ದೇಶ

ವಿಶೇಷ ಕೋರ್ಟ್ ನ್ಯಾಯಮೂರ್ತಿಗಳ ಅನುಪಸ್ಥಿತಿ; ಶಶಿಕಲಾಗೆ ವರದಾನ?

ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ ಶಶಿಕಲಾಗೆ ಜೈಲು ಶಿಕ್ಷೆ ವಿಧಿಸಿದ್ದರೂ, ಶಶಿಕಲಾ ಜೈಲು ಶಿಕ್ಷೆ ತಡವಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ವಿಶೇಷ ಕೋರ್ಟ್ ನ್ಯಾಯಮೂರ್ತಿಗಳ ಅನುಪಸ್ಥಿತಿ; ಶಶಿಕಲಾಗೆ ವರದಾನ?
ಸಂಗ್ರಹ ಚಿತ್ರ
Published On :

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ ಶಶಿಕಲಾಗೆ ಜೈಲು ಶಿಕ್ಷೆ ವಿಧಿಸಿದ್ದರೂ, ಶಶಿಕಲಾ ಜೈಲು ಶಿಕ್ಷೆ ತಡವಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಸುಪ್ರೀಂ ಕೋರ್ಟ್ ಶಶಿಕಲಾಗೆ ಜೈಲು ಶಿಕ್ಷೆ ವಿಧಿಸಿರುವುದರಿಂದ ಅವರು ವಿಶೇಷ ನ್ಯಾಯಾಲಯದ ಮುಂದೆ ಹಾಜರಾಗಿ ಬಳಿಕ ಪೊಲೀಸರು ಅವರನ್ನು ವಶಕ್ಕೆ ಪಡೆಯಬೇಕು. ಆದರೆ ಪ್ರಸ್ತುತ ವಿಶೇಷ ನ್ಯಾಯಾಧೀಶ ಸ್ಥಾನ  ಖಾಲಿಯಾಗಿದ್ದು, ಈ ಹಿಂದೆ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ನ್ಯಾ. ಮೈಕಲ್ ಕುನ್ಹಾ ಅವರು ಹೈಕೋರ್ಟ್ ನ್ಯಾಯಾಧೀಶರಾಗಿ ನೇಮಕವಾಗಿದ್ದಾರೆ. ಕುನ್ಹಾ ಬಳಿಕ ಅವರ ಸ್ಥಾನಕ್ಕೆ ಈ ವರೆಗೂ ಬೇರಾವುದೇ  ನ್ಯಾಯಾಧೀಶರ ನೇಮಕವಾಗಿಲ್ಲ. ಈ ನಡುವೆಯೇ ಸುಪ್ರೀಂಕೋರ್ಟ್ ತೀರ್ಪು ನೀಡಿದೆ.

ಹೀಗಾಗಿ ಶಶಿಕಲಾ, ನಟರಾಜನ್ ಮತ್ತು ಇಳವರಿಸಿ ಅವರು ಯಾರ ಮುಂದೆ ಹಾಜರಾಗಿ ಶರಣಾಗಬೇಕು ಎಂಬುದರ ಕುರಿತು ಅಸ್ಪಷ್ಟತೆ ಇದ್ದು, ಇನ್ನೆರಡು ದಿನದಲ್ಲಿ ಈ ಬಗ್ಗೆ ಸ್ಪಷ್ಟತೆ ದೊರೆಯಲಿದೆ ಎಂದು ಕಾನೂನು ತಜ್ಞರು  ಅಭಿಪ್ರಾಯಪಟ್ಟಿದ್ದಾರೆ.

ಇದೇ ಅಂಶವನ್ನು ತಿಳಿದಿರುವ ಶಶಿಕಲಾ ತಾವು ಜೈಲು ಪಾಲಾಗುವ ಮುನ್ನ ಪಕ್ಷದ ಪ್ರಮುಖ ಹುದ್ದೆಗಳಿಗೆ ತಮ್ಮ ಬೆಂಬಿಲಿತ ನಾಯಕರನ್ನೇ ನೇಮಿಸಲು ಗೋಲ್ಡನ್ ಬೇ ರೆಸಾರ್ಟ್ ನಲ್ಲಿ ಮೊಕ್ಕಾಂ ಹೂಡಿ ಸತತ ಸಭೆಗಳನ್ನು  ನಡೆಸುತ್ತಿದ್ದಾರೆ. ಅದರಂತೆ ತಮ್ಮ ಎದುರಾಳಿ ಪನ್ನೀರ್ ಸೆಲ್ವಂ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟನೆ ಮಾಡಿ ತಮ್ಮ ಬಣದಲ್ಲಿ ಗುರುತಿಸಿಕೊಂಡಿರುವ ಜಯಾ ಅವರ ಆಪ್ತ ಎಡಪ್ಪಾಡಿ ಕೆ ಪಳನಿ ಸ್ವಾಮಿ ಅವರನ್ನು  ಎಐಎಡಿಎಂಕೆ ಶಾಸಕಾಂಗ ಸಭೆಯ ನಾಯಕರನ್ನಾಗಿ ಆಯ್ಕೆ ಮಾಡಿದ್ದಾರೆ.

ಇನ್ನೆರಡು ದಿನದಲ್ಲಿ ಶಶಿಕಲಾ ನ್ಯಾಯಾಲಯಕ್ಕೆ ಶರಣಾಗುವ ಸಾಧ್ಯತೆ
ಏತನ್ಮಧ್ಯೆ ಶಶಿಕಲಾ ಇನ್ನರಡು ದಿನದಲ್ಲಿ ವಿಶೇಷ ನ್ಯಾಯಾಲಯದ ಮುಂದೆ ಹಾಜರಾಗಿ ಶರಣಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ. ಒಂದು ವೇಳೆ ಅವರು ಶರಣಾಗದಿದ್ದರೆ ಆಗ ಸುಪ್ರೀಂ ಕೋರ್ಟ್ ವಿಶೇಷ  ನ್ಯಾಯಾಲಯಕ್ಕೆ ನ್ಯಾಯಾಧೀಶರನ್ನು ನೇಮಕ ಮಾಡಿ ಅಥವಾ ಉಸ್ತುವಾರಿ ನ್ಯಾಯಾಧೀಶರನ್ನು ನೇಮಕ ಮಾಡಲಿದೆ. ಹೀಗೆ ನೇಮಕವಾಗುವ ನ್ಯಾಯಾಧೀಶರು ಶಶಿಕಲಾ ಅವರ ವಿರುದ್ಧ ಬಂಧನ ವಾರಂಟ್ ಜಾರಿ ಮಾಡುವ  ಮೂಲಕ ಅವರ ಬಂಧನಕ್ಕೆ ಕ್ರಮ ಕೈಗೊಳ್ಳಲ್ಲಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪಿನ ಪ್ರತಿ ವಿಶೇಷ ನ್ಯಾಯಾಲಯಕ್ಕೆ ತಲುಪಿದ ಬಳಿಕವೇ ಈ ಕಾರ್ಯಕ್ಕೆ ಚಾಲನೆ ದೊರೆಯಲಿದೆ.

ಯಾವುದೇ ಕಾರಣಕ್ಕೂ ಶಶಿಕಲಾಗೆ ಜಾಮೀನು ಇಲ್ಲ
ಇನ್ನು ಈ ಹಿಂದೆ ಶಶಿಕಲಾ ಅವರು ಸಲ್ಲಿಕೆ ಮಾಡಿದ್ದ ಎಲ್ಲ ಜಾಮೀನು ಅರ್ಜಿಗಳನ್ನೂ ಸುಪ್ರೀಂ ಕೋರ್ಟ್ ತಿರಸ್ಕರಿಸಿರುವ ಕಾರಣ ತೀರ್ಪು ಬಂದ ಬಳಿಕ ಶಶಿಕಲಾ ಅವರಿಗೆ ಯಾವುದೇ ರೀತಿಯ ಜಾಮೀನು ದೊರೆಯುವುದಿಲ್ಲ ಎಂದು  ಕಾನೂನು ತಜ್ಞರು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.