ ಸಲಹೆ ಕುರಿತಂತೆ ಇಂಡಿನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿರುವ ಕಾಶ್ಮೀರ ವಿಭಾಗದ ಪೊಲೀಸ್ ಆಯುಕ್ತ ಬಸೀರ್ ಆಹ್ಮದ್ ಖಾನ್ ಅವರು, ಕಳೆದ ವರ್ಷ ಕೂಡ ಇದೇ ರೀತಿಯ ಸಲಹೆಗಳನ್ನು ನೀಡಲಾಗಿತ್ತು. ಕಾರ್ಯಾಚರಣೆ ನಡೆಯುತ್ತಿರುವ ಪ್ರದೇಶದಿಂದ ದೂರವಿರುವಂತೆ ಸೂಚನೆ ನೀಡಲಾಗಿತ್ತು. ಈಗಲೂ ಜನರಿಗೆ ಸಲಹೆಗಳು ಹಾಗೂ ಸೂಚನೆ ಗಳನ್ನು ನೀಡಲಾಗಿದೆ. ಕಾರ್ಯಾಚರಣೆ ನಡೆಯುತ್ತಿರುವ ಪ್ರದೇಶಗಳಲ್ಲಿ ಸೆಕ್ಷನ್ 144 ಜಾರಿ ಗೊಳಿಸಲಾಗಿತ್ತು. ಆದೇಶದ ವಿರುದ್ಧ ನಡೆಯುವವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ಕಾರ್ಯಾಚರಣೆ ಪ್ರದೇಶಗಳಲ್ಲಿ ನಡೆಯುವ ಕಲ್ಲು ತೂರಾಟದಂತಹ ಘಟನೆಗಳನ್ನು ತಡೆಯಲು ಈ ರೀತಿಯ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಕಾರ್ಯಾಚರಣೆ ಪ್ರದೇಶಗಳಿಂದ ಪ್ರತಿಭಟನೆ ಹಾಗೂ ಘರ್ಷಣೆಗಳು ಏರ್ಪಟ್ಟರೆ ಇದರಿಂದ ಉಗ್ರರು ಸುಲಭವಾಗಿ ತಪ್ಪಿಸಿಕೊಳ್ಳುವಂತಾಗುತ್ತದೆ. ಹೀಗಾಗಿಯೇ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಸೇನಾ ಪಡೆ ಕಾರ್ಯಾಚರಣೆ ನಡೆಸಲು ಮುಂದಾದಗೆಲ್ಲಾ ಪ್ರತಿಭಟನೆಗಳು, ಘರ್ಷಣೆಗಳು ಏರ್ಪಡುತ್ತವೆ. ಇದರಿಂದ ಕಾರ್ಯಾಚರಣೆ ಸಾಕಷ್ಟು ಸಮಸ್ಯೆಗಳನ್ನುಂಟು ಮಾಡುತ್ತವೆ ಎಂದು ತಿಳಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಹೇಳಿಕೆ ನೀಡಿದ್ದ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು, ಕಾರ್ಯಾಚರಣೆ ವೇಳೆ ಸ್ಥಳೀಯರು ವಿರೋಧ ವ್ಯಕ್ತಪಡಿಸುವುದರಿಂದ ಭದ್ರತಾ ಸಿಬ್ಬಂದಿಗಳ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಸ್ಥಳೀಯರು ಭಯೋತ್ಪಾದಕರಿಗೆ ತಪ್ಪಿಸಿಕೊಳ್ಳಲು ನೆರವು ಮಾಡಿಕೊಡುವಂತಹ ಘಟನೆಗಳೂ ನಡೆಯುತ್ತಿವೆ. ಸ್ಥಳೀಯ ಯುವಕರು ಪಾಕಿಸ್ತಾನ, ಐಎಸ್ಐಎಸ್ ಧ್ವಜಗಳನ್ನು ಹಿಡಿದು ಸೇನಾ ಕಾರ್ಯಾಚರಣೆಗೆ ಅಡ್ಡಿ ಪಡಿಸಿದರೆ ಮುಲಾಜಿಲ್ಲದೇ ಅವರನ್ನು ರಾಷ್ಟ್ರದ್ರೋಹಿ, ಭಯೋತ್ಪಾದಕರ ಕಾರ್ಯಕರ್ತರೆಂದು ಪರಿಗಣಿಸಲಾಗುತ್ತದೆ ಎಂದು ಕಠಿಣ ಸಂದೇಶವನ್ನು ರವಾನಿಸಿದ್ದರು.
ಈ ಹೇಳಿಕೆ ವಿರೋಧ ಪಕ್ಷಗಳು ಸಾಕಷ್ಟು ಟೀಕೆಗಳನ್ನು ವ್ಯಕ್ತಪಡಿಸಿದ್ದವು. ಅಲ್ಲದೆ, ಕಾಶ್ಮೀರ ಪ್ರತ್ಯೇಕತಾವಾದಿಗಳು ಕೂಡ ಟೀಕೆಗಳನ್ನು ವ್ಯಕ್ತಪಡಿಸಿದ್ದರು. ಜಮ್ಮು ಮತ್ತು ಕಾಶ್ಮೀರ ಲಿಬರೇಷನ್ ಫ್ರಂಟ್ ಮುಖ್ಯಸ್ಥ ಯಾಸಿನ್ ಮಲಿಕ್ ಮಾತನಾಡಿ, ಸೇನಾ ಮುಖ್ಯಸ್ಥ ಹೇಳಿಕೆ ರಾಜಕೀಯ ಅಪ್ರಬುದ್ಧತೆಯನ್ನು ತೋರಿಸುತ್ತದೆ. ಈ ರೀತಿಯ ಹೇಳಿಕೆ ಇಡೀ ಕಾಶ್ಮೀರಕ್ಕೆ ನೇರ ಬೆದರಿಕೆಯಾಗಿದೆ ಎಂದು ಹೇಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


